ಮೈಸೂರು ನಗರದ ಹೊರವಲಯದಲ್ಲಿರುವ ಹಾಲಾಳು ಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಡಾ. ವಿಷ್ಣುವರ್ಧನ್ ಪ್ರತಿಷ್ಠಾನದ ವತಿಯಿಂದ ನಿರ್ಮಿಸಿರುವ ಡಾ ವಿಷ್ಣುವರ್ಧನ್ ಸ್ಮಾರಕ ಭವನವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು.
ನಾಗರಹಾವು ಸಿನಿಮಾದ ರಾಮಾಚಾರಿ ಪಾತ್ರದ ಮೂಲಕ ಎಲ್ಲರ ಮನೆ ಮಾತಾದ ಡಾ ವಿಷ್ಣುವರ್ಧನ್ ಯಾವುದೇ ಪಾತ್ರಕ್ಕೂ ಸೈ ಎನ್ನವಂತೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಡಾ ವಿಷ್ಣುವರ್ಧನ್ ಅವರಿಗೆ ಜೀವನದಲ್ಲಿ ಜೊತೆಯಾಗಿ,ಶಕ್ತಿ ಯಾಗಿ ನಿಂತಿದ್ದ ಪದ್ಮಶ್ರೀ ಭಾರತಿ ಅವರು ವಿಷ್ಣುವರ್ಧನ್ ಅವರು ಜನಿಸಿದ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಮಾಡಬೇಂದು ಹಂಬಲಿಸಿ ,ಪರಿಶ್ರಮ ವಹಿಸಿ ಸ್ಮಾರಕ ನಿರ್ಮಾಣ ಮಾಡಿಸಿದ್ದಾರೆ .ಈ ಭವ್ಯ ಸ್ಮಾರಕದಲ್ಲಿ ಎಲ್ಲಾ ಸೌಲಭ್ಯ ಇದೆ ಸಾರ್ವಜನಿಕರು ಹಾಗೂ ಚಿತ್ರ ರಂಗ ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ.


ಸ್ಮಾರಕದ ವಿಶೇಷತೆವೇನು?: ಒಟ್ಟು 5 ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಡಾ ವಿಷ್ಣುವರ್ಧನ್ ಸ್ಮಾರಕ ಭವನ 11 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಆಗಿದೆ. ಈ ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ 700 ಫೊಟೋಗಳ ಗ್ಯಾಲರಿ, ವಿಶಾಲವಾದ ಉಧ್ಯಾನವನ, ನೀರಿನ ಕಾರಂಜಿ, 250 ಜನ ಕೂರುವಂತಹ ಸಭಾಂಗಣ, ಹಾಗೂ ನಟನಾ ಶಾಲೆ ಇದೆ. ಎರಡು ಎಕರೆಯಲ್ಲಿ ನೆಲಮಹಣಿ, ತಳಮಹಡಿ ಸೇರಿ ಒಟ್ಟು 27 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ವೃತ್ತಾಕಾರದಲ್ಲಿ ಸ್ಮಾರಕ ತಲೆ ಎತ್ತಿದೆ. ಸ್ಮಾರಕ ಎರಡು ಗೋಡೆಗಳಲ್ಲಿ ವಿಷ್ಣುವರ್ಧನ್ ಅವರ ರಾಜ್ ಕುಮಾರ್, ಶಿವಾಜಿ ಗಣೇಶನ್, ಎಂಜಿಆರ್, ರಜನಿಕಾಂತ್, ಅಂಬರೀಶ್, ಅನಂತ್ ನಾಗ್ ಅವರೊಂದಿಗಿನ ಅಪರೂಪದ ಚಿತ್ರಲೋಕವಿದೆ. ಮತ್ತೊಂದು ವಿಶೇಷ ಅಂದ್ರೆ ಸ್ಮಾರಕದ ಒಳಾಂಗಣದಲ್ಲಿ ಒಂದು ಕೊಳವನ್ನು ನಿರ್ಮಾಣ ಮಾಡಿದ್ದು, ಆ ಕೊಳದ ಮಧ್ಯೆ ವಿಷ್ಣು ತೊಡುತ್ತಿದ್ದ ಬೆಳ್ಳಿ ಕಡ್ಗದ ದೊಡ್ಡ ಕಲಾಕೃತಿ ಇದೆ. ಇದರ ಜೊತೆಗೆ ಕೃಷ್ಣಶಿಲೆಯಲ್ಲಿ ಕೆತ್ತಿರೋ ವಿಷ್ಣುವರ್ಧನ್ ಅವರ 6.5 ಅಡಿ ಎತ್ತರದ ಪ್ರತಿಮೆ ಇಟ್ಟಿದ್ದಾರೆ. ಸ್ಮಾರಕದ ಗೋಡೆಗಳ ಮೇಲೆ ವಿಷ್ಣುದಾದನ ಸಿನಿಮಾ ಡೈಲಾಗ್’ಗಳ ಬರವಣಿಗೆ ಇವೆ.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ ದೇವೇಗೌಡ, ಭಾರತಿ ವಿಷ್ಣುವರ್ಧನ್, ಅನಿರುದ್ಧ ಜಟ್ಕರ್ ಸಂಸದ ಪ್ರತಾಪ್ ಸಿಂಹ ,ಶಾಸಕರಾದ ರಾಮದಾಸ್, ನಾಗೇಂದ್ರ ಹಾಗೂ ಇತರ ಗಣ್ಯರು ಹಾಜರಿದ್ದರು.





