‘ಇನ್ಫೋಸಿಸ್’ ಎಂಬ ಇಡೀ ಪ್ರಪಂಚದಲ್ಲೇ ಮುಂಚೂಣಿಯಲ್ಲಿರುವ ಐಟಿ ದಿಗ್ಗಜ ಕಂಪನಿ ಒಂದರ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರೂ, ತಮ್ಮ ಸರಳತೆ, ಸಜ್ಜನತೆಗೆ ಹೆಸರಾದವರು ನಮ್ಮ ಕನ್ನಡದ ಹೆಮ್ಮೆಯ ಸುಧಾ ಮೂರ್ತಿಯವರು. ಇದಷ್ಟೇ ಅಲ್ಲದೇ, ತಮ್ಮ ಮನಮುಟ್ಟುವ ಬರವಣಿಗೆ, ಸಮಾಜಸ್ನೇಹಿ ಕೆಲಸಗಳು, ಅದೆಷ್ಟೋ ಅಸಾಹಾಯಕರಿಗೆ ಉದ್ಯೋಗವಕಾಶ ನೀಡಿದ ಇವರು ಅಪಾರರಿಗೆ ಒಂದು ಉತ್ತೇಜನದಂತೆ. ಇವರ ಹಿರಿಮೆಗೆ ಇನ್ನೊಂದು ಗರಿ ಎಂಬಂತೆ, ನಮ್ಮ ರಾಷ್ಟ್ರದ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು ಅವರು ಅತ್ಯುನ್ನತ ‘ಪದ್ಮಭೂಷಣ’ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಈ ಸಂತಸದ ಅಂಗವಾಗಿ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಎಂ ರಮೇಶ್ ರೆಡ್ಡಿಯವರ ಮುಂದಾಳತ್ವದಲ್ಲಿ ಸುಧಾಮೂರ್ತಿ ಅವರಿಗೆ ಸನ್ಮಾನ ಮಾಡಲಾಯಿತು.


‘ಸುಧಾಮೂರ್ತಿಯವರ ಆತ್ಮೀಯ ಗೆಳೆಯರ ಬಳಗ’ದ ವತಿಯಿಂದ ಈ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಸುಧಾ ಮೂರ್ತಿಯವರ ಹಲವು ಆಪ್ತರು, ಅಭಿಮಾನಿಗಳು ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿ ಅವರು, “ನನಗೆ ಈ ಸನ್ಮಾನ ಪುರಸ್ಕಾರಗಳು ಬಹಳ ಮುಜುಗರ ಉಂಟು ಮಾಡುತ್ತವೆ. ಆದರೆ ಈ ಪುರಸ್ಕಾರಕ್ಕೆ ಇಲ್ಲ ಎನ್ನಲಾಗಲಿಲ್ಲ. ರಮೇಶ್ ರೆಡ್ಡಿ ಅವರು ನಮ್ಮ ಸಂಸ್ಥೆಗಾಗಿ ಹಲವು ವರ್ಷಗಳಿಂದ ದುಡಿದಿದ್ದಾರೆ. ಅವರ ಕೆಲಸದ ಬಗೆಗಿನ ಶ್ರದ್ದೆ, ಪರಿಶ್ರಮವನ್ನ ನಾನು ಬಹುವಾಗಿ ಮೆಚ್ಚುತ್ತೇನೆ. ನಾನು ಸನ್ಮಾನ ಸ್ವೀಕರಿಸುವುದರಿಂದ ಹಲವರು ಸಂತಸಗೊಳ್ಳುತ್ತಾರೆ ಎಂದಾಗ, ಅವರ ಖುಷಿಯಲ್ಲೇ ನಾನು ನನ್ನ ಖುಷಿ ಕಾಣುತ್ತೆನೆ. ನಾನು ನನ್ನ ಕೈಲಾದದ್ದು ಮಾಡಿದ್ದೇನೆ ಅಷ್ಟೇ, ಯಾವತ್ತೂ ಪ್ರಶಸ್ತಿಗಾಗಿ ಯಾವುದನ್ನು ಮಾಡಿದವಳಲ್ಲ. ಈಗ ಪ್ರಶಸ್ತಿ ಸಿಕ್ಕಿರುವುದು ಸಂತಸವೇ”.
ಮುಂದುವರಿಸುತ್ತ, “ಈ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ನಾನೊಂದು ಕಿವಿ ಮಾತು ಹೇಳಲು ಇಚ್ಚಿಸುತ್ತೇನೆ. ಯಾವತ್ತೂ ನಿಮ್ಮನ್ನ ನಾಲ್ಕು ಗೋಡೆಗಳ ಬಂಧಿಯಾಗಿಸಿಕೊಳ್ಳಬೇಡಿ. ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನ ಬಳಸಿಕೊಳ್ಳಿ. ನಾನು ನನ್ನ ಸಾಮರ್ಥ್ಯವನ್ನ ಉಪಯೋಗಿಸಿದ್ದಕ್ಕೆ ಇದೆಲ್ಲಾ ಸಾಧ್ಯವಾದದ್ದು. ಇದು ಎಲ್ಲರಿಂದಲೂ ಸಾಧ್ಯ. ಇನ್ನೊಂದು ಬಹಳ ಮುಖ್ಯವಾದ ವಿನಂತಿಯೆಂದರೆ, ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಟ ಹತ್ತು ರೂಪಾಯಿಯಾದರು, ಮೂಕಪ್ರಾಣಿಗಳ ಕಲ್ಯಾಣಕ್ಕಾಗಿ ಕೂಡಿಡಿ. ಆ ಹಣವನ್ನ ಪ್ರಾಣಿ ದಯಾ ಸಂಘಗಳಿಗೆ ನೀಡಿ, ಇದರಿಂದ ಆಹಾರ, ಆಶ್ರಯ ಇಲ್ಲದೆ ಬಳಳುತ್ತಿರುವ ಅದೆಷ್ಟೋ ಪ್ರಾಣಿಗಳಿಗೆ ಒಳಿತಾಗುತ್ತದೆ ” ಎಂದು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನ ಹಂಚಿಕೊಂಡರು.



