ನಮ್ ಟಾಕೀಸ್.ಇನ್ ರೇಟಿಂಗ್ 【3.75 / 5】
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕ ನಾಯಕಿಯಾಗಿ ನಟಿಸಿರುವ ಭರ್ಜರಿ ಆಕ್ಷನ್ ಸಿನಿಮಾ ‘ವೀರಂ’, ಈ ವಾರದ ಬೆಳ್ಳಿತೆರೆ ಬಿಡುಗಡೆಗಳಲ್ಲಿರುವ ಗಮನಾರ್ಹ ಸಿನಿಮಾ. ಬರಿಯ ಆಕ್ಷನ್ ಅಷ್ಟೇ ಅಲ್ಲದೇ ಒಂದೊಳ್ಳೆ ಸಂಘರ್ಷ ಇರುವ ಕಥಾವಸ್ತು, ಪ್ರೀತಿ ಪ್ರೇಮ ವಾತ್ಸಲ್ಯ ಇವೆಲ್ಲವನ್ನ ತೋರುವಂತಹ ಮನರಂಜನಾತ್ಮಕ ಸಿನಿಮಾವಾಗಿ ‘ವೀರಂ’ ಎಲ್ಲರ ಪ್ರಶಂಸೆ ಪಡೆಯುತ್ತಿದೆ. ಹಾಗಾದರೆ ಸಿನಿಮಾ ಹೇಗಿದೆ?
ಮಾರುಕಟ್ಟೆಯ ರಾಜಕಾರಣ, ಅಲ್ಲಿನ ಅಧಿಕಾರಕ್ಕಾಗಿ ಹೊಡೆದಾಡುತ್ತಲೇ ಇರುವ ಎರಡು ಗುಂಪುಗಳು ಹಾಗು ಅದರ ನಾಯಕರಾದ ‘ಮಾರ್ಕೆಟ್ ದೇವಿ’ ಪಾತ್ರದಲ್ಲಿ ಬಲ ರಾಜವಾಡಿ ಹಾಗು ‘ಕೂಲಿಂಗ್ ಗ್ಲಾಸ್ ಗೋವಿಂದ’ ಪಾತ್ರದಲ್ಲಿ ಮೈಕೋ ನಾಗರಾಜ್ ಕಾಣಿಸಿಕೊಳ್ಳುತ್ತಾರೆ. ಈ ಎಲ್ಲಾ ಗಲಭೆಗಳ ನಡುವೆ ಕಾಣಸಿಗುವುದು, ಮಕ್ಕಳಿಲ್ಲದ ದಂಪತಿಗಳಾದ ಸದಾಶಿವ ಹಾಗು ಆತನ ಪತ್ನಿ ಸರಸ್ವತಿ (ಅಚ್ಯುತ್ ಕುಮಾರ್ ಹಾಗು ಶೃತಿ). ಸರಸ್ವತಿಯ ಇಬ್ಬರು ತಮ್ಮಂದಿರಾದ ನರಸಿಂಹ (ಶ್ರೀನಗರ್ ಕಿಟ್ಟಿ) ಹಾಗು ವೀರು(ಪ್ರಜ್ವಲ್ ದೇವರಾಜ್) ಅವರನ್ನು ಬಾಲ್ಯದಿಂದಲೇ ಬಹಳ ಪ್ರೀತಿಯಿಂದ ಈ ಇಬ್ಬರೂ ದಂಪತಿಗಳು ಸಾಕಿ ಸಲಹುತ್ತಿರುತ್ತಾರೆ. ಬಹಳಷ್ಟು ಕನಸು ಹೊತ್ತು ಇರುವ ಕುಟುಂಬದಲ್ಲೇ ಸಂತಸದಿಂದಿರುವ ಈ ದಂಪತಿಗಳ ಜೊತೆ ಬೆಳೆದ ಇಬ್ಬರೂ ಮಕ್ಕಳು ಒಂದೊಂದು ರೀತಿಯಲ್ಲಿ ದೊಡ್ಡವರಾಗುತ್ತಾರೆ.




