ರೈತ ನಮ್ಮ ದೇಶದ ಬೆನ್ನೆಲುಬು. ಅನ್ನದಾತ ಎಂದು ಕರೆಸಿಕೊಂಡರೂ ಕೆಲವೊಮ್ಮೆ ಒಂದೊತ್ತಿನ ಊಟಕ್ಕೂ ಒದ್ದಾಡುವಂತಾಗುತ್ತದೆ ಅವನ ಬದುಕು. ಇಂತಹ ರೈತನ ಜೀವನದ ಬಗ್ಗೆ ಹೇಳುವಂತಹ ಸಿನಿಮಾ ‘ಶ್ರೀಮಂತ’. ಹಣ ಆಸ್ತಿ ಅಂತಸ್ತು ಇರುವವನಲ್ಲ ಶ್ರೀಮಂತ, ಬದಲಾಗಿ ರೈತನೇ ನಿಜವಾದ ‘ಶ್ರೀಮಂತ’ ಎಂಬ ವಿಚಾರವನ್ನ ಸಾರಲು ಈ ಸಿನಿಮಾ ಇದೇ ಮೇ 19ರಂದು ಬೆಳ್ಳಿತೆರೆಯ ಮೇಲೆ ಬರಲಿದೆ. ಹಾಸನ ರಮೇಶ್ ಅವರ ನಿರ್ದೇಶನದಲ್ಲಿ ಸಿದ್ದವಾದ ಈ ಸಿನಿಮಾಗೆ ಕ್ರಾಂತಿ ಎಂಬ ಯುವನಟ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮುಖ ಹೈಲೈಟ್ ಅಂದರೆ ಬಾಲಿವುಡ್ ನ ಸ್ಟಾರ್ ನಟ, ಜನರ ಮನಗೆದ್ದಂತಹ ‘ರಿಯಲ್ ಹೀರೋ’ ಸೋನು ಸೂದ್ ಅವರು ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಹೊರಬಿದ್ದ ಹೊಸ ಸುದ್ದಿಯ ಪ್ರಕಾರ ಕನ್ನಡದ ಸ್ಟಾರ್ ನಟ ಒಬ್ಬರು ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.
ನಿರ್ದೇಶಕ ಹಾಸನ ರಮೇಶ್ ಅವರು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಈ ವಿಚಾರದ ಬಗ್ಗೆ ಹಂಚಿಕೊಂಡಿದ್ದಾರೆ. ಕನ್ನಡಿಗರು ಬಹುವಾಗಿ ಮೆಚ್ಚಿದಂತಹ ನಾಯಕ ನಟ ಅಭಿನಯ ಚಕ್ರವರ್ತಿ ಎಂದೇ ಕರೆಸಿಕೊಳ್ಳುವ ಕಿಚ್ಚ ಸುದೀಪ್ ಅವರು ಕೂಡ ಈ ‘ಶ್ರೀಮಂತ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೋನು ಸೂದ್ ಅವರು ಕೂಡ ಇರುವುದರಿಂದ ತಾರಾಗಣ ಬಿಗಿಯಾಗೇ ಇದೆ. ಜೊತೆಗೆ ಹೆಸರಾಂತ ರಾಜಕಾರಣಿಗಳಾದ ಯಡಿಯೂರಪ್ಪ, ದೇವೇಗೌಡ ಮುಂತಾದವರು ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
‘ಗೋಲ್ಡನ್ ರೈನ್ ಮೂವೀಸ್’ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಹಾಸನ ರಮೇಶ್, ನಾರಾಯಣಪ್ಪ ಹಾಗು ಸಂಜಯ್ ಬಾಬು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕ್ರಾಂತಿ ಅವರ ಜೊತೆಗೆ ವೈಷ್ಣವಿ ಪಟುವರ್ಧನ್ ಹಾಗು ವೈಷ್ಣವಿ ಚಂದ್ರನ್ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ನಟಿಸುತ್ತಿರುವ ವಿಚಾರ ಹೊರಬಿದ್ದಿದ್ದು ಚಿತ್ರಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ಇದೆ ಮೇ 19ಕ್ಕೆ ಸಿನಿಮಾ ಎಲ್ಲೆಡೆ ಬಿಡುಗಡೆಯಾಗಲಿದೆ.

