ಇತ್ತೀಚಿನ ಕೆಲವು ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಉಳಿದಿದ್ದ ಮೇಘನಾ ರಾಜ್ ಸರ್ಜಾ ಅವರು ಇದೀಗ ಮತ್ತೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅದು ಕೂಡ ಒಂದು ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾದ ಮೂಲಕ. ತಮ್ಮ ಪೋಸ್ಟರ್ ಗಳು, ತಾರಾಗಣ ಇವೆಲ್ಲದರಿಂದ ಬಾರೀ ಸದ್ದು ಮಾಡಿದ್ದ ಈ ತತ್ಸಮ ತದ್ಭವ’ ಎಂಬ ಸಿನಿಮಾ ಇದೀಗ ತನ್ನ ಟೀಸರ್ ಜೊತೆಗೆ ಮರಳಿ ಬಂದಿದೆ. ಸದ್ಯ ಈ ಟೀಸರ್ ಎಲ್ಲರ ಮನಸೆಳೆಯುತ್ತಿದೆ.
‘ನನ್ ಗಂಡ ಕಾಣಸ್ತಿಲ್ಲ’ ಎಂಬ ಮೇಘನಾ ರಾಜ್ ಅವರ ಡೈಲಾಗ್ ಮೂಲಕ ಆರಂಭವಾಗುವ ತತ್ಸಮ ತದ್ಭವ ಟೀಸರ್, ಸಿನಿಮಾ ಒಂದು ಕುತೂಹಲಕಾರಿ ಥ್ರಿಲರ್ ಕಥೆಯನ್ನ ಹೊಂದಿರಲಿದೆ ಎಂಬುದನ್ನ ಸಾರಿ ಹೇಳುತ್ತದೆ. ಸಿನಿಮಾದ ಮತ್ತೊಂದು ಮುಖ್ಯಪಾತ್ರ, ಪೊಲೀಸ್ ಅಧಿಕಾರಿಯಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಬಣ್ಣ ಹಚ್ಚಿದ್ದಾರೆ. ಪನ್ನಗಾಭರಣ, ಸ್ಪೂರ್ತಿ ಅನಿಲ್, ಚೇತನ್ ನಂಜುಂಡಯ್ಯ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾದ ಸೃಷ್ಟಿಕರ್ತ ವಿಶಾಲ್ ಅತ್ರೇಯ ಅವರು. ಇದೊಂದು ಕೊನೆವರೆಗೂ ಕುತೂಹಲವನ್ನೇ ಹೆಣೆವಂತ ಥ್ರಿಲರ್ ಆಗಿರಲಿದ್ದು, ಇಲ್ಲಿನ ತಾರಾಗಣ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.


ಮೇಘನಾ ರಾಜ್ ಸರ್ಜಾ ಅವರಿಗೆ ಇದೊಂದು ಕಮ್ ಬ್ಯಾಕ್ ಸಿನಿಮಾ. ಇವರ ಹಾಗು ಪ್ರಜ್ವಲ್ ದೇವರಾಜ್ ಅವರ ಜೊತೆಗೆ ಶೃತಿ, ಗಿರಿಜಾ ಲೋಕೇಶ್, ಅರವಿಂದ್ ಅಯ್ಯರ್, ಬಾಲಾಜಿ ಮನೋಹರ್, ಮಹತಿ, ನಾಗಾಭರಣ ಸೇರಿದಂತೆ ಇನ್ನೂ ಹಲವು ಚಿರಪರಿಚಿತ ಹೆಸರು ಸಿನಿಮಾದ ತಾರಾಗಣದಲ್ಲಿದೆ. ವಾಸುಕಿ ವೈಭವ್ ಅವರ ಸಂಗೀತ ಸಿನಿಮಾದಲ್ಲಿದೆ. ಪೊಲೀಸ್ ತನಿಖೆ ಕಥೆಯ ಪ್ರಮುಖ ಭಾಗವಾಗಿರುವ ಸಾಧ್ಯತೆಯಿದ್ದು, ಅಲ್ಲಿನ ಸುಳಿವು, ತಿರುವು ಇವೆಲ್ಲ ಸಿನಿಮಾದ ಮುಂದಿನ ಕಥೆ ಹೇಳಲಿವೆ. ಒಟ್ಟಿನಲ್ಲಿ ಕನ್ನಡದಿಂದ ಒಂದೊಳ್ಳೆ ಥ್ರಿಲರ್ ಸಿನಿಮಾ ಹೊರಬರಲು ಸಿದ್ಧವಾಗಿದೆ.
ಬಿಡುಗಡೆಯಾಗಿರುವ ಸಿನಿಮಾದ ಟೀಸರ್ ಗೆ ಎಲ್ಲೆಡೆಯಿಂದ ಭರಪೂರ ಮೆಚ್ಚುಗೆ ಸಿಗುತ್ತಿದೆ. ಮೇಘನಾ ರಾಜ್ ಅವರಿಗೆ ಮಲಯಾಳಂ ಚಿತ್ರರಂಗದಲ್ಲೂ ಉತ್ತಮ ಪ್ರಖ್ಯಾತಿ ಇರುವ ಕಾರಣದಿಂದಾಗಿ, ಕನ್ನಡದ ಜೊತೆಗೆ ಮಲಯಾಳಂ ನಲ್ಲೂ ಕೂಡ ಸಿನಿಮಾ ಬಿಡುಗಡೆಯಾಗಲಿದೆ. ಈ ಆಗಸ್ಟ್ ತಿಂಗಳಿನಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವ ಸಾಧ್ಯತೆಯಿದೆ.

