‘ಎದೆಗಾರಿಕೆ’,’ಡೆಡ್ಲಿ ಸೋಮ’ ಮುಂತಾದ ಹಿಟ್ ಸಿನಿಮಾಗಳ ಜೊತೆಗೇ ಇತ್ತೀಚಿನ ದರ್ಶನ್ ಅವರ ‘ಚಕ್ರವರ್ತಿ’,’ಮುಂದುವರೆದ ಅಧ್ಯಾಯ’ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿರುವಂತಹ ಪ್ರಖ್ಯಾತ ನಟ ಆದಿತ್ಯ ಅವರು. ಸದ್ಯ ಸಿದ್ಧತೆಯಲ್ಲಿರುವ ಅವರ ಮುಂದಿನ ಸಿನಿಮಾ ‘ಟೆರರ್’. ಸಿಲ್ಕ್ ಮಂಜು ಅವರ ನಿರ್ಮಾಣದಲ್ಲಿ, ರಂಜನ್ ಶಿವರಾಮ ಗೌಡ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಿಂದ ಇದೇ ಮೇ 4ರಂದು ಅವರ ಜನ್ಮದಿನದ ಸಲುವಾಗಿ ಚಿತ್ರದಿಂದ ಹೊಸ ಟೀಸರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ಕಬ್ಜ’ ಸಿನಿಮಾ ಖ್ಯಾತಿಯ ನಿರ್ದೇಶಕ – ನಿರ್ಮಾಪಕರಾದ ಆರ್ ಚಂದ್ರು ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದರು.


ಈ ವೇಳೆ ಮಾತನಾಡಿದ ನಟ ಆದಿತ್ಯ ಅವರು, “ನಿರ್ದೇಶಕ ರಂಜನ್ ಅವರು ಹೇಳಿದ ಕಥೆ ನನಗೆ ತುಂಬಾ ಇಷ್ಟವಾಯಿತು. ಕನ್ನಡಕ್ಕೆ ‘A’ ಎಂಬ ಒಳ್ಳೆಯ ಸಿನಿಮಾ ನೀಡಿದಂತಹ ಸಿಲ್ಕ್ ಮಂಜು ಅವರ ನಿರ್ಮಾಣದಲ್ಲಿ ನಮ್ಮ ಚಿತ್ರ ‘ಟೆರರ್’ ಮೂಡಿಬರುತ್ತಿದೆ. ನನ್ನ ಹುಟ್ಟುಹಬ್ಬದಂದು ಟೀಸರ್ ಬಿಡುಗಡೆ ಮಾಡಿದ ತಂಡಕ್ಕೂ ಹಾಗು ಇಲ್ಲಿ ಆಗಮಿಸಿರುವ ಎಲ್ಲರಿಗೂ ನನ್ನ ಧನ್ಯವಾದಗಳು” ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿ ಟೀಸರ್ ಬಿಡುಗಡೆ ಮಾಡಿದಂತಹ ಆರ್ ಚಂದ್ರು ಅವರು ಮಾತನಾಡಿ, “ಸಿನಿಮಾ ಶೀರ್ಷಿಕೆ ‘ಟೆರರ್’ನಲ್ಲೆ ಒಂದು ಫೈರ್ ಇದೆ. ಟೀಸರ್ ನಲ್ಲಿನ ಸನ್ನಿವೇಶಗಳು ಗಮನ ಸೆಳೆಯುತ್ತವೆ. ಟೀಸರ್ ನೋಡಿದರೆ ಈ ಸಿನಿಮಾ ಹಿಟ್ ಆಗುವ ಎಲ್ಲಾ ಸುಳಿವುಗಳು ಸಹ ಕಾಣಿಸುತ್ತಿವೆ” ಎಂದರು.
“ನಿರ್ಮಾಪಕರಾದ ಸಿಲ್ಕ್ ಮಂಜು ಅವರಿಂದಲೇ ಈ ಸಿನಿಮಾ ಸಾಧ್ಯವಾಗುತ್ತಿದೆ ಎನ್ನಬಹುದು. ಅವರು ಕಥೆ ಕೇಳಿದ ಕೂಡಲೇ ಸಿನಿಮಾ ಮಾಡಲು ಒಪ್ಪಿಕೊಂಡರು. ಈಗಾಗಲೇ ಚಿತ್ರದ 30%ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಆದಿತ್ಯ ಅವರು ನಾಯಕರಾಗಿ ನಟಿಸುತ್ತಿದ್ದರೆ, ಶ್ರೀನಗರ್ ಕಿಟ್ಟಿ ಅವರು ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರಿನ ಆಸುಪಾಸಿನಲ್ಲೇ ಚಿತ್ರದ ಬಹುಪಾಲು ಚಿತ್ರೀಕರಣ ನಡೆಸಲಾಗಿದೆ” ಎಂದರು ನಿರ್ದೇಶಕ ರಂಜನ್ ಶಿವರಾಮ ಗೌಡ
ಬ್ಲಾಕ್ ಬಸ್ಟರ್ ಆಗಿದ್ದ ‘A’ ಸಿನಿಮಾ ಬಿಡುಗಡೆಯಾಗಿ ಸುಮಾರು 25 ವರ್ಷಗಳು ಕಳೆದ ಮೇಲೆ ಮತ್ತೊಂದು ಸಿನಿಮಾವನ್ನ ನಿರ್ಮಾಪಕ ಸಿಲ್ಕ್ ಮಂಜು ಅವರು ಮಾಡುತ್ತಿದ್ದಾರೆ. ಹಾಗಾಗಿ ನಿಮ್ಮೆಲ್ಲರ ಪ್ರೋತ್ಸಾಹ ಅತ್ಯಗತ್ಯ ಎಂದು ಅವರು ಸಹ ನುಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್, ನಿರ್ಮಾಪಕರಾದ ದೇವೇಂದ್ರ ರೆಡ್ಡಿ, ರಮೇಶ್ ರೆಡ್ಡಿ ಜೊತೆಗೇ ಶ್ರೀನಗರ ಕಿಟ್ಟಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು. ಸದ್ಯ ಬಿಡುಗಡೆಯಾಗಿರುವ ‘ಟೆರರ್’ ಸಿನಿಮಾದ ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ.



