ಡಾಲಿ ಧನಂಜಯ್ ಮತ್ತು ತೆಲುಗಿನ ಸತ್ಯದೇವ್ ಜೊತೆಯಾಗಿ ನಟಿಸುತ್ತಿರುವ, ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿವೀಲ್ ಆಗಿದೆ.
‘ಪೆಂಗ್ವಿನ್’ ಚಿತ್ರವನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಈಶ್ವರ್ ಕಾರ್ತಿಕ್ ಸತ್ಯದೇವ್ ಹಾಗೂ ಕನ್ನಡದ ಡಾಲಿ ಧನಂಜಯ ಅವರನ್ನು ಪ್ರಧಾನ ಪಾತ್ರಗಳಾಗಿ ಇಟ್ಟುಕೊಂಡು ‘ಜೀಬ್ರಾ’ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾವನ್ನು ತೆರೆಗೆ ತರಲು ಸಿದ್ದರಾಗಿದ್ದಾರೆ.
ಈಗಾಗಲೇ ಸಿನಿಮಾದ ಚಿತ್ರೀಕರಣ 50 ದಿನಗಳ ಮೊದಲ ಹಂತವಾಗಿ ನಡೆದಿದ್ದು,ಬಾಕಿ ಉಳಿದಿರುವ ಚಿತ್ರೀಕರಣವನ್ನು ಹೈದರಾಬಾದ್, ಕೊಲ್ಕತ್ತಾ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ಈ ಸಿನಿಮಾಕ್ಕೆ ಕೆಜಿಎಫ್ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರು ಅವರು ಸಂಗೀತ ನೀಡಲಿದ್ದಾರೆ.
‘ಚಿತ್ತಂಡಕ್ಕೆ ರವಿ ಬಸ್ರೂರು ಸೇರ್ಪಡೆಯಾಗಿರುವ ವಿಷಯ ಕುರಿತು ಮಾತನಾಡಿರುವ ನಿರ್ಮಾಪಕರಾದ ಬಾಲಸುಂದರಂ ಮತ್ತು ಪದ್ಮಜಾ ರೆಡ್ಡಿ, ‘ರವಿ ಬಸ್ರೂರು ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವು ಈ ಚಿತ್ರದ ಹೈಲೈಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಚಿತ್ರದ ಆತ್ಮವನ್ನು ತಮ್ಮ ಸಂಗೀತದ ಮೂಲಕ ಅದ್ಭುತವಾಗಿ ಎತ್ತಿಹಿಡಿಯಲಿದ್ದಾರೆ’ ಎಂದು ಹೇಳಿದ್ದಾರೆ.
‘ಜೀಬ್ರಾ’ ಚಿತ್ರದಲ್ಲಿ ಧನಂಜಯ ಮತ್ತು ಸತ್ಯದೇವ್ ಜೊತೆಗೆ ‘ಕಟ್ಟಪ್ಪ’ ಖ್ಯಾತಿಯ ಸತ್ಯರಾಜ್, ಸುನೀಲ್ ಮುಂತಾದವರು ನಟಿಸುತ್ತಿದ್ದಾರೆ. ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣ ಮತ್ತು ಅನಿಲ್ ಕ್ರಿಶ್ ಅವರ ಸಂಕಲನ ಈ ಚಿತ್ರಕ್ಕಿದೆ.

