ರಾಜಕುಮಾರ್ ಅವರ ಕುಟುಂಬ ಸಿನಿಮಾರಂಗಕ್ಕೆ ನೀಡುತ್ತಿರೋ ಕಲಾಸೇವೆಗೆ, ಜನರು ಆ ಕುಟುಂಬವನ್ನ ‘ದೊಡ್ಮನೆ ಕುಟುಂಬ’ ಎಂದು ಹೆಮ್ಮೆಯಿಂದ, ಪ್ರೀತಿಯಿಂದ ಕರೆಯುತ್ತಾರೆ. ಆ ಕುಟುಂಬಕ್ಕೆ ಜನರ ಮೇಲಿರುವಂತಹ ಅಭಿಮಾನವಾಗಲಿ, ನಮ್ಮ ಜನರಿಗೆ ಆ ಕುಟುಂಬದ ಮೇಲಣ ಅಭಿಮಾನವಾಗಲಿ ಮಾತಿನಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ ಎನ್ನಬಹುದು. ಅಣ್ಣಾವ್ರು ವರನಟ ಡಾ| ರಾಜಕುಮಾರ್ ಹಾಗು ಡಾ| ಪಾರ್ವತಮ್ಮ ರಾಜಕುಮಾರ್ ಅವರಿಂದ ಆರಂಭವಾಗಿ ಅವರ ಮಕ್ಕಳಾದ ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಹಾಗು ರಾಘವೇಂದ್ರ ರಾಜಕುಮಾರ್ ಅವರಿಂದ ಬೆಳೆದು, ಇದೀಗ ವಿನಯ್ ರಾಜಕುಮಾರ್, ಯುವ ರಾಜಕುಮಾರ್ ಸೇರಿದಂತೆ ಅವರ ಕುಟುಂಬದ ಯುವ ಕುಡಿಗಳಿಂದ ಕನ್ನಡ ಚಿತ್ರರಂಗದೆಡೆಗಿನ ಕೊಡುಗೆ ಮುಂದುವರಿಯುತ್ತ ಬಂದಿದೆ. ಇದೀಗ ರಾಘವೇಂದ್ರ ರಾಜಕುಮಾರ್ ಅವರ ಎರಡನೇ ಪುತ್ರ ಯುವ ರಾಜಕುಮಾರ್ ಅವರ ಮೊದಲ ಸಿನಿಮಾದ ಶೀರ್ಷಿಕೆ ಇಂದು(ಮಾರ್ಚ್ 3) ಅಧಿಕೃತವಾಗಿ ಬಿಡುಗಡೆಯಾಗಿದೆ. ಜೊತೆಗೆ ಚಿತ್ರದ ಬಿಡುಗಡೆಯ ದಿನಾಂಕವನ್ನ ಕೂಡ ಚಿತ್ರತಂಡ ಹೊರಹಾಕಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಸಿನಿಮಾಗೆ ಇಟ್ಟಿರುವ ಬಿರುದು, “ಯುವ”.
‘ಯುವ’ ಎಂಬ ಹೆಸರು ಕೇಳುಗನಲ್ಲಿ, ನೋಡುಗನಲ್ಲಿ ಹೊಸ ಉತ್ಸಾಹ ತುಂಬುವಂತದ್ದು. ಹೆಸರಾಂತ ನಿರ್ದೇಶಕರಾದ, ಕನ್ನಡಕ್ಕೆ ‘ರಾಜಕುಮಾರ’,’ಯುವರತ್ನ’ದಂತಹ ಹಿಟ್ ಸಿನೆಮಾಗಳನ್ನು ನೀಡಿರುವ ಸಂತೋಷ್ ಅನಂದ್ ರಾಮ್ ಅವರ ಸೃಷ್ಟಿ ಈ ‘ಯುವ’ ಸಿನಿಮಾ. ಕನ್ನಡದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲಂಸ್’ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರು ಇದರ ನಿರ್ಮಾತೃ. ಬಹಳ ಹಿಂದೆಯೇ ಚಿತ್ರದ ಘೋಷಣೆಯಾಗಿದ್ದರು, ಚಿತ್ರೀಕರಣವಾಗಲಿ, ಶೀರ್ಷಿಕೆಯಾಗಲಿ ಎಲ್ಲೂ ಸದ್ದು ಮಾಡಿರಲಿಲ್ಲ. ಇದೀಗ ಟೈಟಲ್ ಘೋಷಣೆಯ ಟೀಸರ್ ಒಂದರ ಮೂಲಕ ‘ಯುವ’ ಸಿನಿಮಾ ಅಧಿಕೃತವಾಗಿ ಅನಾವರಣಗೊಂಡಿದೆ.
