ನವರಸ ನಾಯಕ ಜಗ್ಗೇಶ್ ಹಾಗು ‘ನೀರ್ದೋಸೆ’ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಅವರ ಜೋಡಿಯ ಎರಡನೇ ಸಿನಿಮಾ ‘ತೋತಾಪುರಿ’ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ಪಡೆದಿತ್ತು. ಈ ಜಗದಲ್ಲಿ ಎಲ್ಲರೂ ಒಂದೇ ಸಮಾನರು ಎಂಬ ಭಾವೈಕ್ಯತೆಯನ್ನ ಹಾಸ್ಯಾಸ್ಪದವಾಗಿ ಅಷ್ಟೇ ಮನರಂಜನಾತ್ಮಕವಾಗಿ ಜನರ ಮುಂದೆ ಇಟ್ಟಿದ್ದ ‘ತೋತಾಪುರಿ’ ಸಿನಿಪ್ರೇಮಿಗಳ ಮನಗೆದ್ದಿತ್ತು. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಎರಡನೇ ಭಾಗ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಅಂತೆಯೇ ‘ತೊತಾಪುರಿ 2’ ತನ್ನ ಚಿತ್ರೀಕರಣ ಮುಗಿಸಿಕೊಂಡು, ಬೆಳ್ಳಿತೆರೆಯ ಮೇಲೆ ಬರಲು ಬಹುಪಾಲು ಸಿದ್ದವಾಗಿ ಕೂತಿದೆ. ಮೊದಲ ಸಿನಿಮಾದ ಅಂತಿಮಘಟ್ಟದಲ್ಲಿ ಬಂದು, ವಿಶೇಷ ಅನುಭವ ನೀಡಿದಂತಹ ಚಂದನವನದ ನಟರಾಕ್ಷಸ ಡಾಲಿ ಧನಂಜಯ ಅವರು ಎರಡನೇ ಭಾಗದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ, ಸೋಮವಾರ, ಗುರುಪೂರ್ಣಿಮೆಯ ದಿನ, ಚಿತ್ರದ ಇಬ್ಬರು ನಾಯಕರಾದ ಜಗ್ಗಣ್ಣ ಹಾಗು ಡಾಲಿ ಧನಂಜಯ ಅವರ ಮೊದಲ ನೋಟವನ್ನ ಹೊತ್ತ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.


‘ಶಿವಲಿಂಗ’ ಸಿನಿಮಾ ಖ್ಯಾತಿಯ ನಿರ್ಮಾಪಕ ಕೆ ಎ ಸುರೇಶ್ ಅವರು ಬಂಡವಾಳ ಹೂಡಿರುವ ತೋತಾಪುರಿ 2, ತನ್ನ ಚಿತ್ರೀಕರಣ ಮುಗಿಸಿಕೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಸುತ್ತಿದೆ. ಮೊದಲ ಭಾಗದಲ್ಲಿ ಜಗಣ್ಣನ ಜೊತೆಗೆ ನಟಿಸಿದ್ದಂತಹ ಅದಿತಿ ಪ್ರಭುದೇವ, ವೀಣಾ ಸುಂದರ್, ದತ್ತಣ್ಣ, ಸುಮನಾ ರಂಗನಾಥ್ ಅವರ ಜೊತೆಗೆ ಡಾಲಿ ಧನಂಜಯ ಅವರು ಈ ‘ತೋತಾಪುರಿ 2’ ಸಿನಿಮಾದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸೆನ್ಸಾರ್ ಪ್ರಕ್ರಿಯೆ ಮುಗಿದ ಕೂಡಲೇ ಸಿನಿಮಾದ ಬಿಡುಗಡೆ ದಿನಾಂಕ ಹೊರಹಾಕುವಂತೆ ಹೇಳಿಕೊಂಡಿರುವ ಚಿತ್ರತಂಡ, ಸದ್ಯದಲ್ಲೇ ಸಿನಿಮಾದ ಟೀಸರ್, ಹಾಡುಗಳು ಹಾಗು ಟ್ರೈಲರ್ ಬಿಡುಗಡೆಯ ಬಗೆಗೂ ಹೇಳಲಿದೆ.
ಈ ಬಗ್ಗೆ ಮಾತನಾಡುವ ನಿರ್ಮಾಪಕ ಕೆ ಎ ಸುರೇಶ್, “ಮೊದಲ ಭಾಗಕ್ಕಿಂತಲೂ ಹೆಚ್ಚಿನ ನಿರೀಕ್ಷೆ ಹುಟ್ಟಿಹಾಕಿರುವ ‘ತೋತಾಪುರಿ 2’ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಪ್ರೇಕ್ಷಕರು ಮೆಚ್ಚುವಂತಹ ಮನರಂಜನೆ ಸಿನಿಮಾದಲ್ಲಿದೆ. ಡಾಲಿ ಅವರ ಅಭಿಮಾನಿಗಳಿಗಂತೂ ಇದೊಂದು ಮನರಂಜನೆಯ ಬಾಡೂಟ ಎನ್ನಬಹುದು. ಚಿತ್ರಮಂದಿರಗಳಲ್ಲಿ ನೋಡಲು ಬರುವವರಿಗೆ ಉತ್ತಮ ಮನರಂಜನೆಯ ಜೊತೆಗೆ ಜಗ್ಗೇಶ್ ಅವರ ಕಾಮಿಡಿ ಪಂಚ್ ಗಳು ಕೂಡ ಸಿಗಲಿದೆ. ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮೊದಲ ಪ್ರತೀ ಕೆಲವು ದಿನಗಳಲ್ಲಿ ಹೊರಬರಲಿದೆ. ಶೀಘ್ರದಲ್ಲೇ ಸಿನಿಮಾದ ಬಿಡುಗಡೆ ದಿನಾಂಕವನ್ನ ಕೂಡ ಹೊರಹಾಕುತ್ತೇವೆ” ಎಂದಿದ್ದಾರೆ.



