ಅದಾಗಲೇ ಕನ್ನಡ ಸಿನಿ ಪ್ರೇಕ್ಷಕರೆದುರು ಪಾರು ಗೆ ಐ ಲವ್ ಯು ಎಂದಿದ್ದ ನಟ ರಂಜನ್ ಹಾಸನ್ ಈಗ ಜಗದ್ ಜ್ಯೋತಿ ಮೂವಿ ಮೇಕರ್ಸ್ ಲಾಂಛನದಡಿಯಲ್ಲಿ ಸ್ವತಃ ನಿರ್ಮಾಪಕರೂ ಆಗಿ ಅಖಾಡಕ್ಕಿಳಿದು, ಬಹುತೇಕ ಹೊಸಾ ಟೀಂನೊಂದಿಗೆ ‘ದಿ ಚೆಕ್ ಮೇಟ್’ ಟೈಟಲ್ ನೊಂದಿಗೆ ‘ರೌಂಡ್ ಒನ್ ಪ್ಲೇ ದ ಗೇಮ್’ ಎನ್ನುವ ಕುತೂಹಲಕಾರಿ ಟ್ಯಾಗ್ ಲೈನ್ ಇಟ್ಟುಕೊಂಡು ಸುದ್ದೀನೂ ಮಾಡ್ದೆ, ಅಬ್ಬರದ ಸದ್ದೂ ಇಲ್ದೆ, ಚಿತ್ರೀಕರಣ, ಸೆನ್ಸಾರ್ ಮುಗಿಸಿ ಮೊದಲ ಹಂತದ ಪ್ರಚಾರಕ್ಕಾಗಿ ಟ್ರೇಲರನ್ನೂ ಬಿಡುಗಡೆಗೊಳಿಸಿ ಥ್ರಿಲಿಂಗ್ ಕಥಾನಕ ಹೊತ್ತು ಇದೇ ಶುಕ್ರವಾರ, ಅಕ್ಟೋಬರ್ 7ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.


ವಿಶೇಷವೆಂದರೆ, ಸಿನಿಮಾ ನಿರ್ದೇಶನದ ಹೊಣೆ ಹೊತ್ತಿರೋದು ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಭಾರತೀಶ್ ವಶಿಷ್ಠ ಹಾಗೂ ಸಂತೋಷ್ ಚಿಪ್ಪಾಡಿ ಯುವ ಪ್ರತಿಬೆಗಳು. ನಟ ರಂಜನ್ ಹಾಸನ್ ಅವರು ಹೇಳುವಂತೆ, ಲವ್ ಬ್ರೇಕಪ್ ಆಗಿರೋ ನಾಲ್ಕು ಪಡ್ಡೆ ಹುಡುಗರು ಒಂದೆಡೆ ಸೇರಿದಾಗ ಪರಸ್ಪರ ಚರ್ಚೆ ನಡೆಯೋ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ಕುತೂಹಲಕಾರಿ ವಿಷಯವನ್ನೇ ಆಧರಿಸಿ ದಿ ಚೆಕ್ ಮೇಟ್ ಸಿನಿಮಾ ತನ್ನ ವಿಸ್ತಾರವನ್ನ ಪಡೆದುಕೊಂಡು, ಆ ನಾಲ್ಕೂ ವಿಭಿನ್ನ ಯುವಕರ ಮನಸ್ಸಿನಲ್ಲಾಗುವ ವಿಭಿನ್ನ ಬದಲಾಚಣೆಯ ವಿಷಯ ಹಾಗೂ ಬುದ್ಧಿವಂತರ ಆಟ ಎಂದೇ ಪ್ರಸಿದ್ಧವಾಗಿರೋ ಚದುರಂಗವನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾದ ವಸ್ತು ತಯಾರಾಗಿದೆ.


ಮೊನ್ನೆಯಷ್ಟೇ ಈ ಸಿನಿಮಾದ ಟ್ರೈಲರ್ ಅನಾವರಣಗೊಂಡಿದೆ. ಇದೊಂದು ಹೊಸ ರೀತಿಯ ಕಥೆಯಾಗಲಿದೆ ಎಂಬುದು ಈ ಚಿತ್ರ ತಂಡದ ಅಭಿಪ್ರಾಯ. ಸ್ನೇಹ-ಪ್ರೀತಿ- ಬದುಕು ಈ ಮೂರರಲ್ಲಿ ಮುಖ್ಯವಾದದ್ದು ಯಾವುದು!? ಈ ಒಂದೊಂದೂ ಎದುರಾದಾಗ ಮಿಕ್ಕೆರಡು ಮರೆತು ಹೋಗುತ್ತವೆ ಎಂಬುದನ್ನೇ ಚಿತ್ರಕಥೆಯ ಕಾನ್ಸೆಪ್ಟ್ ಮಾಡಿಕೊಂಡು ಸಿನಿಮಾ ತಯಾರಾಗಿದೆ. ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಹಣ, ಶಶಾಂಕ್ ಶೇಷಗಿರಿ ಅವರ ಸಂಗೀತ, ಈ.ಎಸ್ ಈಶ್ವರ್ ಅವರ ಸಂಕಲನ, ವಯ್ಲೆಂಟ್ ವೇಲು ಅವರ ಸಾಹಸ, ಪ್ರಮೋದ್ ಅವರ ಕಲಾ ನಿರ್ದೇಶನ, ಕಾಮಿಡಿ ಹಿನ್ನೆಯಯಲ್ಲಿ ನಡೆಯುವ ಲವ್ ಸ್ಟೋರಿಯಲ್ಲಿ ಪ್ರೀತು ಪೂಜಾ ನಾಯಕಿಯಾಗಿ ಅಭಿನಯಿಸಿದ್ದಾರೆ.
ಸರ್ದಾರ್ ಸತ್ಯ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಜಯ್ ಚೆಂಡೂರ್, ಪ್ರದೀಪ್ ಪೂಜಾರಿ ಹಾಗೂ ವಿಶ್ವಜಿತ್ ಅವರು ನಾಯಕನ ಸ್ನೇಹಿತರಾಗಿ ಅಭಿನಯಿಸಿದ್ದಾರೆ. ನೀನಾಸಂ ಅಶ್ವಥ್ ಸೇರಿದಂತೆ, ಈಗಾಗಲೇ ತಮ್ಮ ಕಾಮಿಡಿ ನಟನೆಯಿಂದ ಪ್ರೇಕ್ಷಕರ ಮನ ಸೂರೆಗೊಂಡಿರುವ ಮಜಾಟಾಕೀಸ್ ನ ರಾಜಶೇಖರ್, ಕಾಕ್ರೋಚ್ ಸುಧಿ, ಹುಲಿ ಕಾರ್ತಿಕ್ ಹಾಗೂ ಚಿಲ್ಲರ್ ಮಂಜ ಇವರುಗಳ ಮನೋಜ್ಞ ಅಭಿನಯಕ್ಕಂತೂ ಈ ಚಿತ್ರದಲ್ಲಿ ಕೊರತೆ ಇರಲಾರದು!



