HomeNewsಏಪ್ರಿಲ್ ಗೆ 'ಉಂಡೆನಾಮ' ಹಾಕಲು ಬರುತ್ತಿದ್ದಾರೆ ಕೋಮಲ್ ಕುಮಾರ್!

ಏಪ್ರಿಲ್ ಗೆ ‘ಉಂಡೆನಾಮ’ ಹಾಕಲು ಬರುತ್ತಿದ್ದಾರೆ ಕೋಮಲ್ ಕುಮಾರ್!

ಸೆನ್ಸೇಷನಲ್ ಸ್ಟಾರ್ ಎಂಬ ಬಿರುದನ್ನು ಕನ್ನಡಿಗರಿಂದ ಪಡೆದಂತಹ ಹೆಸರಾಂತ ಹಾಸ್ಯನಟ, ಈಗಿನ ಯಶಸ್ವಿ ನಾಯಕನಟ ಕೋಮಲ್ ಕುಮಾರ್ ಅವರು ತಮ್ಮ ಮುಂದಿನ ಸಿನಿಮಾದ ಜೊತೆ ಜನರ ಮುಂದೆ ಮರಳಿ ಬರುತ್ತಿದ್ದಾರೆ. ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲು ಬರುತ್ತಿರೋ ಈ ಸಿನಿಮಾದ ಹೆಸರು ‘ಉಂಡೆನಾಮ’. ಕೊರೋನ ಸಂಧರ್ಭದ ಲಾಕ್ ಡೌನ್ ನಲ್ಲಿ ಸಾಮಾನ್ಯ ಜನರು ಅನುಭವಿಸಿದ ಸಂಕಷ್ಟಗಳನ್ನ ಹಾಸ್ಯಮಯವಾಗಿ ತೋರಿಸಲಿರುವ ಈ ‘ಉಂಡೆನಾಮ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಜನಮನ ಗೆಲ್ಲುತ್ತಿದೆ. ಇದರ ಜೊತೆಗೇ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಕೂಡ ಘೋಷಣೆ ಮಾಡಿದ್ದಾರೆ.

ಕೆ ಎಲ್ ರಾಜಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ‘ಉಂಡೆನಾಮ’ ಸಿನಿಮಾವನ್ನ ನಂದಕಿಶೋರ್ ಸಿ ಅವರು ನಿರ್ಮಾಣ ಮಾಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಶುರುವಿನಿಂದ ಕೊನೆಯವರೆಗೂ ಕಚಗುಳಿ ಇಟ್ಟಂತೆ ನಗು ತರಿಸುವಲ್ಲಿ ಯಶಸ್ವಿಯಾಗಿದೆ ಹಾಗು ಚಿತ್ರದ ಬಗೆಗೆ ಇಂತದ್ದೇ ನಗೆ ಚಟಾಕಿಯ ಭರವಸೆಯನ್ನು ಹುಟ್ಟಿಸಿದೆ. ಈ ಚಿತ್ರದ ಮೂಲಕ ಕೋಮಲ್, ಹರೀಶ್ ರಾಜ್ ಹಾಗು ತಬಲಾ ನಾಣಿ ಅವರು ಮೂವರು ಜೊತೆಯಾಗಿದ್ದು, ಹಾಸ್ಯಕ್ಕೆ ಯಾವುದೇ ಬರ ಇಲ್ಲ ಎಂಬುದು ಅಭಿಮಾನಿಗಳ ಅಭಿಪ್ರಾಯ. ನಾಯಕ ಕೋಮಲ್ ಅವರ ತಂದೆಯ ಪಾತ್ರದಲ್ಲಿ ತಬಲಾ ನಾಣಿ ಹಾಗು ಗೆಳೆಯನ ಪಾತ್ರದಲ್ಲಿ ಹರೀಶ್ ರಾಜ್ ಬಣ್ಣ ಹಚ್ಚಿದ್ದಾರೆ. ಇನ್ನು ನಾಯಕಿಯಾಗಿ ಧನ್ಯ ಬಾಲಕೃಷ್ಣ, ಹಾಗು ಇವರ ಜೊತೆ ಕೆಜಿಎಫ್ ಸಂಪತ್, ತನಿಷಾ ಕುಪ್ಪುಂದ, ಬ್ಯಾಂಕ್ ಜನಾರ್ಧನ್ ಮುಂತಾದ ಹೆಸರಾಂತ ನಟರು ಕೂಡ ನಟಿಸಿದ್ದು, ಟೀಸರ್ ನಲ್ಲಿನ ಇವರ ಹಾಜರಿ, ಇನ್ನೊಂದಷ್ಟು ಪ್ರಶಂಸೆಗೆ ಕಾರಣವಾಗಿದೆ.

ಸದ್ಯ ಇಷ್ಟೆಲ್ಲಾ ಹಾಸ್ಯದ ರಸದೌತಣ ಬಡಿಸಲು ಸಿದ್ದವಾಗಿರುವ ‘ಉಂಡೆನಾಮ’ ಸಿನಿಮಾ ಇದೇ ಏಪ್ರಿಲ್ 14ರಂದು ಭರ್ಜರಿಯಾಗಿ ಬಿಡುಗಡೆಯಗುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಕೆ ಎಲ್ ರಾಜಶೇಖರ್ ಅವರ ನಿರ್ದೇಶನದ ಪಕ್ಕ ಹಾಸ್ಯದ ಮನರಂಜನಾ ಸಿನಿಮಾಗೆ ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತವಿದ್ದು, ಕೆ ಎಂ ಪ್ರಕಾಶ್ ಅವರ ಸಂಕಲನವಿದೆ. ಟೀಸರ್ ನ ಮೂಲಕ ಭರವಸೆ ಮೂಡಿಸಿರೋ ‘ಉಂಡೆನಾಮ’ ಚಿತ್ರಮಂದಿರಗಳಲ್ಲೂ ನಗು ತರಿಸುವಲ್ಲಿ ಯಶಸ್ವಿಯಾಗುತ್ತದೆಯೇ ಎಂದು ಕಾದು ನೋಡಬೇಕಿದೆ.

RELATED ARTICLES

Most Popular

Share via
Copy link
Powered by Social Snap