ಬಾಲ್ಯದಲ್ಲೇ ರೌಡಿಸಂ ಗೆ ಆಕರ್ಷಿತನಾಗುವ ನರಸಿಂಹ, ಕೂಲಿಂಗ್ ಗ್ಲಾಸ್ ಗೋವಿಂದನ ಬಲಗೈ ಬಂಟನಾಗಿ ಬೆಳೆಯುತ್ತಾನೆ. ಇನ್ನೊಂದೆಡೆ ಕಥಾನಾಯಕ ವೀರು, ಅಕ್ಕನ ಮುದ್ದಿನ ತಮ್ಮನಾಗಿ, ಅವಳೇ ಎಲ್ಲಾ ಎಂದುಕೊಂಡು, ಕಷ್ಟಪಟ್ಟು ಓದುತ್ತಾ, ಒಳ್ಳೆ ಕೆಲಸ ಹಿಡಿದು, ಅಕ್ಕನನ್ನ ಚೆನ್ನಾಗಿ ನೋಡಿಕೊಳ್ಳುವ ಹಂಬಲದಲ್ಲಿರುತ್ತಾನೆ. ಜೊತೆಗೆ ಕೈ ಮೇಲೆ ಸಾಹಸಿಂಹ ವಿಷ್ಣುವರ್ಧನ್ ಅವರ ಅಚ್ಚೆ ಹಾಕಿಕೊಂಡ, ಅವರ ಅಪ್ಪಟ ಅಭಿಮಾನಿಯಾಗಿರುತ್ತಾನೆ. ಇದರ ನಡುವೆ ಗೆಳೆಯ ಗಿರಿ ಜೊತೆಗಿನ ಗೆಳೆತನದ ಜೊತೆಗೆ ತನ್ನ ಕಾಲೇಜಿನದೆ ಮುದ್ದಾದ ಚೆಲುವೆ ಧಾತ್ರಿ(ರಚಿತಾ ರಾಮ್) ಯನ್ನ ಪ್ರೀತಿಸುತ್ತಾನೆ.


ಇದೆಲ್ಲದರ ನಡುವೆ ಕಥೆಗೆ ಬರುವವನು ಮಾರ್ಕೆಟ್ ದೇವಿಯ ಪುತ್ರ ಜೇಡ(ಶಿಷ್ಯ ದೀಪಕ್). ಮಾರುಕಟ್ಟೆಯಲ್ಲಿ ಇವನ ಹಾವಳಿ ಹೆಚ್ಚಾದಂತೆ, ಇವನಿಗೂ ಹಾಗು ನಾಯಕ ವೀರುಗೂ ವೈಶಮ್ಯ ಬೆಳೆಯುತ್ತದೆ. ಇದರ ನಡುವೆ ಎರಡು ಪ್ರಮುಖ ಕೊಲೆ ನಡೆಯುತ್ತದೆ. ಈ ಸಾವು ಯಾರದ್ದು? ಮಾಡಿದವರು ಯಾರು? ನರಸಿಂಹ ಏನಾದ? ವೀರು ಹಾಗು ಅವನ ಪ್ರೇಮ, ಅವನ ಪ್ರೀತಿಯ ಅಕ್ಕ ಅವರ ಜೀವನ ಇದೆಲ್ಲಾ ಈ ಸಂಘರ್ಷಕ್ಕೆ ಸಿಕ್ಕಿ ಅದ್ಹೇಗೆ ಬದಲಾಗುತ್ತದೆ ಏನೆಲ್ಲಾ ಆಗುತ್ತದೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು.
ಮಾರ್ಕೆಟ್, ಅಲ್ಲಿನ ಗಲಾಟೆ, ಕಥೆಯಲ್ಲಿರುವ ಹಲವು ಶಕ್ತಿಯುತ ಪಾತ್ರಗಳು, ಇವು ‘ವೀರಂ’ ಸಿನಿಮಾವನ್ನ ಇತರ ಕಮರ್ಷಿಯಲ್ ಚಿತ್ರಗಳಿಗಿಂತ ಭಿನ್ನವಾಗಿ ನಿಲ್ಲಿಸಿದೆ. ಇನ್ನು ಇಲ್ಲಿನ ಪ್ರಮುಖ ಪಾತ್ರಧಾರಿಗಳು ಪ್ರಬುದ್ಧ ಅಭಿನಯ ತೋರಿ ಕಥೆಯ ಒಳಗೆ ಪ್ರೇಕ್ಷಕರನ್ನ ತಲುಪಿಸಿದ್ದಾರೆ. ಈ ಎಲ್ಲಾ ಪಾತ್ರಗಳನ್ನು ಅಷ್ಟೇ ಚೆನ್ನಾಗಿ ರೂಪಿಸಿ, ನಟನೆಗೆ ಅವಕಾಶ ನೀಡಿ, ಸಿನಿಮಾವನ್ನ ಅಚ್ಚುಕಟ್ಟಾಗಿ ಸಿದ್ದಪಡಿಸಿರುವ ನಿರ್ದೇಶಕ ಖದರ್ ಕುಮಾರ್ ಅವರ ಬುದ್ದಿವಂತಿಕೆ ಮೆಚ್ಚುವಂತದ್ದು. ಜೊತೆಗೆ, ವಿಷ್ಣುದಾದ ಅಭಿಮಾನಿಯಾದ ನಾಯಕನನ್ನು, ಅವನ ಸುತ್ತಲಿನ ಸನ್ನಿವೇಶಗಳನ್ನು ಪ್ರೇಕ್ಷಕರಿಗೆ ಹಿಡಿಸುವಂತೆ ತಯಾರು ಮಾಡಿರುವುದು ಇನ್ನೊಂದು ವಿಶೇಷ. ನಿರ್ಮಾಪಕ ಶಶಿಧರ್ ಕೆ ಎಂ ಅವರ ಸಿನಿಮಾಪ್ರೇಮ, ಏನಕ್ಕೂ ಕಡಿಮೆಯಾಗದಂತೆ ಸಿನಿಮಾ ಮಾಡುವ ಉದ್ದೇಶ ಇವೆಲ್ಲವೂ ಸರಿಯಾಗಿ ಕಾಣುತ್ತದೆ.
