ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾಗಿರುವ, ಹಿರಿಯ ನಿರ್ದೇಶಕರೂ, ಕಲಾವಿದರೂ ಆದಂತಹ ಎಸ್ ಕೆ ಭಗವಾನ್ ಅವರು ಕನ್ನಡಿಗರೆಲ್ಲರಿಗೂ ಚಿರಪರಿಚಿತರು. ದೊರೈ ಭಗವಾನ್ ಎಂದೇ ಖ್ಯಾತರಾಗಿರುವ ಇವರು ಇಂದು(ಫೆಬ್ರವರಿ 20) ನಮ್ಮನ್ನೆಲ್ಲ ಅಗಲಿದ್ದಾರೆ. 90 ವರ್ಷದ ಆರೋಗ್ಯಕರ ಜೀವನ ನಡೆಸಿದ ಭಗವಾನ್ ಅವರು ವಯಸ್ಸಿಗೆ ಸಂಭಂದಿಸಿದ ಅನಾರೋಗ್ಯದಿಂದ ಬಳಲುತ್ತ ಕೊನೆಯುಸಿರೆಳೆದಿದ್ದಾರೆ. 1950ರ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ದುಡಿದು, ಅಪಾರ ಕೊಡುಗೆಯನ್ನು ನೀಡಿರುವ ದೊರೈ ಭಗವಾನ್ ಅವರ ಅಗಲಿಕೆ ಕನ್ನಡಿಗರಿಗೆ ಮರೆಯಲಾಗದ ನೋವಾಗಿದೆ.
1956ರಲ್ಲಿ ನಿರ್ದೇಶಕರಾದ ಕಣಗಲ್ ಪ್ರಭಾಕರ್ ಶಾಸ್ತ್ರಿಯವರ ಬಳಿ ಸಹಾಯಕ ನಿರ್ದೇಶಕರಾಗಿ ಸೇರುವ ಮೂಲಕ ಚಂದನವನದಲ್ಲಿ ತಮ್ಮ ಪಯಣವನ್ನ ಆರಂಭಿಸಿದವರು ಎಸ್ ಕೆ ಭಗವಾನ್. ನಂತರ ಸುಮಾರು ಹತ್ತು ವರ್ಷಗಳ ಪರಿಶ್ರಮದ ನಂತರ,1966ರಲ್ಲಿ ಎಂ ಸಿ ನರಸಿಂಹಮೂರ್ತಿ ಅವರ ಜೊತೆಗೆ ಸೇರಿಕೊಂಡು ‘ಸಂಧ್ಯಾರಾಗ’ ಎಂಬ ಸಿನಿಮಾ ನಿರ್ದೇಶಿಸಿ ಯಶಸ್ಸು ಪಡೆದರು. ನಂತರ ಬಿ ದೊರೈರಾಜ್ ಅವರ ಜೊತೆಗೆ ಸೇರಿಕೊಂಡ ಇವರು ಜೋಡಿಯಾಗಿ ಸಿನಿಮಾ ನಿರ್ದೇಶನ ಮಾಡಲು ಆರಂಭಿಸುತ್ತಾರೆ. ಈ ಜೋಡಿ ಮುಂದೆ “ದೊರೈ-ಭಗವಾನ್” ಎಂದೇ ಹೆಸರಾಗುತ್ತಾರೆ.
“ದೊರೈ-ಭಗವಾನ್” ಜೋಡಿಯ ಮೊದಲ ಸಿನಿಮಾ ವರನಟ ಡಾ|ರಾಜಕುಮಾರ್ ಅವರ ಅಭಿನಯದ ‘ಜೇಡರ ಬಲೆ’ ಚಿತ್ರ. ಜೇಮ್ಸ್ ಬಾಂಡ್ ರೀತಿಯಲ್ಲಿ ಮೂಡಿಬಂದ ಈ ಸಿನಿಮಾ ಹೊಸಪ್ರಯತ್ನ ಎನಿಸಿಕೊಂಡು ಎಲ್ಲರ ಪ್ರಶಂಸೆಗೆ ಒಳಗಾಗಿತ್ತು. ಒಟ್ಟು ಸುಮಾರು 27 ಸಿನಿಮಾಗಳನ್ನು ನಿರ್ದೇಶಿಸಿರುವ ಈ ಜೋಡಿ, ಬಹುಪಾಲು ರಾಜಕುಮಾರ್ ಅವರ ಜೊತೆಗೆ ಸಿನಿಮಾ ಮಾಡಿರುವುದು ವಿಶೇಷ. ಅಂದಿನಿಂದ ಇಂದಿಗೂ ಹಸಿರಾಗಿರುವ ಸಿನಿಮಾ ‘ಕಸ್ತೂರಿ ನಿವಾಸ’, ‘ಗಿರಿಕನ್ಯೆ’,’ಒಡಹುಟ್ಟಿದವರು’, ‘ಎರಡು ಕನಸು’ ಹೀಗೆ ಹಲವು ಹಿಟ್ ಸಿನಿಮಾಗಳನ್ನ ಈ ಜೋಡಿ ರಾಜಕುಮಾರ್ ಅವರ ಜೊತೆಗೆ ಮಾಡಿತ್ತು. ಪುನೀತ್ ರಾಜಕುಮಾರ್ ಅವರು ಬಾಲನಟನಾಗಿ ತಮ್ಮ ಛಾಪು ಮೂಡಿಸಿದ ‘ಯಾರಿವನು’ ಸಿನಿಮಾ ಕೂಡ ಈ ಜೋಡಿಯ ಕೊಡುಗೆಯೇ ಆಗಿದೆ.
