ಕನ್ನಡ ಮನರಂಜನಾ ಘಟ್ಟ ಕಂಡಂತಹ ಒಬ್ಬ ಪ್ರತಿಭಾನ್ವಿತ ಕಲಾವಿದ ಸಿಹಿ ಕಹಿ ಚಂದ್ರು ಅವರು. ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿ, ಹಲವು ಜನಮೆಚ್ಚಿದ ಧಾರವಾಹಿಗಳನ್ನ ನಿರ್ದೇಶಿಸಿ, ನಿರ್ಮಾಣ ನಟನೆ ಎಲ್ಲವನ್ನೂ ಮಾಡುತ್ತಾ ಕಿರುತೆರೆ ಹಾಗು ಬೆಳ್ಳಿತೆರೆ ಎರಡರಲ್ಲೂ ಪ್ರಸಿದ್ಧರಾದವರು ಇವರು. ಅಷ್ಟೇ ಅಲ್ಲದೇ ತಮ್ಮ ಅಡುಗೆಗೂ ಪ್ರಖ್ಯಾತಿ ಪಡೆದ ಇವರು, ಕನ್ನಡದ ಮನೆಮನೆಗೆ ಪರಿಚಿತರಾದ ಎಲ್ಲರ ನೆಚ್ಚಿನ ಸಿಹಿಕಹಿ ಚಂದ್ರು ಅವರು ತಮ್ಮ ಜೀವನಗಾತೆ ಹಂಚಿಕೊಳ್ಳಲು ಕಿರುತೆರೆಯ ಯಶಸ್ವಿ ರಿಯಾಲಿಟಿ ಶೋ ‘ವೀಕೆಂಡ್ ವಿಥ್ ರಮೇಶ್’ ಗೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ತಮ್ಮ ಬದುಕಿನ ಪಯಣದ ಜೊತೆಗೇ ಶಂಕರನಾಗ್ ಅವರ ಜೊತೆಗಿನ ಒಡನಾಟದ ಬಗ್ಗೆಯೂ ಹಂಚಿಕೊಂಡಿದ್ದಾರೆ.
ಚಂದ್ರು ಅವರು ಬೆಂಗಳೂರಿನ ಎಂ ಈ ಎಸ್ ಕಾಲೇಜಿನಲ್ಲಿ ಡಿಗ್ರಿ ಮಾಡುತ್ತಿದ್ದಾಗ ಅಲ್ಲಿನ ವಿದ್ಯಾರ್ಥಿ ನಾಯಕರಾಗಿದ್ದರು. ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಶಂಕರ್ ನಾಗ್ ಅವರನ್ನು ಆಗಮಿಸಲು ಅವರ ಬಳಿ ಚಂದ್ರು ಅವರು ತೆರಳಿದ್ದರು. ಇದು ಅವರ ಹಾಗು ಶಂಕ್ರಣ್ಣನ ಮೊದಲ ಭೇಟಿಯಂತೆ. ಅಂದು ಶಂಕರ್ ನಾಗ್ ಅವರು “ಏನು ಓದಿದ್ದೀಯಾ?” ಎಂದು ಕೇಳಿದರು ಅದಕ್ಕೆ ಚಂದ್ರು ಅವರು, “ಬಿ ಎಸ್ ಸಿ ಸೆಕೆಂಡ್ ಇಯರ್ ಡಿಗ್ರಿ” ಎಂದರೆ, ಮತ್ತೆ “ಏನು ಓದಿದ್ದೀಯಾ?” ಎಂದು ಕೇಳುತ್ತಾರೆ ಶಂಕ್ರಣ್ಣ. ಆಗ ಚಂದ್ರು ಅವರು ಒಂದೆರಡು ಪುಸ್ತಕದ ಹೆಸರು ಹೇಳುತ್ತಾರೆ. ಆಗ ಶಂಕರ್ ನಾಗ್ ಅವರು, “Carlos Castaneda-Journey to Ixtlan: The Lessons of Don Juan” ಎಂಬ ಪುಸ್ತಕ ಕೊಟ್ಟು ಇದನ್ನೂ ಓದು ಎಂದಿದ್ದಾರೆ. ಪುಸ್ತಕ ಓದಿದ ಚಂದ್ರು ಅವರಿಗೆ ಏನೂ ಅರ್ಥವಾಗದಿದ್ದಾಗ, ಮರಳಿ ಶಂಕ್ರಣ್ಣನ ಬಲಿ ತೆರಳಿ ಹಾಗೇ ಹೇಳಿದ್ದಾರೆ. ಅದಕ್ಕೆ ಶಂಕರ್ ನಾಗ್ ಅವರು, “ಇದು ನಮ್ಮನ್ನೇ ನಾವು ಅರಿತುಕೊಳ್ಳುವಂತಹ ಪುಸ್ತಕ” ಎಂದರು. ಆಗ ಪುಸ್ತಕವನ್ನ ಮತ್ತೊಮ್ಮೆ ಓದಿದ ಚಂದ್ರು ಅವರಿಗೆ ಪುಸ್ತಕದ ಅರ್ಥ ತಿಳಿಯಿತು ಎನ್ನುತ್ತಾರೆ ಚಂದ್ರು ಅವರು.
