HomeExclusive Newsಸಿನಿಮಾದೊಳಗೊಂದು ಸಿನಿಮಾ ತೋರಿಸೋ ಪಕ್ಕಾ ಪೈಸಾ ವಸೂಲ್ ಚಿತ್ರ 'ಸೌತ್ ಇಂಡಿಯನ್ ಹೀರೋ'! ಹೇಗಿದೆ ಸಿನಿಮಾ?

ಸಿನಿಮಾದೊಳಗೊಂದು ಸಿನಿಮಾ ತೋರಿಸೋ ಪಕ್ಕಾ ಪೈಸಾ ವಸೂಲ್ ಚಿತ್ರ ‘ಸೌತ್ ಇಂಡಿಯನ್ ಹೀರೋ’! ಹೇಗಿದೆ ಸಿನಿಮಾ?

ನಮ್ ಟಾಕೀಸ್ ರೇಟಿಂಗ್ 【 4 / 5 】

ಈ ವಾರ ಚಂದನವನದಿಂದ ಹಲವು ಸಿನಿಮಾಗಳು ಬೆಳ್ಳಿತೆರೆ ಮೇಲೆ ಬಿಡುಗಡೆಯಾಗಲು ಸಜ್ಜಾಗಿವೆ. ಇವುಗಳ ನಡುವೆ ಕೊಂಚ ಹೆಚ್ಚಿನ ಸದ್ದು ಕೇಳುತ್ತಿರುವುದು ಹೊಸ ಸಿನಿಮಾವಾದ ‘ಸೌತ್ ಇಂಡಿಯನ್ ಹೀರೋ’ ಚಿತ್ರದ್ದು. ಈಗಾಗಲೇ ‘ಫರ್ಸ್ಟ್ ರಾಂಕ್ ರಾಜು’ ಹಾಗು ‘ರಾಜು ಕನ್ನಡ ಮೀಡಿಯಂ’ ನಂತಹ ಹಿಟ್ ಸಿನಿಮಾಗಳಿಂದ ಎಲ್ಲೆಡೆ ತಮ್ಮ ಪರಿಚಯ ತಿಳಿಸಿರುವಂತಹ ನಿರ್ದೇಶಕ ನರೇಶ್ ಕುಮಾರ್ ಹೆಚ್ ಎನ್ ಅವರ ಮೂರನೇ ಸಿನಿಮಾ ಇದಾಗಿದೆ. ಇದೆ ಫೆಬ್ರವರಿ 24ರಂದು ಬಿಡುಗಡೆಯಾಗುತ್ತಿರುವ ಶಿಲ್ಪಾ ಎಲ್ ಎಸ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ‘ಸೌತ್ ಇಂಡಿಯನ್ ಹೀರೋ’ ಸಿನಿಮಾದ ಪ್ರೀಮಿಯರ್ ಶೋಗಳು ಸದ್ಯ ಎಲ್ಲೆಡೆ ನಡೆಯುತ್ತಿವೆ. ಹಾಗಾದರೆ ಸಿನಿಮಾ ಹೇಗಿದೆ?

‘ಸೌತ್ ಇಂಡಿಯನ್ ಹೀರೋ’ ಸಿನಿಮಾ ಒಬ್ಬ ಚಲನಚಿತ್ರ ನಾಯಕನಟನ ಜೀವನದ ಪಯಣವನ್ನ ಚಿತ್ರಿಸುವಂತಹ ಕಥೆಯಾಗಿದೆ. ಹಂಪಿ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ ಫಿಸಿಕ್ಸ್ ಪಾಠ ಹೇಳುವ ಶಿಕ್ಷಕರೊಬ್ಬರು ಸಿನಿಮಾರಂಗ ಪ್ರವೇಶಿಸಿ ನಟರಾಗಿ ನಟಿಸಲು ಆರಂಭಿಸುತ್ತಾರೆ. ನೋಡನೊಡುತ್ತಲೇ ಎಲ್ಲರ ಅಭಿಮಾನ ಪಡೆಯುತ್ತಾ ಸೂಪರ್ ಸ್ಟಾರ್ ಆಗಿ ಬೆಳೆಯುತ್ತಾರೆ. ಆದರೆ ಎಂತದ್ದೇ ಸೂಪರ್ ಸ್ಟಾರ್ ಆದರೂ ಸಮಸ್ಯೆ ತಪ್ಪಿದ್ದಲ್ಲ ಅಲ್ಲವೇ! ಅಂತೆಯೇ ಈ ಸೂಪರ್ ಸ್ಟಾರ್ ನ ಜೀವನದಲ್ಲಿ ನಡೆವ ಪ್ರಮುಖ ಘಟನೆಗಳು, ಸಮಸ್ಯೆಗಳ ಸುತ್ತ ಸಿನಿಮಾ ಕಥೆ ಹೆಣೆಯಲಾಗಿದೆ.



