ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಜುಲೈ 12 ಹುಟ್ಟುಹಬ್ಬದ ಸಂಭ್ರಮದ ದಿನ. ಮೊದಲೆಲ್ಲ ಸಾಗರದಷ್ಟು ಅಭಿಮಾನಿಗಳ ಜೊತೆಗೆ ತಮ್ಮ ಜನ್ಮದಿನವನ್ನ ಆಚರಿಸಿಕೊಳ್ಳುತ್ತಿದ್ದ ಶಿವಣ್ಣ, ಕಳೆದ ನಾಲ್ಕು ವರ್ಷಗಳಿಂದ ಈ ಸಂಭ್ರಮವನ್ನ ನಿಲ್ಲಿಸಿದ್ದರು. ಕೊರೋನ, ಅಪ್ಪು ಅವರ ಅಕಾಲಿಕ ಅಗಲಿಕೆ ಇವೆಲ್ಲ ಈ ಆಚರಣೆಯನ್ನ ನಿಲ್ಲಿಸಲು ಕಾರಣಗಳಾಗಿದ್ದವು. ಆದರೆ ಈ ಬಾರೀ ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬದ ದಿನವನ್ನ ಕಳೆಯಲು ಶಿವಣ್ಣ ನಿರ್ಧರಿಸಿದ್ದಾರೆ. ಅವರ ಅಭಿಮಾನಿಗಳು ಕೂಡ, ತಮ್ಮ ನೆಚ್ಚಿನ ನಾಯಕನ ಜನಮದಿನವನ್ನ ಆಚರಿಸಲು ಕಾಯುತ್ತಿದ್ದಾರೆ. ಅದಕ್ಕಾಗಿ ಅದ್ದೂರಿ ಸಿದ್ಧತೆಗಳು ಕೂಡ ನಡೆಯುತ್ತಿವೆ.
ಈ ಬಗ್ಗೆ ಮಾತನಾಡುವ ಶಿವಣ್ಣನ ಪಕ್ಕಾ ಅಭಿಮಾನಿಗಳೂ, ಹಾಗು ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿರುವ ಕೆ ಪಿ ಶ್ರೀಕಾಂತ್ ಅವರು, “ನಾಲ್ಕು ವರ್ಷಗಳಿಂದ ಶಿವಣ್ಣನವರ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗದಿದ್ದರಿಂದ ಬೇಸರದಲ್ಲಿದ್ದ ಅಭಿಮಾನಿಗಳು ಈ ವರ್ಷವಾದರೂ ಅವರ ಹುಟ್ಟುಹಬ್ಬವನ್ನ ಭರ್ಜರಿಯಾಗಿ ಆಚರಿಸಲು ಹಲವರ ಆಸೆಯಿತ್ತು. ಅಷ್ಟೇ ಅಲ್ಲದೇ ಇತ್ತೀಚೆಗೆ ಡಾನ್ಸ್ ಕರ್ನಾಟಕ ಡಾನ್ಸ್ ಚಿತ್ರೀಕರಣಕ್ಕೆ ಬಂದಿದ್ದ ಹಲವು ಅಭಿಮಾನಿಗಳು ಜುಲೈ 12ರಂದು ಎಲ್ಲಿಯೂ ಹೋಗದೇ ಇರುವಂತೆ ಕೇಳಿಕೊಂಡಿದ್ದಾರೆ” ಎಂದಿದ್ದಾರೆ.


ಅಭಿಮಾನಿ ಪುನೀತ್ ಕುಮಾರ್ ಅವರು ಮಾತನಾಡಿ, “ನಾಲ್ಕು ವರ್ಷಗಳಿಂದ ನಾವು ಈ ದಿನಕ್ಕೆ ಕಾಯುತ್ತಿದ್ದೆವು. ಈಗ ಅದಕ್ಕೆ ಕಾಲ ಕೂಡಿಬಂದಿದೆ. ಅದಕ್ಕೆಂದೇ ಸಾವಿರಾರು ಅಭಿಮಾನಿಗಳು ರಾಜ್ಯದ ವಿವಿಧ ಭಾಗಗಳಿಂದ ಬರಲಿದ್ದಾರೆ. ಹಲವು ಸಮಾಜಸ್ನೇಹಿ ಕೆಲಸಗಳು ಕೂಡ ಈ ದಿನ ನಡೆಯಲಿವೆ” ಎಂದರು.
