ಡೈನಾಮಿಕ್ ಪ್ರಿನ್ಸ್ ಎಂದೇ ಖ್ಯಾತರಾಗಿರುವ ಪ್ರಜ್ವಲ್ ದೇವರಾಜ್ ಅವರು ಎಲ್ಲರಿಗೂ ಚಿರಪರಿಚಿತ. ಹಲವು ವರ್ಷಗಳಿಂದ ಚಂದನವನದ ತಂಡದಲ್ಲಿರುವ ಪ್ರಜ್ವಲ್, ಸುಮಾರು ಹಿಟ್ ಸಿನೆಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಈಗಲೂ ಕೂಡ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರ ಸದ್ಯದ ಮುಂದಿನ ಸಿನಿಮಾ ‘ವೀರಂ’. ಈಗ ‘ವೀರಂ’ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ತಂಡ ಕುಂಬಳಕಾಯಿ ಒಡೆದಿದೆ. ಇದರ ಜೊತೆಗೆ ಸಿನಿಮಾದ ಬಿಡುಗಡೆಯ ಬಗೆಗೂ ಮಾಹಿತಿ ನೀಡಿದ್ದಾರೆ.
ಕುಮಾರ್ ರಾಜ್ ಅವರು ರಚಿಸಿ ನಿರ್ದೇಶಿಸಿರುವ ‘ವೀರಂ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರು ನಾಯಕರಾದರೆ, ರಚಿತಾ ರಾಮ್ ನಾಯಕಿ. ಇನ್ನು ಇವರ ಜೊತೆಗೆ ಶ್ರೀನಗರ್ ಕಿಟ್ಟಿ, ವಿಶ್ವ, ಗಿರಿ ಶಿವಣ್ಣ, ದೀಪಕ್ ಮುಂತಾದ ನಟರು ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಪಕ್ಕ ಆಕ್ಷನ್ ಎಂಟರ್ಟೈನರ್ ಸಿನಿಮಾ ಆಗಿರಲಿದೆ. ಚಿತ್ರಕ್ಕೆ ಶಶಿಧರ್ ಕೆ ಎಂ ಅವರು ಬಂಡವಾಳ ಹೂಡಿದ್ದಾರೆ. ಅನೂಪ್ ಸೀಳಿನ್ ಅವರ ಹಾಡುಗಳು ಹಾಗು ಮಿಸ್ಟರ್ ಎಂ ಅವರ ಹಿನ್ನೆಲೆ ಸಂಗೀತ ಚಿತ್ರದಲ್ಲಿರಲಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗು ಟೀಸರ್ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಏಪ್ರಿಲ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ನಿಗದಿತ ದಿನಾಂಕಕ್ಕೆ ಕಾದು ನೋಡಬೇಕಿದೆ.

