ಕಿರುತೆರೆಯಲ್ಲಿ ಕಿಲಕಿಲ ಎಂದು ಪ್ರೇಕ್ಷಕರನ್ನು ರಂಜಿಸುವ ಸೃಜನ್ ಲೋಕೇಶ್ ಒಬ್ಬ ಅದ್ಭುತ ನಟನೂ ಹೌದು. ಕಿರುತೆರೆಯಲ್ಲೇ ಹೆಚ್ಚಾಗಿ ಮಿಂಚಿರುವ ಅವರು, ‘ಹ್ಯಾಪಿ ಜರ್ನಿ’, ‘ಎಲ್ಲಿದೆ ಇಲ್ಲಿ ತನಕ’, ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾದ ಮೂಲಕ ನಟನೆಯಲ್ಲೂ ಖ್ಯಾತರಾಗಿದ್ದಾರೆ.
‘ಮಜಾ ಟಾಕೀಸ್’ ಮೂಲಕ ಸಿಕ್ಕಾಪಟ್ಟೆ ಫೇಮ್ ಪಡೆದುಕೊಂಡ ಸೃಜನ್ ಈಗ ವೃತ್ತಿ ಬದುಕಿನಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯನ್ನಿಡಲು ಮುಂದಾಗಿದ್ದಾರೆ.
ನಟನೆ, ನಿರ್ಮಾಣ, ನಿರೂಪಕನಾಗಿ ಕಾಣಿಕೊಂಡ ಸೃಜನ್ ಈಗ ನಿರ್ದೇಶಕರಾಗಲು ಹೊರಟಿದ್ದಾರೆ. ಹೌದು ಈ ಬಗ್ಗೆ ಸ್ವತಃ ಸೃಜನ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
‘ಹಿರಿಯ ನಿರ್ಮಾಪಕರಾದ ಸಂದೇಶ ನಾಗರಾಜ್ ಹಾಗೂ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಅವರ ಆಶೀರ್ವಾದದೊಂದಿಗೆ ಹೊಸ ಪ್ರಯತ್ನಕ್ಕೆ ಶುಭಾರಂಭ. ಲೋಕೇಶ್ ಪ್ರೊಡಕ್ಷನ್ಸ್ ಹಾಗೂ ಸಂದೇಸ್ ಪ್ರೊಡಕ್ಷನ್ಸ್ ಸಂಸ್ಥೆ ಅಡಿಯಲ್ಲಿ ಹೊಸ ಚಿತ್ರ ನಿರ್ಮಾಣ, ಮತ್ತಷ್ಟು ವಿವರಗಳು ಅತಿ ಶೀಘ್ರದಲ್ಲಿ. ನಿರ್ದೇಶಕನಾಗಿ ನನ್ನ ಮೊದಲ ಪ್ರಯತ್ನ.. ನಿಮ್ಮ ಹಾರೈಕೆ ಸದಾ ನಮ್ಮ ಮೇಲೆ ಇರಲಿ’ ಎಂದು ಬರೆದುಕೊಂಡಿದ್ದಾರೆ ಸೃಜನ್.
ನಿರ್ಮಾಣ, ನಿರ್ದೇಶನದೊಂದಿಗೆ ಸೃಜನ್ ಅವರೇ ಚಿತ್ರದಲ್ಲಿ ನಾಯಕರಾಗಿರಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದು ಅಧಿಕೃತವಾಗಿಲ್ಲ.
ಇಷ್ಟು ದಿನ ಜನರನ್ನು ನಗಿಸಿ ಮನ ಗೆದ್ದ ಸೃಜನ್ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟು ಮನ ಗೆಲ್ಲಲು ಹೊರಟಿದ್ದಾರೆ.

