ದೊಡ್ಮನೆಯ ಎರಡನೇ ಮಗ, ಕನ್ನಡ ಚಿತ್ರರಂಗದ ಪ್ರಖ್ಯಾತ ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಹಾಗು ಪ್ರಖ್ಯಾತ ನಟಿ ಶೃತಿ ಅವರು ಮುಖ್ಯಪಾತ್ರಗಳಲ್ಲಿ ನಟಿಸಿರುವ, ಕೆ ನರೇಂದ್ರ ಬಾಬು ಅವರು ರಚಿಸಿ ನಿರ್ದೇಶಿಸಿರುವ ಹೊಸ ಸಿನಿಮಾ ’13’. ವಿಭಿನ್ನ ಶೀರ್ಷಿಕೆಯ ಈ ಸಿನಿಮಾ ಇದೀಗ ಬಿಡುಗಡೆಗೆ ಸಿದ್ದವಾಗಿ ನಿಂತಿದ್ದು, ಸದ್ಯ ಸಿನಿಮಾದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ. ಈ ಶುಭಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಭಾ ಮಾ ಹರೀಶ್ ಹಾಗು ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ರಾಜಕುಮಾರ್ ಅವರು ಅತಿಥಿಯಾಗಿ ಆಗಮಿಸಿದ್ದರು. ಸಿಂಗಲ್ ಸೇವಂತಿ ಎಂಬ ಈ ಹಾಡು ಒಂದು ಐಟಂ ಸಾಂಗ್ ಆಗಿದ್ದು, ಲಕ್ಷ್ಮೀ ದಿನೇಶ್ ಅವರು ರಚಿಸಿ, ಇಂದೂ ನಾಗರಾಜ್ ಅವರು ಹಾಡಿದ್ದಾರೆ. ಬಾಂಬೆ ಮೂಲದ ಪ್ರೀತಿ ಗೊಸ್ವಾಮಿ ಅವರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.


ಪಲ್ಲಕ್ಕಿ, ಓ ಗುಲಾಬಿ ಎಂಬಂತಹ ಪ್ರೇಮಕಥೆಗಳನ್ನ ತೆರೆಯ ಮೇಲೆ ತಂದಿದ್ದಂತಹ ಕೆ ನರೇಂದ್ರ ಬಾಬು ಅವರು ಇದೇ ಮೊದಲ ಬಾರಿಗೆ ಭಾವನೆಗಳನ್ನೊಳಗೊಂಡ ಒಂದು ಸಮಾಜಮುಖಿ ಸಿನಿಮಾವನ್ನ ಮಾಡಿದ್ದಾರೆ. ಈ ಬಗ್ಗೆ ಮಾತನಾಡುವ ಅವರು, “ನಾನು ಈ ಕಥೆ ಬರೆದಾಗ ಮೋಹನ್ ಪಾತ್ರಕ್ಕೆ ಮೊದಲು ನೆನಪಾದದ್ದೇ ರಾಘಣ್ಣ. ಜೊತೆಗೆ ಮುಸ್ಲಿಂ ಮಹಿಳೆ ಸಾಹೀರಾಬಾನು ಪಾತ್ರಕ್ಕೆ ಶೃತಿ ಅವರು ನಟಿಸಿದರು. ಇವರಿಬ್ಬರೂ ನಮ್ಮ ಸಿನಿಮಾಗೆ ಎರಡು ಕಂಗಳಿದ್ದಂತೆ. ಇದೊಂದು ತಂಡದ ಸಿನಿಮಾ. ನಾವು ಈ ಸಿನಿಮಾ ಮಾಡುವಾಗ ಹಲವು ಸಮಸ್ಯೆಗಳನ್ನ ಎದುರಿಸಿದ್ದೆವು. ಎಲ್ಲ ಮುಗಿದು ಚಿತ್ರದ ಮೊದಲ ಪ್ರತಿ ಕಂಡ ಮೇಲೆ ಈ ಸಮಸ್ಯೆಗಳನ್ನೆಲ್ಲ ಮರೆತು ತುಂಬಾ ಖುಷಿಪಟ್ಟೆವು. ಸದ್ಯ ನಮ್ಮ ಸಿನಿಮಾ ಸಿಂಗಲ್ ಸೇವಂತಿ ಎಂಬ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಬಾಂಬೆ ಮೂಲದ ಪ್ರೀತಿ ಗೊಸ್ವಾಮಿ ಅವರು ಈ ಹಾಡಿಗೆ ಹೆಜ್ಜೆ ಹಾಕಿದ್ದು, ಸ್ಲೋಗನ್ ಬಾಬು ಅವರು ಸಂಗೀತ ನೀಡಿದ್ದಾರೆ. ನಿಮ್ಮ ಪ್ರೋತ್ಸಾಹ ನಮ್ಮ ಮೇಲಿರಲಿ” ಎಂದರು.
