ಪ್ರಸ್ತುತ ಐಪಿಎಲ್ ನಲ್ಲಿ ಪ್ಲೇಯೋಫ್ ಪೈಪೋಟಿ ನಡೆಯುತ್ತಿದೆ. ಹೊರಬಿದ್ದ ಹೈದರಬಾದ್ ಹಾಗು ದೆಲ್ಲಿ ಹಾಗು ಪ್ಲೇಯೋಫ್ ತಲುಪಿದ ಗುಜರಾತ್ ತಂಡಗಳ ಹೊರತಾಗಿ ಮಿಕ್ಕ ಏಳು ತಂಡಗಳು ಪ್ಲೇಯೋಫ್ ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸೆಣಸಾಡುತ್ತಿವೆ. ಇಂದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಬಾದ್ ಎದುರಿಗೆ ಮಾಡು ಇಲ್ಲವೇ ಮಡಿ ರೀತಿಯ ಪಂದ್ಯದಲ್ಲಿ ಎದುರು ಕಂಡಿತ್ತು. ಸೋತರೆ ಪ್ಲೇಯೋಫ್ ಆಸೆ ಮುರಿದುಬೀಳುವ ಹಾಗಿತ್ತು. ಆದರೆ ಈ ಪಂದ್ಯ RCB ತಂಡದ ಆಕರ್ಷಕ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದ ಅನಾಯಾಸ ಜಯವಾಗಿ ಪರಿವರ್ತನೆ ಕಂಡಿತು. ಹೈದರಬಾದ್ ವಿರುದ್ಧ ನಮ್ಮ RCB ಎಂಟು ವಿಕೆಟ್ ಗಳ ಭರ್ಜರಿ ಜಯ ಕಂಡಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ RCBಯ ಕಪ್ತಾನ ಫಾಫ್ ಡು ಪ್ಲೇಸಿಸ್, ತಮ್ಮ ತಂಡದ ಪ್ರಭುದ್ಧ ಬೌಲಿಂಗ್ ಪ್ರದರ್ಶನದ ಕಾರಣದಿಂದಾಗಿ ಹೈದರಬಾದ್ ತಂಡವನ್ನ ಐದು ವಿಕೆಟ್ ಉದುರಿಸಿ 186 ರನ್ ಗಳಿಗೆ ಕಟ್ಟಿ ಹಾಕಿದರು. ಹೈದರಬಾದ್ ನ ಪರ ವಿಕೆಟ್ ಕೀಪರ್ ಆದ ಹೆನ್ರಿಚ್ ಕ್ಲಾಸೆನ್ ಅವರು ಕೇವಲ 51 ಎಸೆತಗಳಲ್ಲಿ 104 ರನ್ ಗಳಿಸಿ ಸ್ಫೋಟಕ ಬ್ಯಾಟಿಂಗ್ ಮೆರೆದರು. ಈ 187ರ ಗುರಿ ಬೆನ್ನಟ್ಟಿ RCB ಪರ ಬ್ಯಾಟಿಂಗ್ ಗೆ ಇಳಿದ ನಾಯಕ ಫಾಫ್ ಹಾಗು ಕಿಂಗ್ ಕೊಹ್ಲಿ ಆರಂಭದಿಂದಲೇ ಪಂದ್ಯವನ್ನ ಹತೋಟಿಗೆ ತೆಗೆದುಕೊಂಡರು. ಈ ಇಬ್ಬರೂ ಆರಂಭಿಕ ಆಟಗಾರರು ಬರೋಬ್ಬರಿ 172 ರನ್ ಗಳ ಜೊತೆಯಾಟ ಆಡಿದರು. ಅಂತಿಮವಾಗಿ 19.2 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ 187 ರನ್ ಹೊಡೆದು ಜಯ ಸಾಧಿಸಿದರು.
ಇಡೀ ಪಂದ್ಯದ ಪ್ರಮುಖ ಹೈಲೈಟ್ ಅಂದರೇ ಕಿಂಗ್ ಕೊಹ್ಲಿ ಅವರ ಶತಕ. 62 ಎಸೆತಗಳ 100 ರನ್ ಗಳನ್ನು ಪೇರಿಸಿದ ಕೊಹ್ಲಿ , 2019 ರ ನಂತರ ಇದೆ ಮೊದಲ ಐಪಿಎಲ್ ಶತಕ ದಾಖಲಿಸಿದರು. ಒಟ್ಟು ಐಪಿಎಲ್ ನಲ್ಲಿ ಆರು ಶತಕಗಳು ಈ ಮೂಲಕ ಕಿಂಗ್ ಕೊಹ್ಲಿ ಹೆಸರಿಗೆ ಸೇರಿದವು. ಅದು ಕೂಡ ಸಿಕ್ಸರ್ ಮೂಲಕ ಸಿಡಿಸಿದ ಶತಕಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಒಟ್ಟಿನಲ್ಲಿ ತಮ್ಮ ಆಕರ್ಷಕ ಶತಕದ ಜೊತೆಗೆ ಕೊಹ್ಲಿ RCB ತಂಡಕ್ಕೆ ಸುಲಭದ ಜಯ ದಾಖಲಿಸಿ ತಂಡದ ಪ್ಲೇಯೋಫ್ ಕನಸಿಗೆ ಇನ್ನಷ್ಟು ಪುಷ್ಟಿ ನೀಡಿದ್ದಾರೆ. RCBಯ ಮುಂದಿನ ಪಂದ್ಯ ಇರುವುದು ಹಾರ್ದಿಕ್ ಪಾಂಡ್ಯ ಅವರ ಬಲಿಷ್ಠ ಗುಜರಾತ್ ಟೈಟನ್ಸ್ ವಿರುದ್ಧವಾಗಿ. ಆ ಪಂದ್ಯವನ್ನ ಗೆದ್ದರೆ ಪ್ಲೇಯೋಫ್ ಪ್ರವೇಶ ಖಚಿತವಾಗುತ್ತದೆ. ಇದನ್ನೇ ಅಪಾರ RCB ಅಭಿಮಾನಿಗಳು ಕಾಯುತ್ತಿದ್ದಾರೆ.

