ಕ್ರಿಕೆಟ್ ರಂಗದಲ್ಲಿ ಸದ್ಯ ಸದ್ದು ಮಾಡುತ್ತಿರುವುದು ಮಹಿಳಾ ಟಿ20 ವಿಶ್ವ ಕಪ್. ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ, ತನ್ನ ಲೀಗ್ ಹಂತವನ್ನ ಮುಗಿಸಿಕೊಳ್ಳಲು ಇನ್ನು ಕೇವಲ ಒಂದು ಪಂದ್ಯ ಆಡಬೇಕಿದೆ. ಇಂದು(ಫೆಬ್ರವರಿ 20) ಭಾರತೀಯ ಮಹಿಳಾ ತಂಡ ಐರೆಲ್ಯಾಂಡ್ ಎದುರಿಗೆ ಸರಣಿಯಲ್ಲಿನ ತಮ್ಮ ನಾಲ್ಕನೇ ಪಂದ್ಯ ಆಡಿದ್ದು, ಇದರಲ್ಲಿ ಜಯಿಸುವುದರ ಮೂಲಕ ವಿಶ್ವ ಕಪ್ ನ ಸೆಮಿಫೈನಲ್ ತಲುಪಿದ್ದಾರೆ.
‘ಬಿ’ ಗುಂಪಿಗೆ ನಿರ್ಣಾಯಕ ಪಂದ್ಯವಾಗಿದ್ದದ್ದು ಇಂದಿನ ಭಾರತ ಹಾಗು ಐರೆಲ್ಯಾಂಡ್ ನಡುವಿನ ಸೆಣಸಾಟ. ಈಗಾಗಲೇ ಸೆಮಿಫೈನಲ್ ತಲುಪಿದ್ದ ಬಲಿಷ್ಠ ಇಂಗ್ಲೆಂಡ್ ತಂಡದ ಜೊತೆಗೆ ಇನ್ನ್ಯಾವ ತಂಡ ಬಿ ಗುಂಪಿನಿಂದ ಸೆಮಿಫೈನಲ್ ಸೇರುತ್ತಾರೆ ಎಂಬ ಪ್ರಶ್ನೆಗೆ ಈ ಪಂದ್ಯ ಉತ್ತರ ನೀಡುವುದಿತ್ತು. ಹರ್ಮನ್ ಪ್ರೀತ್ ಕೌರ್ ಅವರ ನಾಯಕತ್ವದ ಭಾರತೀಯ ಮಹಿಳಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಆಟಗಾರರಾಗಿ ಅಂಕಣಕ್ಕಿಳಿದ ಉಪನಾಯಕಿ ಸ್ಮೃತಿ ಮಂದಣ್ಣ ಹಾಗು ಯುವಪಟಾಕಿ ಶಫಾಲಿ ವರ್ಮಾ, ಮೊದಲು ನಿಧಾನವಾಗಿಯೇ ಆಟ ಆರಂಭಿಸಿದರು. ಶಫಾಲಿ ವರ್ಮಾ ಅವರು ಕೇವಲ 24ರನ್ ಗಳಿಗೆ ಔಟ್ ಆದರೆ, ಸ್ಮೃತಿ ಮಂದಣ್ಣ ಅವರು ಬರೋಬ್ಬರಿ 87ರನ್ ಗಳನ್ನೂ ಕೇವಲ 56 ಎಸೆತಗಳಲ್ಲಿ ಗಳಿಸಿ, ತಂಡದ ಮೊತ್ತವನ್ನ 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಈ ನಡುವೆ ನಾಯಕಿ ಹರ್ಮನ್ ಪ್ರೀತ್ ಅವರು ತಮ್ಮ ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳಲ್ಲಿನ 3000 ರನ್ ಗಳನ್ನೂ ಪೂರೈಸಿಕೊಂಡರು.


