HomeNewsಕೊನೆಗೂ ಬಂತಾ ಗುಡ್ ನ್ಯೂಸ್? 'ಯಶ್19' ಘೋಷಣೆಗೆ ಮುಹೂರ್ತ ಫಿಕ್ಸ್!?

ಕೊನೆಗೂ ಬಂತಾ ಗುಡ್ ನ್ಯೂಸ್? ‘ಯಶ್19’ ಘೋಷಣೆಗೆ ಮುಹೂರ್ತ ಫಿಕ್ಸ್!?

ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಇಡೀ ಪ್ರಪಂಚಕ್ಕೆ ಪರಿಚಿತವಾಗಿರುವಂತಹ ಸ್ಟಾರ್ ನಟ. ಕೆಜಿಎಫ್ ಸಿನಿಮಾಗಳ ನಂತರ ಇಡೀ ಪ್ರಪಂಚದ ಸಿನಿಪ್ರೇಮಿಗಳೇ ಕಾಯುತ್ತಿದ್ದಾರೆ ಎಂದರೂ ತಪ್ಪಾಗದು. ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆಯಾಗಿ ಒಂದು ವರ್ಷವೇ ಕಳೆಯುತ್ತಾ ಬಂದರೂ ಯಶ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಯಾವ ಒಂದಿಂಚಿನ ಮಾಹಿತಿಯನ್ನೂ ಇದುವರೆಗೆ ಬಿಟ್ಟುಕೊಟ್ಟಿಲ್ಲ. ಅವರ ಅಭಿಮಾನಿಗಳು ಯಶ್ ಅಭಿನಯದ 19ನೇ ಸಿನಿಮಾವಾಗುವುದರಿಂದ ಇನ್ನು ಏನೂ ತಿಳಿಯದ ಈ ಹೊಸ ಚಿತ್ರಕ್ಕೆ ‘ಯಶ್19’ ಎಂದು ಹೆಸರಿಟ್ಟು, ಒಂದು ದೊಡ್ಡ ಅಪ್ಡೇಟ್ ಗಾಗಿ ಕಾಯುತ್ತಲಿದ್ದರು.

ನಟ ಯಶ್ ಅವರು ಕೂಡ “ಸ್ವಲ್ಪ ದೊಡ್ಡದಾಗಿ, ಒಂದೊಳ್ಳೆ ಔಟ್ ಪುಟ್ ಕೊಡುವ ನಿಟ್ಟಿನಲ್ಲಿ ಸಮಯ ಜಾಸ್ತಿ ಆದರೂ ಪರವಾಗಿಲ್ಲ, ಕೆಲಸ ಸರಿಯಾಗಬೇಕು ಎಂಬ ನಿಟ್ಟಿನಲ್ಲಿ ಸ್ವಲ್ಪ ತಾಳ್ಮೆಯಿಂದಲೇ ಹೊಸ ಸಿನಿಮಾಗೆ ಕೈ ಹಾಕಲಿದ್ದೇನೆ. ಎಲ್ಲಾ ಸರಿ ಅನಿಸಿದ ಮೇಲೆ ಅದರ ಬಗ್ಗೆ ಹೇಳುತ್ತೇವೆ” ಎಂದು ತಮ್ಮ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡು ಬಂದಿದ್ದರು. ಸದ್ಯ ಈ ಶುಭ ಸಮಾಚಾರಕ್ಕೆ ಮುಹೂರ್ತ ಕೂಡಿಬಂದಿರುವ ಹಾಗಿದೆ. ಯಶ್19 ನ ಬಗೆಗಿನ ಅಪ್ಡೇಟ್ ಒಂದು ಸದ್ಯ ಚಂದನವನದ ತುಂಬೆಲ್ಲ ಓಡಾಡುತ್ತಿದೆ. ಮೂಲಗಳ ಪ್ರಕಾರ ಇದೇ ಏಪ್ರಿಲ್ 14ರಂದು ‘ಯಶ್19’ ಅಧಿಕೃತವಾಗಿ ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.

ಇದೀಗ ಎಲ್ಲೆಡೆ ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ ‘ಯಶ್19’, ಯಶ್ ಅವರ ಹೋಂ ಬ್ಯಾನರ್ ನಲ್ಲಿಯೇ ನಿರ್ಮಾಣ ಮಾಡಲಾಗುವುದು. ಇದೊಂದು ಆಕ್ಷನ್ ಥ್ರಿಲರ್ ಸಿನಿಮಾ ಆಗಿರಲಿದ್ದು, ಇದಕ್ಕಾಗಿಯೇ ಹಾಲಿವುಡ್ ನ ಖ್ಯಾತ ನಿರ್ದೇಶಕ ಜೆ ಜೆ ಪೆರ್ರಿ ಅವರ ಬಳಿ ವಿಶೇಷ ತರಬೇತಿ ಪಡೆದಿದ್ದಾರೆ. ಈ ಸಿನಿಮಾದ ಬಗೆಗಿನ ಅಧಿಕೃತ ಘೋಷಣೆಯನ್ನ ಇದೇ ಏಪ್ರಿಲ್ 14ರಂದು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಹೊಸ ಸಿನಿಮಾವನ್ನ ಒಬ್ಬ ಮಹಿಳಾ ನಿರ್ದೇಶಕರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾತುಗಳೂ ಕೂಡ ಕೇಳಿಬರುತ್ತಿವೆ. ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗಿ ಒಂದು ವರುಷ ಸಂದುತ್ತದೆ. ಈ ಎಲ್ಲಾ ವಿಚಾರಗಳು ನಿಜವೇ ಆದಲ್ಲಿ ಅಭಿಮಾನಿಗಳ ಕಾತುರಕ್ಕೆ ಒಂದೊಳ್ಳೆ ಉತ್ತರ ಸಿಗಲಿದೆ.

RELATED ARTICLES

Most Popular

Share via
Copy link
Powered by Social Snap