ಇನ್ನೂ ಹೆಸರಾಂತ ಹಿರಿಯ ನಟರಾದ ಅನಂತ್ ನಾಗ್ ಅವರ ಜೊತೆಗೂ ಈ ಜೋಡಿಯು ಮೋಡಿ ಮಾಡಿದ್ದು, ಇಂದಿಗೂ ಎಲ್ಲೆಡೆ ಪ್ರಸಿದ್ಧವಾಗಿರುವ ಸಿನಿಮಾಗಳಾಗಿರುವ ‘ಬಯಲು ದಾರಿ’,’ಚಂದನದ ಗೊಂಬೆ’,’ಬಿಡುಗಡೆಯ ಬೇಡಿ’,’ಸೇಡಿನ ಹಕ್ಕಿ’ ಸೇರಿದಂತೆ ಹಲವು ಸಿನೆಮಾಗಳು ಅನಂತ್ ನಾಗ್ ಅವರೊಂದಿಗೆ ದೊರೈ-ಭಗವಾನ್ ಅವರ ನಿರ್ದೇಶನದಲ್ಲಿ ಮೂಡಿಬಂದಿವೆ. 1995ರಲ್ಲಿ ತೆರೆಕಂಡ ಸಾಯಿಕುಮಾರ್ ಹಾಗು ಸುಧಾರಾಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಬಾಳೊಂದು ಚದುರಂಗ’ ಸಿನಿಮಾ ಇವರಿಬ್ಬರು ಜೊತೆಯಾಗಿ ನಿರ್ದೇಶಸಿದ ಕೊನೆಯ ಸಿನಿಮಾವಾಗಿದೆ. ಶ್ರೀ ದೊರೈರಾಜ್ ಅವರು 2000ನೇ ಇಸವಿಯಲ್ಲಿ ಇಹಲೋಕ ಅಗಲಿದರು. ಅಂದಿನಿಂದ ಭಗವಾನ್ ಅವರು ನಿರ್ದೇಶನದಿಂದ ದೂರ ಉಳಿದರು.
ಒಟ್ಟು 49ಸಿನಿಮಾಗಳ ನಿರ್ದೇಶನದ ರೂವಾರಿಯಾಗಿದ್ದ ಭಗವಾನ್ ಅವರು ತಮ್ಮ 50ನೇ ಸಿನಿಮಾವನ್ನ 2019ರಲ್ಲಿ ನಿರ್ದೇಶನ ಮಾಡಿದರು. ಅನಂತ್ ನಾಗ್ ಹಾಗು ಸಂಚಾರಿ ವಿಜಯ್ ಅಭಿನಯದ ‘ಆಡುವ ಗೊಂಬೆ’ ಸಿನಿಮಾ ಭಗವಾನ್ ಅವರ ನಿರ್ದೇಶನದಲ್ಲಿ ಬಂದಂತಹ ಕೊನೆಯ ಚಿತ್ರವಾಗಿದೆ. ಸಿನಿಮಾ ನಿರ್ದೇಶನದಿಂದ ದೂರ ಉಳಿದಿದ್ದರೂ ಕೂಡ ‘ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್’ ನ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಾ ಹಲವು ಕಲಾವಿದರನ್ನು ಚಿತ್ರರಂಗಕ್ಕೆ ನೀಡಿದ್ದಾರೆ.
ಅಂತೆಯೇ ತಮ್ಮ 90 ವರ್ಷದ ಜೀವಿತಾವಧಿಯಲ್ಲಿ ಸುಮಾರು 70 ವರ್ಷಗಳನ್ನ ಸಿನಿಮಾರಂಗಕ್ಕೆ ಮುಡಿಪಾಗಿಟ್ಟವರು ಭಗವಾನ್ ಅವರು. ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರಾದ ಭಗವಾನ್ ಅವರ ಅಗಲಿಕೆ ಕನ್ನಡ ಸಿನಿಪ್ರೇಮಿಗಳಲ್ಲಿ ಅಪಾರ ದುಃಖಕ್ಕೆ ಕಾರಣವಾಗಿದೆ.

