ಭಾರತ ತಂಡದ ಸ್ಟಾರ್ ಆಟಗಾರ, ಅದೆಷ್ಟೋ ಅಭಿಮಾನಿಗಳ ಆರಾಧ್ಯ ವಿರಾಟ್ ಕೊಹ್ಲಿ ಅವರು ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಭಾರತ ಹಾಗು ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯ, ವಿರಾಟ್ ಅವರ ವೃತ್ತಿ ಜೀವನದ 500ನೇ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟವಾಗಿದೆ. ಹಾಗಾಗಿ ಇದು ಅವರಿಗೂ ಹಾಗು ಅವರ ಅಭಿಮಾನಿಗಳಿಗೂ ವಿಶೇಷವಾದದ್ದು. ಇದಕ್ಕೆ ಇನ್ನಷ್ಟು ಸಂಭ್ರಮ ಸೇರಿಸಿರುವ ವಿರಾಟ್, ತಮ್ಮ 500ನೇ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ ಬೌಲರ್ ಗಳನ್ನ ಬೆಂಡೆತ್ತಿರುವ ವಿರಾಟ್,180 ಎಸೆತಗಳಲ್ಲಿ ತಮ್ಮ 76ನೇ ಅಂತರ್ರಾಷ್ಟ್ರೀಯ ಶತಕವನ್ನ ದಾಖಲಿಸಿದ್ದಾರೆ. ತಮ್ಮ ಐನೂರನೇ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೊಹ್ಲಿ ಅವರಿಗೆ ಅಪಾರ ಅಭಿಮಾನಿಗಳು ಇಡೀ ಪ್ರಪಂಚದ ತುಂಬಾ ಹರಡಿದ್ದಾರೆ. ಸಾಮಾನ್ಯ ಕ್ರಿಕೆಟ್ ಪ್ರೇಮಿಗಳಷ್ಟೇ ಅಲ್ಲದೇ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಆಟಗಾರರು, ಅವರ ಕುಟುಂಬದವರು ಹೀಗೆ ಹಲವು ಹೆಸರಾಂತರು ಕೊಹ್ಲಿ ಅವರನ್ನ ಕೊಂಡಾಡುತ್ತಾರೆ. ಸದ್ಯ ಇಂತದ್ದೇ ಅಭಿಮಾನಿಯೊಬ್ಬರ ಮನಮುಟ್ಟುವ ಘಟನೆ ನಿನ್ನೆ ವೆಸ್ಟ್ ಇಂಡೀಸ್ ಪಂದ್ಯದ ಎರಡನೇ ದಿನದ ಅಂತ್ಯಕ್ಕೆ ನಡೆದಿದೆ. ವಿಂಡೀಸ್ ಪರ ವಿಕೆಟ್ ಕೀಪರ್ ಜೋಶವ ಡ ಸಿಲ್ವಾ ಅವರು ಮೊದಲ ದಿನ ವಿರಾಟ್ ಬ್ಯಾಟಿಂಗ್ ಮಾಡುವಾಗ ಕಿವಿಮಾತು ಒಂದು ಹೇಳಿದ್ದರು. “ನನ್ನ ತಾಯಿ ಇಂದು ನಿನ್ನನ್ನು ನೋಡಲು ಬರುತ್ತಿದ್ದಾರೆ ವಿರಾಟ್. ಈ ಬಾರೀ ನೂರು ರನ್ ಹೊಡೆಯಲೇ ಬೇಕು” ಎಂದಿದ್ದರು. ಈ ಮಾತುಗಳನ್ನ ಎಲ್ಲರೂ ತುಂಬಾ ಮೆಚ್ಚಿದ್ದರು. ಆದರೆ ಎರಡನೇ ದಿನ ಇವರ ಎರಡೂ ಮಾತುಗಳು ನಿಜವಾದವು.


ಎರಡನೇ ದಿನ ಬ್ಯಾಟಿಂಗ್ ಇಳಿದ ವಿರಾಟ್ ಶತಕ ಸಿಡಿಸಿದರು. ಸಂಭ್ರಮದ ಆಚರಣೆಗಳ ಜೊತೆಗೆ ಪ್ರಭುದ್ಧ ಬ್ಯಾಟಿಂಗ್ ನಡೆಸಿ 206 ಎಸೆತಗಳಲ್ಲಿ 121 ರನ್ ಗಳನ್ನು ಗಳಿಸಿ ಔಟ್ ಆದರು. ನಂತರ ಪಂದ್ಯ ಮುಕ್ತಾಯ ಕಂಡಾಗ ಜೋಶವ ಡಿ ಸಿಲ್ವಾ ಅವರ ತಾಯಿ ಕೊಹ್ಲಿಯವರನ್ನು ಭೇಟಿಯಾಗಿದ್ದಾರೆ. ಭೇಟಿ ಮಾತ್ರವಲ್ಲದೇ ಬಿಗಿದಪ್ಪಿ, ಮುತ್ತು ಕೊಟ್ಟು ಮುದ್ದಾಡಿದ್ದಾರೆ. ಈಕೆ ಕೊಹ್ಲಿ ಅವರ ಅಪರ ಅಭಿಮಾನಿ. ಆಗುತ್ತಿರುವ ಆನಂದವನ್ನ ಸಹಿಸಲಾಗದೆ ಕಣ್ಣೀರು ಕೂಡ ಹಾಕಿದ್ದಾರೆ. ಅಷ್ಟು ಸಂತಸ ಪಟ್ಟಿದ್ದಾರೆ. ವಿರಾಟ್ ಕೂಡ ಅವರ ಅಭಿಮಾನಕ್ಕೆ ಕರಗಿ, ಸಂತಸದಿಂದ ನಗುತ್ತಾ ಫೋಟೋ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಹಾಗು ಫೋಟೋಗಳು ಎಲ್ಲೆಡೆ ಟ್ರೆಂಡ್ ಆಗುತ್ತಿವೆ.
ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಬಿರುಸಿನ ಬ್ಯಾಟಿಂಗ್ ಅನ್ನು ಎರಡನೇ ಟೆಸ್ಟ್ ನಲ್ಲೂ ಮುಂದುವರೆಸಿರುವ ಭಾರತದ ಪರ ಆರಂಭಿಕರಾದ ಜೈಸ್ವಾಲ್ 57, ನಾಯಕ ರೋಹಿತ್ 86 ರನ್ ಗಳಿಸಿದರೆ, ಕೊಹ್ಲಿ ಅವರ ಆಕರ್ಷಕ ಶತಕದ 121ರನ್, ಜಡೇಜಾ ಹಾಗು ಅಶ್ವಿನ್ ಅವರ 61 ಹಾಗು ರನ್ ಗಳ ಸಹಾಯದಿಂದ ತಂಡ 438 ರನ್ ಗಳನ್ನ ಪೇರಿಸಿದೆ. ಇದರ ಬೆನ್ನತ್ತಿ ಬ್ಯಾಟಿಂಗ್ ಇಳಿದ ವಿಂಡೀಸ್ ಎರಡನೇ ದಿನದ ಅಂತ್ಯಕ್ಕೆ 80 ರನ್ ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ತಮ್ಮ 500ನೇ ಪಂದ್ಯದಲ್ಲಿ ನೂರು ರನ್ ಗಳಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

