ವಿಜಯ್ ಕಿರಗಂದೂರು ಅರ್ಪಿಸುತ್ತಿರುವ, ಕೆ.ಆರ್.ಜಿ ಸಂಸ್ಥೆ ನಿರ್ಮಿಸುತ್ತಿರುವ ಹಾಗೂ ರೋಹಿತ್ ಪದಕಿ ರಚಿಸಿ, ನಿರ್ದೇಶಿಸುತ್ತಿರುವ ‘ಉತ್ತರಕಾಂಡ’ ಚಿತ್ರದ ಮುಹೂರ್ತ ಕಳೆದ ವರ್ಷ ನಡೆದಿತ್ತು. ಆ ಬಳಿಕ ಸಿನಿಮಾದ ಬಗ್ಗೆ ಯಾವ ಅಪ್ಡೇಟ್ ಗಳು ಕೂಡ ಸಿಕ್ಕಿಲ್ಲ.
ನಟಿ ರಮ್ಯಾ ಬಹು ಸಮಯದ ಬಳಿಕ ಬಣ್ಣದ ಲೋಕಕ್ಕೆ ನಾಯಕಿಯಾಗಿ ಎಂಟ್ರಿ ಆಗುತ್ತಿರುವ ‘ಉತ್ತರಕಾಂಡ’ ಚಿತ್ರೀಕರಣ ಯಾವಾಗ ಆರಂಭವಾಗುತ್ತದೆ. ಯಾವಾಗ ಸಿನಿಮಾ ರಿಲೀಸ್ ಆಗುತ್ತದೆ ಎನ್ನುವುದನ್ನು ನಟಿ ರಮ್ಯಾ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಉತ್ಸವದ ವೇದಿಕೆಯಲ್ಲಿ ಮಾತಾನಾಡಿರುವ ಅವರು ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ನೀವೆಲ್ಲಾ ಕಾಯುತ್ತಿರುವ ‘ಉತ್ತರಕಾಂಡ’ ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ.
ಈ ಮಾತು ನೆರೆದಿದ್ದ ರಮ್ಯಾ ಅಭಿಮಾನಿಗಳಿಗೆ ಖುಷಿ ತಂದಿದ್ದು, ಸಂತಸದಿಂದ ಶಿಳ್ಳೆ, ಚಪ್ಪಳೆ ತಟ್ಟಿದ್ದರು.
ರಮ್ಯಾ ಅವರ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಕೂಡ ಶೂಟ್ ಮುಗಿಸಿ ತೆರೆಗೆ ಬರಲು ಸಿದ್ದವಾಗಿದೆ.