ಇದರ ನಂತರ ಚಂದ್ರು ಅವರು ಶಂಕ್ರಣ್ಣನ ಭೇಟಿಯಾಗಿದ್ದು ರಂಗಭೂಮಿಯಲ್ಲಿ. “ಅವರ ಜೊತೆಗೇ ನಾವು ಮಾಡಿದ ಮೊದಲ ನಾಟಕ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’. ಅಲ್ಲಿ ಶಂಕರ್ ನಾಗ್ ಹಾಗು ಅನಂತನಾಗ್ ಅವರನ್ನು ನೋಡಿ ಎಲ್ಲಿಲ್ಲದ ಆನಂದವಾಗಿತ್ತು. ಅವರು ನಮಗೆ ಗುರುಗಳಿದ್ದಂತೆ. ಅವರ ಕಾರ್ಯಶೈಲಿ ನಮಗೆ ತುಂಬಾ ಇಷ್ಟ. ನಂತರ ಹಲವು ಸಿನೆಮಾಗಳಲ್ಲಿ ಜೊತೆಯಾಗಿ ಮಾಡಿದೆವು. ನನ್ನ ಹಾಗು ಶಂಕರನಾಗ್ ಅವರ ನಡುವೆ ಒಂದು ಉತ್ತಮ ಬಾಂಧವ್ಯ ಬೆಳೆಯುತ್ತಾ ಹೋಯಿತು. ಜೊತೆಗೇ ಅವರ ನಿರ್ದೇಶನದ ‘ಮಾಲ್ಗುಡಿ ಡೇಸ್’ನಲ್ಲಿ ಕೆಲಸ ಮಾಡುವ ಅವಕಾಶ ನೀಡಿದರು. ಆ ಕಾಲದಲ್ಲಿ ಹಿಂದಿ ಹಾಗು ಇಂಗ್ಲೀಷ್ ಭಾಷೆಗಳಲ್ಲಿ ಡಬ್ ಮಾಡಲು ಜಾಸ್ತಿ ಜನರು ಇರಲಿಲ್ಲ. ಹಾಗಾಗಿಯೇ ನಾನು ಹಲವು ಪಾತ್ರಗಳಿಗೆ ಡಬ್ ಮಾಡುತ್ತಿದ್ದೆ. ಆ ಸಮಯದಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೆವು, ಅವರಂತೂ ತುಂಬಾ ಚುರುಕಾಗಿರುತ್ತಿದ್ದರು. ಟಕ್ ಟಕ್ ಅಂತ ಟೇಕ್ ಕಟ್ ಎನ್ನುತ್ತಾ ಕೆಲಸ ಮಾಡೋರು” ಎನ್ನುತ್ತಾ ಶಂಕರನಾಗ್ ಅವರ ಜೊತೆಗಿನ ದಿನಗಳನ್ನ ನೆನೆಸಿಕೊಂಡರು.