ಅಂತೆಯೇ ಒಟ್ಟು 156 ರನ್ ಗಳ ಬೃಹತ್ ಗುರಿಯನ್ನ ಬೆನ್ನಟ್ಟಿ ಬ್ಯಾಟಿಂಗ್ ಗೆ ಇಳಿದ ಐರೆಲ್ಯಾಂಡ್ ತಂಡ ಎದುರಿಸಿದ ಮೊದಲನೇ ಎಸೆತದಲ್ಲೇ ರನ್ ಔಟ್ ನ ಮೂಲಕ ತಮ್ಮ ಮೊದಲ ಹುತ್ತರಿ ಕಳೆದುಕೊಂಡರು. ಗಾಬಿ ಲೆವೀಸ್ ಅವರ ಗಂಭೀರ ಆಟದ 25 ಎಸೆತಗಳ 32 ರನ್ ಗಳ ಸಹಾಯದಿಂದ ಐರೆಲ್ಯಾಂಡ್ ತಂಡ 8.2 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 54ರನ್ ಪೇರಿಸಿತ್ತು. ಇಷ್ಟರಲ್ಲಿ ಮಳೆ ಆರಂಭವಾಗಿ ಪಂದ್ಯವನ್ನ ಅರ್ಧಕ್ಕೆ ನಿಲ್ಲಿಸಲಾಯಿತು. ನಿಯಮದ ಪ್ರಕಾರ 8.2 ಓವರ್ ಗಳಿಗೆ ‘ಡಕ್ವರ್ಥ್ ಲೂಯಿಸ್(DLS)’ ಅನುಸಾರ ಐರೆಲ್ಯಾಂಡ್ ತಂಡ 59ರನ್ ಗಳನ್ನಾದರೂ ಮಾಡಬೇಕಿತ್ತು. ಆದರೆ ಹೀಗೆ ಮಾಡುವಲ್ಲಿ ಕೇವಲ ಐದು ರನ್ ಗಳಿಂದ ಐರೆಲ್ಯಾಂಡ್ ತಂಡ ಹಿಂದೆ ಬಿದ್ದಿತ್ತು. ಅಂತಿಮವಾಗಿ ಎಡೆಬಿಡದೆ ಸುರಿದ ಮಳೆ ನಿಲ್ಲದೆ ಇದ್ದದ್ದರಿಂದ ಕೇವಲ ಐದು ರನ್ ಗಳ ಅಂತರದಲ್ಲಿ ಭಾರತೀಯ ಮಹಿಳಾ ತಂಡವನ್ನ ಜಯಶಾಲಿ ಎಂದು ಘೋಷಿಸಲಾಯಿತು. ಅದ್ವಿತೀಯ ಬ್ಯಾಟಿಂಗ್ ಪ್ರದರ್ಶನ ತೋರಿದ ಸ್ಮೃತಿ ಮಂದಣ್ಣ ಅವರನ್ನು ‘ಪಂದ್ಯ ಶ್ರೇಷ್ಠ ಆಟಗಾರ್ತಿ’ ಎಂದು ಪುರಸ್ಕಾರಿಸಲಾಯಿತು.
ಅಂತೆಯೇ ಐರೆಲ್ಯಾಂಡ್ ತಂಡದ ಎದುರಿನ ಈ ಜಯದಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಈ ವಿಶ್ವ ಕಪ್ ನ ಸೆಮಿಫೈನಲ್ ಹಂತವನ್ನ ತಲುಪಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಹಾಗು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದು, ಇದೀಗ ಭಾರತ ಕೂಡ ಸೇರ್ಪಡೆಯಾಗಿದೆ. ನಾಳೆ ನಡೆಯಲಿರುವ ದಕ್ಷಿಣ ಆಫ್ರಿಕಾ ಹಾಗು ಬಾಂಗ್ಲಾದೇಶ ತಂಡದ ನಡುವಿನ ಪಂದ್ಯ ಇನ್ನೊಂದು ಸೆಮಿಫೈನಲ್ ಪ್ರವೇಶಾರ್ಥಿಯನ್ನ ಖಾತ್ರಿಗೊಳಿಸಲಿದೆ.