ಚಿತ್ರದ ಮೂಲಕ ನಿರ್ದೇಶಕರಾದ ನರೇಶ್ ಕುಮಾರ್ ಅವರಿಗೆ ಹ್ಯಾಟ್ರಿಕ್ ಹಿಟ್ ಸಿಗಲಿದೆ ಎಂಬ ಮಾತು ಎಲ್ಲೆಡೆಯಿಂದ ಕೇಳಿಬರುತ್ತಿದೆ. ಚಿತ್ರದ ತುಂಬಾ ವಿವಿಧ ರೀತಿಯ ಸಿನಿಮಾಗಳ ಕಥೆಯನ್ನು, ಸಿನಿಮಾರಂಗದವರ ಕಥೆಯನ್ನು ಹೇಳಿಕೊಂಡು ಬರುವುದರಿಂದ ಬೇರೆಬೇರೆ ರೀತಿಯ ದೃಷ್ಟಿಕೋನಗಳನ್ನು, ಪಾತ್ರಗಳನ್ನು ಹಾಗು ಕಥೆಗಳನ್ನು ನೋಡಬಹುದಾಗಿದೆ. ಸಿನಿಮಾದೊಳಗೊಂದು ಸಿನಿಮಾವನ್ನ ಈ ಚಿತ್ರ ಪ್ರೇಕ್ಷಕರಿಗೆ ನೀಡುತ್ತದೆ. ನಾಯಕ ನಟನಾಗಿ ಮೊದಲ ಬಾರಿ ಬಣ್ಣ ಹಚ್ಚಿದ್ದರೂ ಕೂಡ ಸಾರ್ಥಕ್ ಲಕ್ಕಿ ಅವರ ಕಥೆ ಅವರಿಗೆ ನೀಡುವಂತಹ ಹಲವು ಬೇರೆ ಬೇರೆ ರೀತಿಯ ಪಾತ್ರಗಳನ್ನು ಯಶಸ್ವಿಯಾಗಿ, ಅಷ್ಟೇ ಅದ್ಭುತವಾಗಿ ನಿಭಾಯಿಸಿದ್ದಾರೆ. ಇನ್ನೂ ಸಿನಿಮಾದ ಎರಡು ನಾಯಕಿಯರಾದ ಕಾಶೀಮ ರಫಿ ಹಾಗು ಊರ್ವಶಿ ಜಯನ್ ಅವರು ಕೂಡ ತಮ್ಮ ಪಾತ್ರಕ್ಕೆ ತಕ್ಕದಾದ ನ್ಯಾಯ ಒದಗಿಸಿದ್ದಾರೆ.



ಇನ್ನು ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವಿಜಯ್ ಚೆಂದೂರ್, ಅಶ್ವಿನ್ ರಾವ್ ಪಲ್ಲಕ್ಕಿ, ಅಮಿತ್, ರವಿತ್ ನಾಗರಾಜ್ ಸೇರಿದಂತೆ ಹಲವು ಹೊಸ ಪ್ರತಿಭೆಗಳು ತಮ್ಮ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಜೊತೆಗೆ ಅನಿಲ್ ಸಿ ಜೆ ಹಾಗು ಹರ್ಷವರ್ಧನ್ ರಾಜ್ ಅವರ ಸಂಗೀತ ಕೂಡ ಸಿನಿಮಾವನ್ನ ಇನ್ನೊಂದು ಎತ್ತರಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಶಿಲ್ಪಾ ಎಲ್ ಎಸ್ ಅವರ ನಿರ್ಮಾಣದ ಈ ಚಿತ್ರ ನೋಡಲು ಬಂದ ಪ್ರೇಕ್ಷಕನಿಗೆ ಬೇಕಾದಂತಹ ಮನೋರಂಜನೆ ನೀಡುವಲ್ಲಿ ಸೋಲುವುದಿಲ್ಲ.



ಪ್ರತಿಯೊಬ್ಬ ಮನುಜನ ಬದುಕಲ್ಲೂ ಕಷ್ಟ ಅತೀ ಸಹಜ. ಅದು ಸಾಮಾನ್ಯನಾದರೂ ಸರಿ, ಸೂಪರ್ ಸ್ಟಾರ್ ಆದರೂ ಸರಿ. ಆದರೆ ಆ ಸಮಸ್ಯೆಗಳನ್ನ ನಾವು ಹೇಗೇ ಸ್ವೀಕರಿಸುತ್ತೇವೆ, ಮತ್ತು ಅದರ ನಿವಾರಣೆಯ ಕಡೆಗೆ ನಾವು ಹೇಗೇ ನಡೆಯುತ್ತೇವೆ ಎಂಬುದರಲ್ಲೇ ಬದುಕಿನ ಸತ್ಯ ಅಡಗಿರುವುದು. ಈ ಒಂದು ಉತ್ತಮ ವಿಚಾರವನ್ನ ತಮ್ಮ ‘ಸೌತ್ ಇಂಡಿಯನ್ ಹೀರೋ’ ಸಿನಿಮಾದ ಮೂಲಕ ಹಾಸ್ಯ, ಪ್ರೀತಿ, ವಾತ್ಸಲ್ಯ, ಆಕ್ಷನ್ ಈ ಎಲ್ಲಾ ಭಾವನೆಗಳ ಜೊತೆಗೆ ಸಿನಿಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿರ್ದೇಶಕರಾದ ನರೇಶ್ ಕುಮಾರ್ ಅವರು ಸಫಲತೆ ಪಡೆದಿದ್ದಾರೆ. ಚಿತ್ರಮಂದಿರಗಳಲ್ಲಿ ಕುಳಿತು ಸಿನಿಮಾ ನೋಡಲು ಬಂದ ವೀಕ್ಷಕನೊಬ್ಬನಿಗೆ ಬೇಕಾದಂತಹ ಎಲ್ಲಾ ಅಂಶಗಳನ್ನೂ ಹೊಂದಿರುವ ಈ ಚಿತ್ರ ಪ್ರೇಕ್ಷಕರಿಗೆ ಎರಡೂವರೆ ಗಂಟೆಯ ನಿರಂತರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಇದೆ ಫೆಬ್ರವರಿ 24ರಂದು ಸಿನಿಮಾ ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಇದೊಂದು ಬ್ಲಾಕ್ ಬಸ್ಟರ್ ಸಿನಿಮಾ ಆಗುವಂತಹ ಎಲ್ಲಾ ಸಾಧ್ಯತೆಗಳಿವೆ.

RELATED ARTICLES

Most Popular

Share via
Copy link
Powered by Social Snap