ಶಂಕರ್ ನಾಗ್ ಅವರು ಆಧುನಿಕ ತಂತ್ರಜ್ಞಾನಗಳನ್ನ ತುಂಬಾ ಆಸಕ್ತಿ ಹೊಂದಿದ್ದರು, ಭವಿಷ್ಯದ ಬಗ್ಗೆ, ತುಂಬಾ ಆಲೋಚಿಸುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆಗಿನ ಕಾಲದಲ್ಲೇ ಮೆಟ್ರೋ ಬಗ್ಗೆ ಕೂಡ ಯೋಚಿಸಿದ್ದರು ಎಂದು ಅದೆಷ್ಟೋ ಜನ ಅವರ ಜೊತೆಗಿದ್ದವರು ಹೇಳುತ್ತಿದ್ದರು. ಅಂತದ್ದೇ ಇನ್ನೊಂದು ವಿಚಾರವನ್ನ ಸಿಹಿ ಕಹಿ ಚಂದ್ರು ಅವರು ವೀಕೆಂಡ್ ವಿಥ್ ರಮೇಶ್ ಸಂಚಿಕೆಯಲ್ಲಿ ತಿಳಿಸಿದ್ದಾರೆ. “ಒಮ್ಮೆ ‘ನರಸಿಂಹ’ ಸಿನಿಮಾದ ಚಿತ್ರೀಕರಣದಲ್ಲಿದ್ದೆವು. ಆಗ ಸುಮಾರು ಒಂದು ಗಂಟೆಗಳ ನಮಗಿಬ್ಬರಿಗೂ ಏನೂ ಕೆಲಸವಿರಲಿಲ್ಲ. ಆಗ ಶಂಕರನಾಗ್ ಅವರು “ನಾನೊಂದು ಮನೆ ಕಟ್ಟಿದ್ದೇನೆ ತೋರಿಸುತ್ತೇನೆ ಬಾ” ಎಂದು ಕರೆದುಕೊಂಡು ಹೋದರು. ನಾನು, ಇವರು ತುಂಬಾ ದೊಡ್ಡ ಸ್ಟಾರ್, ದೊಡ್ಡ ಬಂಗಲೆಯನ್ನೇ ಕಟ್ಟಿಸಿರುತ್ತಾರೆ ಎಂದುಕೊಂಡು ಹೋದೆ. ಆದರೆ ಅಲ್ಲಿದ್ದದ್ದು ಒಂದು ಪುಟ್ಟ ಒಂದು ಬೆಡ್ ರೂಮ್ ಮನೆ. ಅದು ಒಂದು ಜರ್ಮನ್ ತಂತ್ರಜ್ಞಾನ. ಇಲ್ಲಿ ತಂದಂತಹ ಒಂದು ಮಾಡೆಲ್ ಮನೆ ಅದಾಗಿತ್ತು”
“ಮನೆಯ ಬಗ್ಗೆ ಹೆಚ್ಚಿಗೇ ಹೇಳುತ್ತಾ, ಈ ಮನೆ ಕಟ್ಟಿಸಲು ಖರ್ಚಾದದ್ದು ಕೇವಲ ಹದಿನೈದು ಸಾವಿರ ರೂಪಾಯಿ. ನನ್ನ ಗುರಿ, ನಮ್ಮಲ್ಲಿರುವ ಸ್ಲಮ್ ಗಳನ್ನೆಲ್ಲ ತೆಗೆದು ಇಂತದ್ದೇ ಮನೆ ಕಟ್ಟಿಸಬಹುದು. ಸರ್ಕಾರದಿಂದ ಹತ್ತು ಸಾವಿರ ಸಬ್ಸಿಡಿಗಾಗಿ ಓಡಾಡುತ್ತಿದ್ದೇನೆ. ಅದೇನಾದ್ರೂ ಸಿಕ್ಕರೆ ಕರ್ನಾಟಕದಲ್ಲಿ ಸ್ಲಮ್ ಗಳೇ ಇರುವುದಿಲ್ಲ, ಎಂದು ಹೇಳಿದ್ದರು. ಅವರ ಚಿಂತನೆ ಅಪಾರವಾದದ್ದು” ಎನ್ನುತ್ತಾ ಶಂಕರ್ ನಾಗ್ ಅವರ ಜೀವನಶೈಲಿ, ಅವರ ಆಲೋಚನಾ ಶೈಲಿ ಬಗ್ಗೆ ಹಂಚಿಕೊಂಡರು ಸಿಹಿ ಕಹಿ ಚಂದ್ರು.

