‘ಪೊಗರು’,’ರನ್ನ’ ಹೀಗೆ ಅದೆಷ್ಟೋ ಕಮರ್ಷಿಯಲ್ ಹಿಟ್ ಸಿನಿಮಾಗಳನ್ನ ಕನ್ನಡಿಗರಿಗೆ ನೀಡಿ, ಸ್ಟಾರ್ ನಿರ್ದೇಶಕ ಎನಿಸಿಕೊಂಡವರು ನಂದಕಿಶೋರ್. ಕನ್ನಡದಲ್ಲಿ ತಮ್ಮ ಕೈಚಳಕ ತೋರಿ ಭೇಷ್ ಎನಿಸಿಕೊಂಡಿರುವ ಇವರು ಇದೀಗ ಮಲಯಾಳಂ ನ ಸ್ಟಾರ್ ನಟ ಮೋಹನ್ ಲಾಲ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಈ ಸಿನಿಮಾ ಚಾಲನೆ ಪಡೆದುಕೊಂಡಿದೆ.


‘ವೃಷಭ’ ಎಂಬ ಹೆಸರನ್ನು ಹೊತ್ತಿರುವ ಈ ಸಿನಿಮಾ ಒಂದು ಪೌರಾಣಿಕ ಹಾಗು ಫ್ಯಾಂಟಸಿ ರೀತಿಯ ಕಥೆಯನ್ನ ಹೊಂದಿದ್ದು ಆಕ್ಷನ್ ದೃಶ್ಯಗಳು ಕೂಡ ಇರಲಿವೆ. ಇದೇ ತಿಂಗಳಿನಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ತಾರಗಣ ಕೂಡ ದೊಡ್ಡ ಮಟ್ಟದಲ್ಲೇ ಇದ್ದು, ಹೆಚ್ಚಿನ ಮಾಹಿತಿ ಹೊರಬೀಳದೆ ಇದ್ದರೂ ಕೂಡ ನಟ ರೋಷನ್ ಅವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಕನ್ನಡದ ನಟರು ಕೂಡ ನಟಿಸಲಿದ್ದಾರಂತೆ. ಮೋಹನ್ ಲಾಲ್ ಅವರಿಗೆ ನಿರ್ದೇಶನ ಮಾಡುತ್ತಿರುವುದು ನನ್ನ ಪುಣ್ಯವೇ ಸರಿ ಎನ್ನುತ್ತಾರೆ ನಂದಕಿಶೋರ್.
‘ವೃಷಭ’ ಒಂದು ಪಾನ್ ಇಂಡಿಯನ್ ಸಿನಿಮಾ ಆಗಿರಲಿದ್ದು, ಸುಮಾರು ಎಂಟು ತಿಂಗಳ ಕಾಲ ಸತತವಾಗಿ ನಂದಕಿಶೋರ್ ಅವರು ಈ ಕಥೆಯ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ದಾರಂತೆ. ಬಾಲಿವುಡ್ ನಲ್ಲಿ ಪ್ರಖ್ಯಾತಿ ಗಳಿಸುತ್ತಿರುವ ಸಂತೋಷ್ ತುಂಡಿಯಲ್ ಸಿನಿಮಾದ ಛಾಯಾಗ್ರಹಣ ಮಾಡಲಿದ್ದು, ತೆಲುಗಿನ ಸ್ಟಾರ್ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರು ಚಿತ್ರಕ್ಕೆ ಸಂಗೀತ ತುಂಬಲಿದ್ದಾರೆ. ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.