ಇನ್ನು ನಾಯಕ ಪ್ರಜ್ವಲ್ ದೇವರಾಜ್ ಅವರು ಖಡಕ್ ನಟನೆ, ಭರ್ಜರಿ ಡೈಲಾಗ್ ಗಳ ಮೂಲಕ ತಮ್ಮದೇ ಛಾಪು ಮೂಡಿಸಿ, ಸಿನಿಪ್ರೇಮಿಗಳನ್ನ ಮೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀನಗರ್ ಕಿಟ್ಟಿ ಅವರ ಪಾತ್ರ, ಅದರಲ್ಲಿನ ಅವರ ನಟನೆ ಎಲ್ಲವೂ ನೆನಪಿನಲ್ಲಿ ಉಳಿಯುವಂತದ್ದು. ಈ ಮಾಸ್, ಆಕ್ಷನ್ ಗಳ ನಡುವೆ ಮನಸೆಳೆಯುವುದು ಮುದ್ದುಮುದ್ದಾಗಿ ಕಾಣಿಸಿಕೊಳ್ಳುವ ರಚಿತಾ ರಾಮ್. ತೆರೆಮೇಲೆ ಬಂದಾಗಲೆಲ್ಲ ಅಭಿಮಾನಿಗಳಿಗೆ ಸಂತಸ ತಂದು ಹೋಗುತ್ತಾರೆ.
ಇರುವ ಹಲವು ಪಾತ್ರಗಳ ನಡುವೆ ಹೆಚ್ಚಿನ ಗಮನ ಸೆಳೆಯುವುದು, ಅಕ್ಕನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಶೃತಿ, ಹಾಗು ಖಡಕ್ ವಿಲನ್ ಗಳಾಗಿ ಕಾಣಿಸಿಕೊಂಡಿರುವ ಶಿಷ್ಯ ದೀಪಕ್ ಹಾಗು ಕರಣ್ ಆರ್ಯನ್. ದೀಪಕ್ ಹಾಗು ಕರಣ್ ಅವರ ಅಭಿನಯ ಜನಮನ್ನಣೆ ಪಡೆಯುತ್ತಿದೆ. ಜೊತೆಗೆ ದೀಪಕ್ ಅವರ ಜೇಡ ಪಾತ್ರದ ಜೇಡರ ಹೇರ್ ಸ್ಟೈಲ್ ಕೂಡ ಪ್ರಶಂಸೆಗೆ ಕಾರಣಾವಾಗಿದೆ. ಶಿಷ್ಯ ದೀಪಕ್ ಚಂದನವನದಲ್ಲಿ ಮಿಂಚಲಿರೋ ಇನ್ನೊಬ್ಬ ಖಡಕ್ ವಿಲನ್ ಆಗಿ ರೂಪುಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.
ಪಾತ್ರಗಳ ಪರಿಚಯದ ಜೊತೆಗೆ ಬಿರುಸಾಗಿ ಸಾಗುವ ಎರಡನೇ ಅರ್ಧದಲ್ಲಿ ಒಂದಿಷ್ಟು ಅನವಶ್ಯಕ ದೃಶ್ಯಗಳಿಂದ ಸ್ವಲ್ಪ ಮಂದಗತಿಯಲ್ಲಿ ಸಾಗುತ್ತದೆ. ಅನೂಪ್ ಸೀಳಿನ್ ಅವರ ಸಂಗೀತದ ಹಾಡುಗಳು ನೆನಪಿನಲ್ಲಿ ಉಳಿದರೆ , ಮಿಥುನ್ ಅಶೋಕ್ ಅವರ ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಒಳ್ಳೆಯ ಅಂಶವಾಗಿದೆ. ಲವಿತ್ ಕುಮಾರ್ ಅವರ ಕ್ಯಾಮೆರಾ ಕೈಚಳಕ ಕೂಡ ಕಣ್ಮನ ಸೆಳೆಯುತ್ತದೆ.
ಒಟ್ಟಿನಲ್ಲಿ ಮನರಂಜನೆಗೆ ಎಲ್ಲೂ ಕಡಿಮೆಯಿರದೆ, ಆಕ್ಷನ್, ಪ್ರೀತಿ, ಅಕ್ಕನ ವಾತ್ಸಲ್ಯ, ಗೆಳೆತನ ಇವೆಲ್ಲವನ್ನೂ ತೋರುವಂತಹ ಒಂದೊಳ್ಳೆ ಕೌಟುಂಬಿಕ ಮನರಂಜನೆ ನೀಡುವಂತಹ ಉತ್ತಮ ಸಿನಿಮಾವಾಗಿ ‘ವೀರಂ’ ಹೊರಹೊಮ್ಮುತ್ತಿದೆ.



