ಹಾಸ್ಯದಿಂದ ಜನರಲ್ಲಿ ನಗು ತರಿಸಲೂ ಸೈ, ಭಾವನೆಗಳ ತುಂಬಿ ಕಣ್ಣೀರು ಸುರಿಸಲೂ ಸೈ ಎನಿಸಿಕೊಂಡ ಕನ್ನಡ ಚಿತ್ರರಂಗದ ಪ್ರಭುದ್ಧ ನಟ ಕೋಮಲ್ ಕುಮಾರ್ ಅವರು. ಬಹುಪಾಲು ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿರುವಂತಹ ಇವರು, ಕೊನೆಯದಾಗಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ನಂತರ ಮತ್ತೆಲ್ಲೂ ಬರಲೇ ಇಲ್ಲ. ಇದೀಗ ಸುಮಾರು ಮೂರು ವರ್ಷಗಳ ನಂತರ, ಮತ್ತದೇ ಹಾಸ್ಯದ ರಸದೌತಣ ಬಡಿಸಲು ಹೊಸ ಸಿನಿಮಾವೊಂದರ ಮೂಲಕ ಮರಳಿ ಬರುತ್ತಿದ್ದಾರೆ. ಆ ಸಿನಿಮಾವೇ ‘ಉಂಡೆನಾಮ’. ತನ್ನ ಟ್ರೈಲರ್ ಹಾಗು ಇತರ ವಿಡಿಯೋಗಳಿಂದ ಭಾರೀ ಸದ್ದು ಮಾಡುತ್ತಿರುವ ಈ ಹಾಸ್ಯಮಯ ಸಿನಿಮಾ ನಾಳೆ(ಏಪ್ರಿಲ್ 14) ಬೆಳ್ಳಿತೆರೆಗಳ ಮೇಲೆ ಬಿಡುಗಡೆಯಾಗುತ್ತಿದೆ.


ಟಿ ಆರ್ ಚಂದ್ರಶೇಖರ್ ಅರ್ಪಿಸುವ ಈ ಸಿನಿಮಾವನ್ನು ಕೆ ಎಲ್ ರಾಜಶೇಖರ್ ನಿರ್ದೇಶನ ಮಾಡಿದ್ದಾರೆ. ಸಿ ನಂದಕಿಶೋರ್ ‘ಉಂಡೆನಾಮ’ದ ನಿರ್ಮಾಪಕರು. ಇನ್ನೂ ಮದುವೆಯಾಗದ, ಮದುವೆಯ ಬಗ್ಗೆ ತುಂಬಾ ಆಸೆಗಳನ್ನು ಇಟ್ಟುಕೊಂಡಿರುವ ಯುವಕನಾಗಿ ಕೋಮಲ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ತಂದೆಯಾಗಿ ತಬಲಾ ನಾಣಿ, ಪೋಲಿ ಗೆಳೆಯ ಹರೀಶ್ ರಾಜ್, ನಾಯಕಿಯಾಗಿ ಧನ್ಯ ಬಾಲಕೃಷ್ಣ, ಜೊತೆಗೇ ತನಿಷಾ, ವೈಷ್ಣವಿ, ಅಪೂರ್ವ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇಂತವರ ಬದುಕಿಗೆ ಲಾಕ್ ಡೌನ್ ಆದರೆ ಏನೆಲ್ಲಾ ಪಜೀತಿಗಳು, ಏನೆಲ್ಲಾ ಅವಾಂತರಗಳು ಆಗುತ್ತವೆ ಎಂಬಂತಹ ಹಾಸ್ಯಮಯ ಪಯಣ ‘ಉಂಡೆನಾಮ’.
ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ಸಿನಿಮಾದಲ್ಲಿರಲಿದ್ದು, ನವೀನ್ ಕುಮಾರ್ ಎಸ್ ಅವರ ಛಾಯಾಗ್ರಹಣ ಹಾಗು ಕೆ ಎಂ ಪ್ರಕಾಶ್ ಅವರ ಸಂಕಲನ ಕೂದ ಸಿನಿಮಾದ ಭಾಗವಾಗಿರಲಿದೆ. ಹೊಸತರದ ಕಥೆಯ ಈ ಹಾಸ್ಯಚಟಾಕಿ ಇದೇ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.



