HomeNewsಚಿತ್ರರಂಗದಲ್ಲಿ ನನಗೊಂದು ಖಾಯಂ ಜಾಗ ಸಿಗಲು ಜಗ್ಗೇಶ್ ಅವರೇ ಪ್ರಮುಖ ಕಾರಣ : ವಿ ಮನೋಹರ್.

ಚಿತ್ರರಂಗದಲ್ಲಿ ನನಗೊಂದು ಖಾಯಂ ಜಾಗ ಸಿಗಲು ಜಗ್ಗೇಶ್ ಅವರೇ ಪ್ರಮುಖ ಕಾರಣ : ವಿ ಮನೋಹರ್.

ವಿ ಮನೋಹರ್ ಅವರು ಕನ್ನಡದ ಎವರ್ ಗ್ರೀನ್ ಸಂಗೀತ ನಿರ್ದೇಶಕರಲ್ಲಿ ಒಬ್ಬರು. 1992ರ ‘ತರ್ಲೆ ನನ್ ಮಗ’ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಪರಿಚಿತರಾದ ಮನೋಹರ್ ಅವರು ಅಂದಿನಿಂದ ಇಂದಿನವರೆಗೂ ಹಲವು ಅದ್ಭುತ ಗೀತೆಗಳನ್ನು ಕನ್ನಡಿಗರಿಗೆ ನೀಡಿದ್ದಾರೆ. ಈಗ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ತಮ್ಮ ಆರಂಭಿಕ ದಿನಗಳ ಬಗ್ಗೆ, ಜಗ್ಗೇಶ್ ಹಾಗು ಉಪೇಂದ್ರ ಅವರ ಬಗ್ಗೆ ಮನೋಹರ್ ಮನಬಿಚ್ಚಿ ಮಾತನಾಡಿದ್ದಾರೆ.

ಜಗ್ಗೇಶ್ ಅವರು ನಾಯಕರಾಗಿ ನಟಿಸಿದ ‘ತರ್ಲೆ ನನ್ ಮಗ’ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಮೊದಲ ಸಿನಿಮಾ. “ಅವರ ನಿರ್ದೇಶನದ ಮೊದಲ ಸಿನಿಮ ಆಗಿದ್ದರಿಂದ ಸಹಾಯಕನಾಗಿ ನನ್ನನ್ನು ಜೊತೆಯಲ್ಲಿರುವಂತೆ ಉಪೇಂದ್ರ ಅವರು ಕೇಳಿದ್ದರು. ಅಂತೆಯೇ ನಾನು ತಂಡದಲ್ಲಿದ್ದೆ. ಪ್ರಖ್ಯಾತರಾಗಿದ್ದ ಎಸ್ ಎ ರಾಜಕುಮಾರ್ ಅವರು ಸಂಗೀತ ಮಾಡುವುದಾಗಿ ನಿರ್ಧಾರವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ಸಿಗಲಾಗಲಿಲ್ಲ. ಹಾಗಾಗಿ ಉಪೇಂದ್ರ ಅವರು ನನ್ನ ಕಡೆ ಮುಖ ಮಾಡಿದರು. ನಾನು ಅಲ್ಪ ಸ್ವಲ್ಪ ಧೈರ್ಯ ಮಾಡಿ ಸಂಗೀತ ನಿರ್ದೇಶಕನ ಪಟ್ಟ ಸೇರಿದೆ” ಎನ್ನುತ್ತಾರೆ ವಿ ಮನೋಹರ್ ಅವರು.

“ನಾನು ಮಾಡಿದ ಮೊದಲ ಟ್ಯೂನ್ ‘ಡಂ ಡಂ ಡಗಾರ್’, ‘ಸಂಗೀತ ಕಲಿಸಿಕೊಡು ಸಂಗೀತ ‘ ನಂತರ ಬಂದಂತಹ ಎರಡನೇ ಹಾಡು. ಆ ಸಿನಿಮಾದ ಎಲ್ಲಾ ಹಾಡುಗಳು ಜನಪ್ರಿಯತೆ ಪಡೆದವು. ಜಗ್ಗೇಶ್ ಅವರು ಕೂಡ ಈ ಸಿನಿಮಾದಲ್ಲಿ ಹಾಡೊಂದನ್ನು ಬಹಳ ಇಷ್ಟಪಟ್ಟು ಹಾಡಿದ್ದರು. ಇದಾದ ನಂತರ ಜಗ್ಗೇಶ್ ಅವರಿಗೆ ನನ್ನ ಕೆಲಸ ತುಂಬಾ ಇಷ್ಟಾವಾಗಿತ್ತು. ನನ್ನ ಬಗ್ಗೆ ಜಗ್ಗೇಶ್ ಅವರೇ ಪ್ರಚಾರ ಮಾಡುತ್ತಿದ್ದರು. ಅವರ ಬಳಿ ಬರುವ ಎಲ್ಲಾ ನಿರ್ಮಾಪಕರ ಬಳಿ, ನಮ್ಮ ಮನೋಹರ್ ಅವರ ಬಳಿ ಸಂಗೀತ ಮಾಡಿಸಿ, ಅವರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ಹೇಳುತ್ತಿದ್ದರು. ಇಡೀ ಕಾರಣದಿಂದಾಗಿಯೇ ನಾನು ಜಗ್ಗೇಶ್ ಅವರು ಸುಮಾರು 22 ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೇವೆ. ನಾನು ಚಿತ್ರರಂಗದಲ್ಲಿ ಸ್ಟಾಂಡ್ ಆಗುವಂತೆ ಮಾಡಿದ್ದೆ ಜಗ್ಗೇಶ್ ಅವರು” ಎಂದು ತಮ್ಮ ಅಭಿಮಾನವನ್ನ ವಿ ಮನೋಹರ್ ಅವರು ವ್ಯಕ್ತಪಡಿಸಿದ್ದಾರೆ.

ಸಂಗೀತ ಮಾಡುವುದರ ಜೊತೆಗೆ ಹಲವು ಚಿತ್ರಗಳ ಪ್ರಮುಖ ಪಾತ್ರಗಳಲ್ಲೂ ವಿ ಮನೋಹರ್ ಅವರು ನಟಿಸಿದ್ದಾರೆ. ಬೆಳ್ಳಿತೆರೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಉತ್ತಮ ಖ್ಯಾತಿ ಗಳಿಸಿದ್ದಾರೆ ವಿ ಮನೋಹರ್ ಅವರು.

RELATED ARTICLES

Most Popular

Share via
Copy link
Powered by Social Snap