‘ಒಂದು ಮೊಟ್ಟೆಯ ಕಥೆ’,’ಗರುಡ ಗಮನ ವೃಷಭ ವಾಹನ’ ಸಿನಿಮಾಗಳ ಖ್ಯಾತಿಯ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಸದ್ಯ ‘ಟೋಬಿ’ಯಾಗಿ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಫಸ್ಟ್ ಲುಕ್ ನಿಂದ ಸಿನಿಪ್ರೇಮಿಗಳಲ್ಲಿ ಬಾರೀ ನಿರೀಕ್ಷೆ ಹುಟ್ಟಿಸಿರೋ ರಾಜ್ ಬಿ ಶೆಟ್ಟಿ ನಟಿಸುತ್ತಿರುವ ‘ಟೋಬಿ’ ಇದೇ ಆಗಸ್ಟ್ 25ಕ್ಕೆ ಬಿಡುಗಡೆಯಾಗುತ್ತಿದೆ. ಆದರೆ ಇದಕ್ಕೂ ಮುನ್ನ ಘೋಷಣೆಯಾದದ್ದು, ರಾಜ್ ಬಿ ಶೆಟ್ಟಿ ಹಾಗು ರಮ್ಯಾ ಅವರ ಕಾಂಬಿನೇಶನ್ ನ ‘ಸ್ವಾತಿ ಮುತ್ತಿನ ಮಳೆಹನಿಯೇ’. ಹಾಗಾದರೆ ಈ ಸಿನಿಮಾದ ಕಥೆ ಏನಾಯಿತು? ನಂತರ ಘೋಷಣೆಯಾದ ‘ಟೋಬಿ’ ಹೇಗೆ ಈ ರಮ್ಯಾ ರಾಜ್ ಸಿನಿಮಾಗೂ ಮುನ್ನ ಬರುತ್ತಿದೆ? ಈ ಎಲ್ಲಾ ಪ್ರಶ್ನೆಗಳಿಗೆ ರಾಜ್ ಬಿ ಶೆಟ್ಟಿ ಉತ್ತರಿಸಿದ್ದಾರೆ.
” ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾ ಮಾಡಬೇಕಾದರೇನೇ ನಮ್ಮ ತಲೆಯಲ್ಲಿದ್ದದ್ದು, ಒಂದು ಮನಸ್ಸಿಗೆ ಹತ್ತಿರವಾಗುವಂತಹ, ಬಹು ಆಪ್ತ ಎನಿಸುವ ಒಂದೊಳ್ಳೆ ಸಿನಿಮಾ ಮಾಡಬೇಕೆಂದು. ಎಲ್ಲರ ಜೊತೆಗೆ ಮನಕ್ಕೆ ಮುದ ನೀಡುವಂತಹ ಇಡೀ ಮನೆಯವರು ಜೊತೆಯಾಗಿ ಕೂತು ನೋಡಬಹುದಾದಂತಹ, ಓಟಿಟಿ ಪರದೆ ಮೇಲೆ ನೋಡುವಂತಹ ಒಂದೊಳ್ಳೆ ಸಿನಿಮ ಆಗಿರಬೇಕು ಎಂಬುದು ನಮ್ಮ ಗುರಿಯಾಗಿದ್ದದ್ದು.


ಸದ್ಯ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ಮುಗಿದಿದ್ದು, ಮಿಕ್ಸಿಂಗ್ ನ ಕೆಲ ಕೆಲಸಗಳು ಬಾಕಿ ಇವೆ ಅಷ್ಟೇ. ಅದು ಕೂಡ ಇನ್ನೊಂದು ವಾರ ಅಥವಾ ಹತ್ತು ದಿನಗಳಲ್ಲಿ ಮುಗಿಯುತ್ತದೆ. ‘ಸ್ವಾತಿ ಮುತ್ತಿನ ಮಳೆಹನಿಯೇ’ ಸಿನಿಮಾದ ನಿರ್ಮಾಪಕರು ಏನಾದರೂ ಒಂದು ಓಟಿಟಿ ಸಂಸ್ಥೆಯ ಜೊತೆಗೆ ಉತ್ತಮ ಡೀಲ್ ಮಾಡಿಕೊಂಡರೆ, ನಮ್ಮ ‘ಟೋಬಿ’ ಸಿನಿಮಾಗೂ ಮುನ್ನವೇ ‘ಸ್ವಾತಿ ಮುತ್ತಿನ ಮಳೆಹನಿಯೇ’ ಬಿಡುಗಡೆಯದರೂ ಆಗಬಹುದು” ಎಂದಿದ್ದಾರೆ ರಾಜ್ ಬಿ ಶೆಟ್ಟಿ.
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರ ನಿರ್ಮಾಣದಲ್ಲಿ, ಸಿರಿ ರವಿಕುಮಾರ್ ಅವರ ಜೊತೆಗೆ ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಈ ‘ಸ್ವಾತಿ ಮುತ್ತಿನ ಮಳೆಹನಿಯೇ’ ಸಿನಿಮಾ ಬಹಳ ಹಿಂದೆಯೇ ಘೋಷಣೆಯಾಗಿ ಸಿನಿಪ್ರೇಮಿಗಳಲ್ಲಿ ಬಾರೀ ನಿರೀಕ್ಷೆ ಹುಟ್ಟಿಸಿದಂತದ್ದು. ಸದ್ಯ ಈ ಸಿನಿಮಾ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ. ಇದಕ್ಕೂ ಮುನ್ನವೇ ರಾಜ್ ಬಿ ಶೆಟ್ಟಿ ನಟಿಸಿರುವ ‘ಟೋಬಿ’ ಬಿಡುಗಡೆಯಾಗುತ್ತಿದೆ.
‘ಟೋಬಿ’ ಒಂದು ಪಕ್ಕ ಆಕ್ಷನ್ ಸಿನಿಮಾ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯ ಪಾತ್ರದಲ್ಲಿ ರಾಜ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚೈತ್ರ ಜೆ ಆಚಾರ್ ಹಾಗು ಸಂಯುಕ್ತ ಹೊರನಾಡ್ ಕೂಡ ನಟಿಸಿರುವ ಈ ಸಿನಿಮಾ ಇದೇ ಆಗಸ್ಟ್ 25ಕ್ಕೆ ಬಿಡುಗಡೆಯಗುತ್ತಿದ್ದು, ಎಲ್ಲೆಡೆ ಬಾರೀ ನಿರೀಕ್ಷೆ ಹುಟ್ಟಿಸಿದೆ.

