HomeNewsರಮಿಕ ಸೇನ್ ಗೆ 'ಕೆಜಿಎಫ್ 3' ಗೆ ಸಿದ್ದರಾಗಿ ಎಂದರಾ ರಾಕಿ ಭಾಯ್!!

ರಮಿಕ ಸೇನ್ ಗೆ ‘ಕೆಜಿಎಫ್ 3’ ಗೆ ಸಿದ್ದರಾಗಿ ಎಂದರಾ ರಾಕಿ ಭಾಯ್!!

ಕನ್ನಡ ಚಿತ್ರರಂಗದ ಹೆಮ್ಮೆ, ಇಡೀ ಪ್ರಪಂಚವನ್ನೇ ನಮ್ಮ ನಾಡಿನ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದಂತಹ ಸಿನಿಮಾ ‘ಕೆಜಿಎಫ್’. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಸಿದ್ದವಾದ ಈ ಚಿತ್ರ ಪ್ರಶಾಂತ್ ನೀಲ್ ಅವರ ನಿರ್ದೇಶನ ಹಾಗು ರಾಕಿಂಗ್ ಸ್ಟಾರ್ ಯಶ್ ಅವರ ನ್ಯಾಯ ಒದಗಿಸಿದ ಅಭಿನಯದಿಂದಾಗಿ ಬಹುಮೆಚ್ಚಿದ ಚಿತ್ರವಾಗಿ ಮೂಡಿಬಂತು. ಇದೆ ಏಪ್ರಿಲ್ 14ರಂದು ಕೆಜಿಎಫ್ ನ ಎರಡನೇ ಅಧ್ಯಾಯ, ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಪೂರ್ಣಗೊಂಡಿತು. ಈ ದಿನವನ್ನ ಇಡೀ ದೇಶದ ಸಿನಿಪ್ರೇಮಿಗಳು ತಮ್ಮ ದಿನವೇ ಎಂಬಂತೆ ಆಚರಿಸಿದ್ದರು. ಎಲ್ಲೆಡೆ ಎಲ್ಲರೂ ಕೆಜಿಎಫ್ ಪ್ರಪಂಚವನ್ನ ಹಾಡಿ ಹೊಗಳುತ್ತಿದ್ದರು. ಚಿತ್ರತಂಡ ಕೂಡ ತಮ್ಮ ಈ ಅಭೂತಪೂರ್ವ ಸಿನಿಮಾದ ವಾರ್ಷಿಕೋತ್ಸವದ ಸಂತಸದಲ್ಲಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿತ್ತು. ಸುಮ್ಮನೆ ಯಾವುದೋ ಒಂದು ವಿಡಿಯೋ ಮಾಡದೇ, ಆ ವಿಡಿಯೋದ ಮೂಲಕ ಸಿನಿಪ್ರೇಮಿಗಳಲ್ಲಿ ಕೆಜಿಎಫ್ ನ ಮೂರನೇ ಅಧ್ಯಾಯದ ಬಗ್ಗೆ ಸುಳಿ ಏಳುವಂತಹ ಸುಳಿವು ನೀಡಿತ್ತು. ಇದೀಗ ಎಲ್ಲೆಡೆ ಕೆಜಿಎಫ್ 3 ಸದ್ದು ಮಾಡುತ್ತಿದೆ. ಎಲ್ಲಿತನಕ ಅಂದರೇ, ಸ್ವತಃ ಕೆಜಿಎಫ್ ನ ರಮಿಕ ಸೇನ್ ಮಾತಾಡುವಷ್ಟು!

ಕೆಜಿಎಫ್ ಚಾಪ್ಟರ್ 2 ಬಿಡುಗಡೆಯದಾಗಿನಿಂದ ಸುದ್ದಿಯಲ್ಲಿರುವ ವಿಚಾರ ಈ ಕೆಜಿಎಫ್ ಚಾಪ್ಟರ್ 3. ಅಲ್ಲಿಯವರೆಗೂ ಯಾರೂ ಅಂದುಕೊಂಡಿರದ ಈ ಮೂರನೇ ಅಧ್ಯಾಯದ ಬಗ್ಗೆ, ತಮ್ಮ ಸಿನಿಮಾದಲ್ಲೇ ಸುಳಿವು ನೀಡಿತ್ತು ಚಿತ್ರತಂಡ. ಅಷ್ಟೇ ಅಲ್ಲದೇ ಕೆಜಿಎಫ್ ಚಾಪ್ಟರ್ 2ನ ಬಳಿಕ, ಕೆಜಿಎಫ್ ನ ಮೂರನೇ ಅಧ್ಯಾಯ ಬರಲಿದೆ, ಆದರೆ ಕೊಂಚ ತಡವಾಗಿ ಎಂದು ಕೂಡ ಹೇಳಿದ್ದರು. ಇದೀಗ ವಾರ್ಷಿಕೋತ್ಸವದ ಅಂಗವಾಗಿ ಹೊರಬಿಟ್ಟ ವಿಡಿಯೋ ದಲ್ಲಿ ಕೂಡ ಮೂರನೇ ಅಧ್ಯಾಯದ ಬಗ್ಗೆ ದನಿ ಎತ್ತಿದ್ದಾರೆ. ಕುತೂಹಲಕಾರಿ ಪ್ರಶ್ನೆಗಳನ್ನ ಕೇಳುತ್ತ, ಕೆಜಿಎಫ್ ಚಾಪ್ಟರ್ 3 ಬರುತ್ತಿರುವ ಸುಳಿವು ನೀಡಿದ್ದಾರೆ. ಸದ್ಯ ಈ ಬಗ್ಗೆ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರಮಿಕ ಸೇನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಬಾಲಿವುಡ್ ನ ಹೆಸರಾಂತ ನಟಿ ರವೀನ ಟಂಡನ್ ತುಟಿ ಬಿಚ್ಚಿದ್ದಾರೆ.