‘ಯುವ’ ಸಿನಿಮಾದ ಶೀರ್ಷಿಕೆ ಅನಾವರಣ ಹಾಗು ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಭವ್ಯವಾಗಿ ನಡೆದಿದೆ. ಚಿತ್ರದ ಮೊದಲ ದೃಶ್ಯಕ್ಕೆ ಶ್ರೀಮತಿ ಶೈಲಜಾ ವಿಜಯ್ ಕಿರಗಂದೂರ್ ಅವರು ಕ್ಲಾಪ್ ಮಾಡಿದರೆ, ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕ್ಯಾಮೆರಾ ಚಾಲನೆ ಮಾಡಿದರು. ಜೊತೆಗೆ ಕರುನಾಡ ಚಕ್ರವರ್ತಿ ಡಾ| ಶಿವರಾಜಕುಮಾರ್ ಅವರು ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದರು. ಈ ಸಂಧರ್ಭದಲ್ಲಿ ಈ ಎಲ್ಲಾ ಗಣ್ಯರ ಜೊತೆಗೆ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು, ಛಾಯಾಗ್ರಾಹಕರಾದ ಶ್ರೀಶ ಕುದುವಳ್ಳಿ ಅವರು, ಹಾಗೆಯೇ ದೊಡ್ಮನೆ ಕುಟುಂಬದ ಅನೇಕ ಗಣ್ಯರೂ, ಹಿತೈಷಿಗಳು ಹಾಜರಿದ್ದರು.
ಹೊಂಬಾಳೆ ಫಿಲಂಸ್ ಹಾಗು ಸಂತೋಷ್ ಆನಂದ್ ರಾಮ್ ಅವರು ಸೇರಿ ಮಾಡುತ್ತಿರುವ ನಾಲ್ಕನೇ ಚಿತ್ರವಾದ ಈ ಸಿನಿಮಾ ಪಕ್ಕ ಫ್ಯಾಮಿಲಿ-ಆಕ್ಷನ್ ಎಂಟರ್ಟೈನರ್ ಸಿನಿಮಾವಾಗಿ ಮೂಡಿಬರುವ ಸಾಧ್ಯತೆಯಿದೆ. ಟೀಸರ್ ನಲ್ಲಿ ಗ್ಯಾಂಗ್ ವಾರ್ ಗಳ ಬಗ್ಗೆಯೂ ಮಾತುಗಳು ಕೇಳಿಬರುತ್ತವೆ. ಎಲ್ಲರನ್ನ ಎದುರಿಸಿ ನಿಲ್ಲೋ ಧೈರ್ಯವಂತ, ಬಲಿಷ್ಠನಾಗಿ ‘ಯುವ’ರಾಜಕುಮಾರ್ ಅವರನ್ನ ತೋರಿಸಲಾಗಿದೆ. ಸಿನಿಮಾಗೆ ಅಜನೀಶ್ ಲೋಕನಾಥ್ ಅವರ ಸಂಗೀತ ಇರಲಿದೆ. ಇದೇ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ ಚಿತ್ರದ ಚಿತ್ರೀಕರಣ ಆರಂಭವಾಗೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಟೀಸರ್ ನ ಕೊನೆಯಲ್ಲಿ ಸಿನಿಮಾವನ್ನ 2023ರ ವರ್ಷಾಂತ್ಯಕ್ಕೆ, ಅಂದರೆ 2023 ಡಿಸೆಂಬರ್ 22ರಂದು ಬಿಡುಗಡೆ ಮಾಡಲಿದ್ದೇವೆ ಎಂದೂ ಹೇಳಿದ್ದಾರೆ. “ಯುವ ಪರ್ವ ಆರಂಭ” ಎಂಬ ಸಾಲಿನ ಜೊತೆಗೆ ಚಿತ್ರದ ಶೀರ್ಷಿಕೆಯನ್ನ ಬಿಡುಗಡೆ ಮಾಡಲಾಗಿದೆ. ಒಟ್ಟಿನಲ್ಲಿ ರಾಜ್ ಕುಟುಂಬದ ಹೊಸ ಕುಡಿಯ ಸಿನಿಮಾರಂಗ ಪ್ರವೇಶಕ್ಕೆ ಇಡೀ ರಾಜ್ಯವೇ ಕಾಯುತ್ತಿದೆ. ಈಗಷ್ಟೇ ಘೋಷಿತಗೊಂಡ ‘ಯುವ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚೇ ಇದೆ.