ನಂತರ ಮಾತನಾಡಿದ ರಾಘಣ್ಣ, ” ಈ ಸಿನಿಮಾದ ಕಥೆ ಹಾಗು ಶೀರ್ಷಿಕೆ ನನ್ನನ್ನು ಉತ್ಸುಕನಾಗಿ ಮಾಡಿತು. ಸುಮಾರು ಇಪ್ಪತ್ತೈದು ವರ್ಷಗಳ ನಂತರ ಶೃತಿ ಅವರ ಜೊತೆಗೆ ನಟಿಸಿದ್ದೇನೆ. ಸಿನಿಮಾ ಕೂಡ ಒಂದೊಳ್ಳೆ ಅನುಭವ ನೀಡಿದೆ” ಎಂದರು. ನಟಿ ಶೃತಿ, “ಇದೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ನಟಿಸಿದ್ದೇನೆ. ಸಾಹಿರಬಾನು ಎಂಬ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಸಿನಿಮಾ ಕೂಡ ಅಷ್ಟೇ ಅದ್ಭುತವಾಗಿದೆ” ಎಂದರು. ನಿರ್ಮಾಪಕರಲ್ಲೊಬ್ಬರಾದ ಸಂಪತ್ ಕುಮಾರ್ ಅವರು ಮಾತನಾಡುತ್ತಾ, “ನಾನು ಹಾಗು ನರೇಂದ್ರ ಬಾಬು ಅವರ ಜೊತೆಯಾಗಿ ಈ ಹಿಂದೆ ಅಮೃತವಾಹಿನಿ ಎಂಬ ಸಿನಿಮಾ ಮಾಡಿದ್ದೆವು. ಈ ಸಿನಿಮಾವನ್ನು ಕೂಡ ಸಿನಿಮಾ ಮೇಲಿನ ಅಪಾರ ಪ್ರೀತಿ ಹಾಗು ತುಂಬಾ ಶ್ರದ್ದೆ ಇಟ್ಟು ಮಾಡಿದ್ದೇವೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಮೂಡಿಬಂದಿದೆ” ಎಂದರು.
’13’ ಸಿನಿಮಾದ ಇತರ ನಿರ್ಮಾಪಕರುಗಳಾದ ಮಂಜುನಾಥ್ ಗೌಡ, ಹೆಚ್ ಎಸ್ ಮಂಜುನಾಥ್ ಹಾಗು ಕೇಶವ ಮೂರ್ತಿ ಅವರು ಕೂಡ ಈ ವೇಳೆ ಉಪಸ್ಥಿತರಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಭಾ ಮಾ ಹರೀಶ್ ಅವರು ‘ಸಿಂಗಲ್ ಸೇವಂತಿ’ ಹಾಡನ್ನು ಬಿಡುಗಡೆ ಮಾಡಿದರು. ರಾಘಣ್ಣನ ಪುತ್ರ ವಿನಯ್ ರಾಜಕುಮಾರ್ ಅವರು ಮಾತನಾಡಿ, “ಗೆಲುವಿನ ಸರದಾರದ ನಂತರ ಇದೀಗ ಮತ್ತೆ ಅಪ್ಪಾಜಿ ಅವರು ಶೃತಿ ಅವರೊಂದಿಗೆ ನಟಿಸಿದ್ದಾರೆ. ಸಿನಿಮಾದ ಟೀಸರ್ ನೋಡಿಯೇ ತುಂಬಾ ಖುಷಿಪಟ್ಟಿದ್ದೆ. ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿದೆ” ಎಂದರು.
ಭಾವನಾತ್ಮಕ ಪಯಣದ ಜೊತೆಗೆ, ಸಮಾಜಕ್ಕೆ ಸಂದೇಶ ಕೊಡುವಂತಹ ಸಿನಿಮಾ ಕೆ ನರೇಂದ್ರ ಬಾಬು ಅವರ ’13’. ಕುತೂಹಲ ಹುಟ್ಟಿಸುವ ಕಥಾಹಂದರ, ಸಸ್ಪೆನ್ಸ್ ಥ್ರಿಲರ್ ರೀತಿಯ ಮನರಂಜನಾತ್ಮಕ ಸಿನಿಮಾವಾಗಿ ’13’ ಹೊರಹೊಮ್ಮಿದೆ.