ಕೆಜಿಎಫ್ ಚಾಪ್ಟರ್ 2 ವಾರ್ಷಿಕೋತ್ಸವದಂದು ಚಿತ್ರತಂಡದವರು ಒಬ್ಬರಿಗೊಬ್ಬರು ವಿಶ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರವೀನ ಟಂಡನ್ , “ನನಗೆ ಮೊದಲು ವಿಶ್ ಮಾಡಿದ್ದು, ಯಶ್ ಪತ್ನಿ ರಾಧಿಕಾ ಪಂಡಿತ್. ಅವರು ಆ ದಿನ ಬೆಳಿಗ್ಗೆಯೇ ಕರೆ ಮಾಡಿ ಶುಭಾಶಯ ತಿಳಿಸಿದರು. ಸಂಜೆ ಯಶ್ ಕರೆ ಮಾಡಿ ವಾರ್ಷಿಕೋತ್ಸವದ ವಿಶ್ ಮಾಡಿದರು. ಜೊತೆಗೆ ಕೆಜಿಎಫ್ ನ ಚಾಪ್ಟರ್ 3ಗೆ ಸಿದ್ದರಾಗುವಂತೆ ಕೂಡ ಹೇಳಿದರು. ನಾನು ಅದಕ್ಕೆ ನನ್ನನ್ನು ಆರಂಭದಲ್ಲೇ ಸಾಯಿಸಬೇಡಿ ಎಂದೇ. ಹೀಗೆ ಇಬ್ಬರೂ ತಮಾಷೆಯಾಗಿ ಮಾತನಾಡಿ ಮುಗಿಸಿದೆವು. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಕರೆ ಮಾಡಿದ್ದರು. ಚಾಪ್ಟರ್ 2ನಲ್ಲಿ ತುಂಬಾ ಅದ್ಭುತವಾಗಿ ನಟಿಸಿದ್ದೀರಾ ಎಂದೂ ಹೇಳಿದರು. ಹಾಗಾಗಿ ಕೆಜಿಎಫ್ 3 ಬರುತ್ತದೆ. ಅದಂತೂ ಖಚಿತ. ಆದರೆ ಯಾವಾಗ ಎಂಬ ಪ್ರಶ್ನೆಗೆ ನಮ್ಮ ಬಳಿಯೂ ಉತ್ತರವಿಲ್ಲ” ಎನ್ನುತ್ತಾರೆ ರವೀನ.

ಕೆಜಿಎಫ್ ಎಂಬ ಹೆಸರಿಗೆ ಸದ್ಯ ಚಿತ್ರರಂಗದಲ್ಲಿ ಎಲ್ಲಿಲ್ಲದ ತೂಕವಿದೆ. ಕೆಜಿಎಫ್ ಚಾಪ್ಟರ್ 3 ಬಗ್ಗೆ ಎಲ್ಲೆಡೆ ಬಾರಿ ನಿರೀಕ್ಷೆ ಹಾಗು, ಅಭಿಮಾನಿಗಳ ಅಭಿಪ್ರಾಯಗಳು, ಅನಲಿಸಿಸ್ ಗಳು ಓಡಾಡುತ್ತಲೇ ಇವೆ. ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಕೂಡ ಈ ವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅದಕ್ಕೂ ಕೂಡ ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಅಲ್ಲಲ್ಲಿ ಕಂಡುಬರುವ, ಕೇಳಿಬರುವ ಈ ಕೆಜಿಎಫ್ ಚಾಪ್ಟರ್ 3ರ ಸುದ್ದಿಯೇ ಸಿನಿಪ್ರೇಮಿಗಳನ್ನ ಸಂತಸದಲ್ಲಿ ಇಡುತ್ತಿದೆ.

RELATED ARTICLES

Most Popular

Share via
Copy link
Powered by Social Snap