ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ಇಂದಿಗೆ ಒಂದು ವರ್ಷ ಕಳೆಯಿತು. ಆದರೆ ಕೆಜಿಎಫ್ ನ ರಾಕಿ ಭಾಯ್ ಯಶ್ ಅವರ ಮುಂದಿನ ಸಿನಿಮಾದ ಬಗೆಗೆ ಒಂದು ಸಣ್ಣ ಅಧಿಕೃತ ಮಾಹಿತಿ ಕೂಡ ಈ ವರೆಗೂ ಬಂದಿಲ್ಲ. ‘Yash19’ ಎಂಬ ತಾತ್ಕಾಲಿಕ ಹೆಸರು ಹೊತ್ತಿರುವ ಈ ಸಿನಿಮಾದ ಅಪ್ಡೇಟ್ ಗಾಗಿ ಕಾಯುತ್ತಿರುವವರು ಅಸಂಖ್ಯ ಸಿನಿಮಾಪ್ರೇಮಿಗಳು. ಆದರೆ ಯಶ್ ಅವರು ಮಾತ್ರ ಮೌನವಾಗಿಯೇ ಇದ್ದು, ಕೇಳಿದಾಗ ಮಾತ್ರ “ದೊಡ್ಡದಾಗಿ, ಹೊಸದಾಗಿ ಏನೋ ಮಾಡುತ್ತಿದ್ದೇವೆ. ಸ್ವಲ್ಪ ಸಮಯ ಹೆಚ್ಚಾಗೆ ಹಿಡಿಯುತ್ತಿದೆ. ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇನೆ” ಎನ್ನುತ್ತಿದ್ದಾರೆ.
ಈ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಲೇ ಇವೆ. ಸದ್ಯ ಇಂತದ್ದೇ ಒಂದು ಹೊಸ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರು ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿನ ಸರ್ಕಾರಿ ಅಧಿಕಾರಿಯೊಬ್ಬರನ್ನ ಭೇಟಿಯಾಗಿದ್ದಾರೆ. ಅವರ ಜೊತೆಗೇ ಶ್ರೀಲಂಕಾದಲ್ಲಿ ಚಿತ್ರೀಕರಣ ನಡೆಸುವುದರ ಬಗೆಗೆ ಮಾತುಕತೆ ನಡೆಸಿದ್ದಾರೆ.
ಶ್ರೀಲಂಕಾ ಸರ್ಕಾರದಲ್ಲಿ ‘ಬಿಓಐ (BOI)’ ಎಂಬ ಸಂಸ್ಥೆಯೊಂದಿದೆ. ಶ್ರೀಲಂಕಾ ರಾಷ್ಟ್ರದಲ್ಲಿ ಹಣ ಹೂಡಿಕೆ ಅಥವಾ ಯಾವುದೇ ಕಮರ್ಷಿಯಲ್ ಕೆಲಸಗಳನ್ನ ಮಾಡುವುದಾದರೆ ಈ ಸಂಸ್ಥೆಯನ್ನ ಸಂಪರ್ಕಿಸಬೇಕಾಗುತ್ತದೆ. BOI ಎಂದರೆ ಬೋರ್ಡ್ ಆಫ್ ಇನ್ವೆಸ್ಟ್ ಮೆಂಟ್(Board Of Investment) ಆಫ್ ಶ್ರೀಲಂಕಾ. ಸದ್ಯ ರಾಕಿ ಭಾಯ್ ಯಶ್ ಅವರು ಈ ಸಂಸ್ಥೆಯ ಅಧ್ಯಕ್ಷರಾದ ದಿನೇಶ್ ವೀರಕ್ಕೋಡಿ ಅವರನ್ನು ಭೇಟಿ ಮಾಡಿದ್ದಾರೆ. ಈ ವಿಚಾರವನ್ನ ಯಶ್ ಅವರ ಫೋಟೋ ಒಂದರ ಜೊತೆಗೇ ದಿನೇಶ್ ವೀರಕ್ಕೋಡಿ ಅವರು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹೇಳಿರುವ ಪ್ರಕಾರ ಯಶ್ ಅವರು, ದಿನೇಶ್ ವೀರಕ್ಕೋಡಿ ಅವರನ್ನ ಭೇಟಿಯಾಗಿ ಶ್ರೀಲಂಕಾ ರಾಷ್ಟ್ರದಲ್ಲಿ ಚಿತ್ರೀಕರಣ ನಡೆಸುವುದರ ಬಗ್ಗೆ ಮಾತನಾಡಿದ್ದಾರೆ. ಒಪ್ಪಿಗೆ ಕೊರಿದ್ದಾರೆ ಎಂದಿದ್ದಾರೆ. ಹಾಗಾದರೆ ‘Yash19’ ಅನ್ನು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲಾಗುತ್ತದೆಯೇ? ಹೇಗಿರಲಿದೆ ಈ ಸಿನಿಮಾ? ಆಕ್ಷನ್? ಥ್ರಿಲರ್? ಮೂಲಗಳ ಪ್ರಕಾರ ಇದೊಂದು ಆಕ್ಷನ್ ಥ್ರಿಲರ್ ಆಗಿರಲಿದೆ ಎನ್ನಲಾಗುತ್ತಿದೆ. ಆದರೆ ಈ ಎಲ್ಲಾ ನಿರೀಕ್ಷೆಗಳಿಗೆ, ಪ್ರಶ್ನೆಗಳಿಗೇ ಉತ್ತರ ನೀಡಲು, ಯಶ್ ಅವರಿಂದಷ್ಟೇ ಸಾಧ್ಯ. ‘Yash19’ ಅಧಿಕೃತ ಘೋಷಣೆಗಾಗಿ ಕಾದು ನೋಡಬೇಕಷ್ಟೆ.

