ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರ ತನ್ನ ಪ್ರಶಸ್ತಿಯ ಓಟವನ್ನು ಮುಂದುವರೆಸಿದೆ. ಬೂಸನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಬಳಿಕ ಇದೀಗ ಫ್ರಾನ್ಸ್ ನಲ್ಲಿ ನಡೆದ ‘3 ಕಾಂಟಿನೆಂಟ್ಸ್’ ನಲ್ಲಿ ‘ಯುವ ತೀರ್ಪುಗಾರರ’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಹಿಂದೆ ರಿಷಬ್ ಶೆಟ್ಟಿ ನಿರ್ಮಾಣದ ‘ಪೆಡ್ರೊ’ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಂಡು ಸದ್ದು ಮಾಡಿತ್ತು. ಈಗ ಜೈ ಶಂಕರ್ ಆರ್ಯರ್ ನಿರ್ದೇಶನದ ‘ಶಿವಮ್ಮ’ ಚಿತ್ರವೂ ಇಂಟರ್ ನ್ಯಾಶನಲ್ ಲೆವೆಲ್ ನಲ್ಲಿ ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ 46 ವರ್ಷದ ಶಿವಮ್ಮ ಎನ್ನುವ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರವನ್ನು ಭರವಸೆಯಿಂದ ಪಾಲಿಸುವ ಹೋರಾಟದ ಕಥೆಯನ್ನು ಚಿತ್ರ ಒಳಗೊಂಡಿದೆ.
ಶರಣಮ್ಮ ಚಟ್ಟಿ, ಚನ್ನೆಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸಿನಿಮಾದಲ್ಲಿ ನಟಿಸಿದ್ದಾರೆ.
‘ಶಿವಮ್ಮ’ ಇನ್ನಷ್ಟು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸುವ ಸಾಧ್ಯತೆಯಿದೆ.