ಅಂತೆಯೇ ಈ ಬಾರೀ ಜುಲೈ 11ರ ಸಂಜೆಯಿಂದಲೇ ಆಚರಣೆಗಳು ಆರಂಭವಾಗಲಿವೆ. ರಾತ್ರಿ 12ಗಂಟೆಗೆ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಅದ್ದೂರಿ ಆಚರಣೆ ನಡೆಸಲಿದ್ದಾರೆ. ನಂತರ 12ನೇ ತಾರೀಕಿನಂದು ರಾಜ್ಯದ ವಿವಿಧ ಭಾಗಗಳ ಅಭಿಮಾನಿಗಳು ಶಿವಣ್ಣನನ್ನ ಭೇಟಿಯಾಗಲು ಬರಲಿದ್ದಾರೆ. ನಾಗವಾರದಲ್ಲಿರುವ ಶಿವಣ್ಣನ ‘ಶ್ರೀಮುತ್ತು’ ಮನೆಯಲ್ಲಿ ಇವರೆಲ್ಲರಿಗೂ ಭರ್ಜರಿ ಊಟದ ವ್ಯವಸ್ಥೆಯನ್ನ ಮಾಡಲಿದ್ದಾರೆ. ಅಲ್ಲದೇ ನಗರದ ಸಂತೋಷ್ ಥಿಯೇಟರ್ ನಲ್ಲಿ ‘ಘೋಸ್ಟ್’ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ಕೂಡ ನಡೆಯಲಿದೆ. ಜೊತೆಗೆ ರಕ್ತದಾನ ಶಿಬಿರಗಳು ಹಾಗು ಆರೋಗ್ಯ ತಪಾಸಣೆ ಕಾರ್ಯಕ್ರಮ ಕೂಡ ನಡೆಯಲಿದೆ.
ಈ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿರುವ ಶಿವರಾಜ್ ಕುಮಾರ್ ಅವರು, ” ನಾಲ್ಕು ವರ್ಷಗಳಿಂದ ನನ್ನ ಅಭಿಮಾನಿಗಳನ್ನ ಭೇಟಿಯಾಗಲು ಆಗಿರಲಿಲ್ಲ. ಈಗ ಆ ದಿನ ಬಂದಿರುವುದು ಸಂತಸವಾಗಿದೆ. ಅವರಿಂದಲೇ ನಾನು ಈ ವರೆಗೆ ಬಂದಿರುವುದು. ಅವರಿಗಾಗಿ ಒಂದು ದಿನ ಮೀಸಲಿಡಲು ನನಗೆ ಸಂತೋಷವಿದೆ” ಎಂದಿದ್ದಾರೆ.
ಜುಲೈ 12ರಂದು ಬಹುನಿರೀಕ್ಷಿತ ‘ಘೋಸ್ಟ್’ ಚಿತ್ರದಿಂದ ಬಿಗ್ ಡ್ಯಾಡಿ ಎಂಬ ಟೀಸರ್ ಬಿಡುಗಡೆಯಾಗಲಿದೆ. ಜೊತೆಯಲ್ಲಿಯೇ ಶಿವಣ್ಣ ನಟಿಸುತ್ತಿರುವ ಪರಭಾಷೆಯ ನಿರೀಕ್ಷಿತ ಸಿನಿಮಾಗಳಾದ, ರಜನಿಕಾಂತ್ ಅವರ ‘ಜೈಲರ್’,ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಗಳಿಂದ ಕೂಡ ಟೀಸರ್ ಅಥವಾ ಫಸ್ಟ್ ಲುಕ್ ಗಳು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಜೊತೆಗೆ ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾಗಳು ಕೂಡ ಘೋಷಣೆಯಾಗಲಿವೆ ಎನ್ನಲಾಗುತ್ತಿದೆ.



