ಸೌತ್‌ನ ಸ್ಟಾರ್ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಇಷ್ಟು ವರ್ಷ ಸೆಲೆಬ್ರಿಟಿಗಳಿಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದರು. ತೆರೆಯ ಹಿಂದೆ ಮೋಡಿ ಮಾಡುತ್ತಿದ್ದ ಅವರೀಗ, ತೆರೆಯ ಮುಂದೆ ಮಿಂಚಲಿದ್ದಾರೆ.


ಹೌದು ಜಾನಿ ಮಾಸ್ಟರ್ “ಯಥಾ ರಾಜ ತಥಾ ಪ್ರಜಾ” ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದ್ದು, ತೆಲುಗು ನಟ ಶರ್ವಾನಂದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ನಟ ಆಯುಷ್ ಶರ್ಮಾ ಕ್ಯಾಮರಾಕ್ಕೆ ಚಾಲನೆ ನೀಡಿ ಚಿತ್ರ ತಂಡಕ್ಕೆ ಶುಭ ಕೋರಿದರು.


ಈ ಹಿಂದೆ “ಸಿನಿಮಾ ಬಂಡಿ” ಮೂಲಕ ಗುರುತಿಸಿಕೊಂಡ ವಿಕಾಸ್ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರಷ್ಟಿ ವರ್ಮಾ ನಾಯಕಿಯಾಗಿದ್ದಾರೆ.
ಶ್ರೀನಿವಾಸ ವಿಟ್ಟಲ ಈ ನಿರ್ದೇಶಿಸಲಿರುವ ಈ ಚಿತ್ರವನ್ನು ಹರೇಶ್ ಪಟೇಲ್ ಜತೆ ಸೇರಿ ನಿರ್ದೇಶಕರೂ ಬಂಡವಾಳ ಹೂಡುತ್ತಿದ್ದಾರೆ.




ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ಶ್ರೀನಿವಾಸ್ ವಿಟ್ಟಲ, “ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಹರೇಶ್ ಪಟೇಲ್ ಅವರೊಟ್ಟಿಗೆ ಸೇರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಈ ಕಥೆಗೆ ಜಾನಿ ಮಾಸ್ಟರ್ ಸೂಟ್ ಆಗ್ತಾರೆ. ಆ ಕಾರಣಕ್ಕೆ ಅವರಿಗೂ 20 ನಿಮಿಷದಲ್ಲಿ ಸಿನಿಮಾದ ಕಥೆ ಹೇಳಿದೆ. ಕಥೆ ಕೇಳಿ ಅವರಿಂದಲೂ ಓಕೆ ಎಂಬ ಉತ್ತರ ಸಿಕ್ಕಿತು. ಈ ಹಿಂದೆ ಟಿವಿಯಲ್ಲಿ ಕೇವಲ 10 ನಿಮಿಷ ಮಾತ್ರ ರಾಜಕೀಯ ಸುದ್ದಿಗಳು ಪ್ರಸಾರವಾಗುತ್ತಿದ್ದವು.
ಇದೀಗ ಅದು 24/7 ಆಗಿದೆ. ಹಾಗಾಗಿ ನಮ್ಮ ಈ ಸಿನಿಮಾ ಸಹ ರಾಜಕೀಯ ಹಿನ್ನೆಲೆಯಲ್ಲಿ ಮೂಡಿಬರಲಿರುವ ಕಮರ್ಷಿಯಲ್ ಸಿನಿಮಾ. ಸಮಾಜಕ್ಕೆ ಮಹತ್ವದ ಸಂದೇಶವೂ ಇದರಲ್ಲಿದೆ” ಎಂದರು.
ತೆಲುಗು,ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿದ್ದು, ರಾಧನ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸೆ.15 ರಿಂದ ಚಿತ್ರೀಕರಣ ಆರಂಭವಾಗಲಿದೆ.


ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಮಾತಾನಾಡುವ ಜಾನಿ ಮಾಸ್ಟರ್ ,”ಮೆಗಾಸ್ಟಾರ್ ಚಿರಂಜೀವಿ ಅವರ ಬರ್ತ್‌ಡೇ ದಿನದಂದೇ ನಮ್ಮ ಸಿನಿಮಾ ಮುಹೂರ್ತ ಕಂಡಿರುವುದು ಖುಷಿ ವಿಚಾರ. ಶ್ರೀನಿವಾಸ್ ಅವರು ಕಥೆ ಹೇಳಿದ ರೀತಿಯೇ ಚೆನ್ನಾಗಿತ್ತು. ಅದೇ ರೀತಿ ವಿಕಾಸ್ ನಟಿಸಿರುವ “ಸಿನಿಮಾ ಬಂಡಿ” ಸಿನಿಮಾ ನೋಡಿದ್ದೇನೆ.
ಇದೀಗ ಅವರೊಂದಿಗೆ ನಟಿಸುತ್ತಿದ್ದೇನೆ. ನಾಗೇಶ್ ಅವರೇ ಈ ಚಿತ್ರಕ್ಕೆ “ಯಥಾ ರಾಜ ತಥಾ ಪ್ರಜಾ” ಎಂಬ ಶೀರ್ಷಿಕೆ ನೀಡಿದ್ದಾರೆ. ಒಟ್ಟು ಮೂರು ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಲಿದೆ” ಎಂದಿದು ಹೇಳಿದರು.

