ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಟಿಸುತ್ತಾ ಬಂದಂತಹ ಹೆಸರಾಂತ ಪೋಷಕ ನಟರಲ್ಲಿ ಒಬ್ಬರು ಶ್ರೀನಿವಾಸ್ ಮೂರ್ತಿ ಅವರು. ಅದೆಂತದ್ದೇ ಪಾತ್ರವಾಗಲಿ, ಹಾಸ್ಯ, ಗಾಂಭೀರ್ಯ, ಖಳನಟ ಈ ತರದ ವಿವಿಧ ರೀತಿಯ ಪಾತ್ರಗಳಿಗೆ ಜೀವತುಂಬುತ್ತಾ ಕನ್ನಡದ ಸಿನಿಪ್ರೇಮಿಗಳಿಗೆ ಅತೀ ಪ್ರಿಯರಾಗಿರುವ ಶ್ರೀನಿವಾಸ್ ಮೂರ್ತಿ ಅವರಿಗೆ ಇದೀಗ 75ರ ವಸಂತದ ಸಂಭ್ರಮ. ಅಷ್ಟೇ ಅಲ್ಲದೇ ಅವರ ಬಣ್ಣದ ಲೋಕದ ಪಯಣಕ್ಕೆ ಐವತ್ತು ವರ್ಷಗಳು ಕೂಡ ತುಂಬುತ್ತಿವೆ. ಅಂದಿನ ‘ಗುರು ಶಿಷ್ಯರು’,’ಕೆರಳಿದ ಸಿಂಹ’ ರೀತಿಯ ಹೆಸರಾಂತ ಸಿನಿಮಾಗಳಿಂದ ಹಿಡಿದು, ಇಂದಿನ ‘ರಾಜ್ ವಿಷ್ಣು’,’ನಟಸಾರ್ವಭೌಮ’,’ದೊಡ್ಮನೆ ಹುಡ್ಗ’ ರೀತಿಯ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಶ್ರೀನಿವಾಸ್ ಮೂರ್ತಿ ಅವರ 50 ವರ್ಷಗಳ ಸುಧೀರ್ಘ ನಟನಾ ಪಯಣವನ್ನ ಸಂಭ್ರಮಿಸಲು ರವೀಂದ್ರ ಕಲಾಕ್ಷೇತ್ರ ಸಿದ್ದವಾಗುತ್ತಿದೆ.
ತಮ್ಮ ಈ ಯಶಸ್ವಿ ನಟನಾ ಜೀವನದ ಬಗ್ಗೆ ಮಾತನಾಡುವ ಶ್ರೀನಿವಾಸ್ ಮೂರ್ತಿ ಅವರು, “ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಂದು ಸರ್ವೇ ಇಲಾಖೆಯಲ್ಲಿ ಸೇವೆ ಸಲ್ಲಿಸಿದೆ. ಇದರ ನಡುವೆಯೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದೆ. ನನ್ನ ನಟನೆ ಕಂಡ ಬಂಗಾರಪ್ಪನವರು ನನಗೆ ಅಭಿನಂದನೆಗಳನ್ನ ಕೂಡ ತಿಳಿಸಿದ್ದರು. ಅಲ್ಲಿಂದ ನನ್ನಲ್ಲಿನ ಉತ್ಸಾಹ ಇನ್ನಷ್ಟು ಹೆಚ್ಚಾಯಿತು. ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಬಂದೆ. ತಮಿಳು ಭಾಷೆಯ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸಿದ್ದೆ. ಆದರೆ ಬಿಡುಗಡೆಯ ಸಂಧರ್ಭದಲ್ಲಿ ನಿರ್ಮಾಪಕರಿಗೆ ಸಮಸ್ಯೆ ಆಯಿತು. ನಂತರ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದೆ, ಪ್ರಖ್ಯಾತಿ ಗಳಿಸಿದೆ. ‘ಅಪ್ಪು’ ಸಿನಿಮಾದ ನಂತರ ಪುರಿ ಜಗನ್ನಾಥ್ ಅವರು ತೆಲುಗು ಚಿತ್ರರಂಗಕ್ಕೂ ಕರೆದರೂ. ಆದರೆ ಅಷ್ಟರಲ್ಲಿ ನಾನು ಕನ್ನಡದಲ್ಲೇ ಹಲವು ಸಿನಿಮಾಗಳನ್ನ ಒಪ್ಪಿಕೊಂಡಿದ್ದ ಕಾರಣ, ಅಲ್ಲಿಗೇ ಹೋಗಲಿಲ್ಲ. ರಜನಿಕಾಂತ್ ಅವರು ಕೂಡ ಆಗಾಗ ನೀವ್ಯಾಕೆ ತಮಿಳಿನಲ್ಲಿ ನಟಿಸಬಾರದು ಎಂದೂ ಕೇಳುತ್ತಲೇ ಇರುತ್ತಾರೆ” ಎಂದು ತಮ್ಮ ಅನುಭವ ಹಂಚಿಕೊಂಡರು.
ಶ್ರೀನಿವಾಸ್ ಮೂರ್ತಿ ಅವರ 50 ವರ್ಷಗಳ ಸುಧೀರ್ಘ ನಟನಾ ಪಯಣವನ್ನ ಸಂಭ್ರಮಿಸಲು ಇದೇ ಮೇ 15 ಹಾಗು 16ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ನಾಟಕಗಳ ವಿಶೇಷ ಪ್ರದರ್ಶನ ನಡೆಯಲಿದೆ. ‘ತರಕಾರಿ ಚೆನ್ನಿ’ ಹಾಗು ‘ಸದಾರಮೆ ಕಳ್ಳ’ ಎಂಬ ಎರಡು ನಾಟಕಗಳನ್ನು ಶ್ರೀನಿವಾಸ್ ಮೂರ್ತಿ ಅವರನ್ನ ಸಂಭ್ರಮಿಸಲು ಹಾಗು ಅವರಿಗೆ ಗೌರವಪೂರಕವಾಗಿ ಪ್ರದರ್ಶನ ಮಾಡಲಿದ್ದಾರೆ.

