ರಮೇಶ್ ಅರವಿಂದ್ ಅಭಿನಯದ 103ನೇ ಸಿನಿಮಾ, ಬಹುನಿರೀಕ್ಷಿತವಾಗಿದ್ದ ‘ಶಿವಾಜಿ ಸುರತ್ಕಲ್ 2’ ಇದೇ ಏಪ್ರಿಲ್ 14ರಂದು ಎಲ್ಲೆಡೆ ಬಿಡುಗಡೆಯಾಗಿತ್ತು. ಸಿನಿಮಾ ತೆರೆಕಂಡು ಸುಮಾರು ಮೂರು ವಾರಗಳು ಕಳೆದ ಮೇಲೂ, ಆಕಾಶ್ ಶ್ರೀವತ್ಸ ನಿರ್ದೇಶನದ ಈ ‘ಶಿವಾಜಿ ಸುರತ್ಕಲ್ 2’ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನಷ್ಟು ಹೆಚ್ಚಿನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಚಿತ್ರವನ್ನ ಪ್ರದರ್ಶನ ಮಾಡುತ್ತಿವೆ. ಸಿನಿಮಾ ವಿತರಣೆ ಮಾಡಿದಂತಹ ಕೆ ಆರ್ ಜಿ ಸ್ಟುಡಿಯೋಸ್ ನೆರವಿನಿಂದ ಈ ಎಮೋಷನಲ್ ಥ್ರಿಲರ್ ಸಿನಿಮಾ ವಿವಿಧ ಭಾಗದ ಪ್ರೇಕ್ಷಕರನ್ನ ತಲುಪುತ್ತಿದೆ. ಈ ಯಶಸ್ಸಿನ ನಡುವೆ ಎಲ್ಲೆಡೆ ಚಿತ್ರದ್ದೆ ಸುದ್ದಿ.
ಇದರ ನಡುವೆ ಸಿನಿಮಾದ ನಿರ್ದೇಶಕ ಆಕಾಶ್ ಶ್ರೀವತ್ಸ ಹಾಗು ನಿರ್ಮಾಪಕ ಅನೂಪ್ ಗೌಡ ಅವರು ಮೈಸೂರಿನ ಮಹಾರಾಜರಾದ ಶ್ರೀ ಯದುವೀರ್ ಒಡೆಯರ್ ಅವರನ್ನು ಭೇಟಿಯಾಗಿದ್ದಾರೆ. ಒಡೆಯರ್ ಅವರು ಸಿನಿಮಾ ಕಾಣುತ್ತಿರುವ ಸಫಲತೆಯ ಬಗೆಗೆ ಸಂತಸ ವ್ಯಕ್ತಪಡಿಸುತ್ತಾ, ಇನ್ನಷ್ಟು ಯಶಸ್ಸು ಸಿಗಲಿ ಎಂದೂ ಹರಸಿದರು. ಜೊತೆಗೆ ನಾಯಕ ರಮೇಶ್ ಅರವಿಂದ್ ಅವರ ಬಗೆಗೂ ಅಭಿಮಾನ ವ್ಯಕ್ತಪಡಿಸಿದ್ದಾರೆ.
ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ ಈ ಥ್ರಿಲರ್ ಸಿನಿಮಾದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ವಿನಾಯಕ್ ಜೋಶಿ, ಸಂಗೀತ ಶೃಂಗೇರಿ ಸೇರಿದಂತೆ ಹಲವು ಪ್ರತಿಭಾನ್ವಿತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಜೂಡಾ ಸ್ಯಾಂಡಿ ಅವರು ಚಿತ್ರಕ್ಕೆ ಸಂಗೀತ ತುಂಬಿದ್ದಾರೆ. ಕುತೂಹಲ ಕೆರಳಿಸೋ ಕಥಾಹಂದರದಲ್ಲಿ, ಮನಮುಟ್ಟುವ ಭಾವನೆಗಳು ಸಹ ತುಂಬಿರುವುದರಿಂದ ಜನರ ಮನಸ್ಸನ್ನ ಬಹುವಾಗಿ ಗೆಲ್ಲುತ್ತಿರುವ ಈ ಸಿನಿಮಾ, ಐಪಿಎಲ್ ಹಾಗು ಚುನಾವಣಾ ಗಲಾಟೆಗಳ ನಡುವೆಯೂ ಎಲ್ಲರ ಮೆಚ್ಚುಗೆ ಪಡೆಯುತ್ತಿರುವುದು ಸಂತಸದ ವಿಚಾರ.

