ರಮೇಶ್ ಅರವಿಂದ್ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಶಿವಾಜಿ ಸುರತ್ಕಲ್ 2’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಬ್ಲಾಕ್ ಬಸ್ಟರ್ ಸಿನಿಮಾ ‘ಶಿವಾಜಿ ಸುರತ್ಕಲ್’ ನ ಮುಂದುವರೆದ ಭಾಗವಾಗಿ ಈ ಚಿತ್ರ ಮೂಡಿಬಂದಿದ್ದು, ಸದ್ಯ ಎಲ್ಲೆಡೆ ಬಾರೀ ಸದ್ದು ಮಾಡುತ್ತಿದೆ. ಇಂದು(ಮಾರ್ಚ್ 31) ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಮಾದ ಬಗೆಗಿನ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಹಾಗಾದರೆ ಹೇಗಿದೆ ಟ್ರೈಲರ್?
‘ಶಿವಾಜಿ ಸುರತ್ಕಲ್’ ಸಿನಿಮಾದಲ್ಲಿ ಶೀರ್ಷಿಕೆಯ ಹೆಸರಿನ ನಾಯಕನ ಪಾತ್ರ ಒಬ್ಬ ನಿಷ್ಣಾತ ಪೊಲೀಸ್ ಅಧಿಕಾರಿಯದು. ತನಿಖೆ ನಡೆಸುತ್ತಿರೋ ರೋಮಾಂಚಕ ಕೇಸ್ ಗು, ಅವನ ವೈಯಕ್ತಿಕ ಜೀವನಕ್ಕೂ ಇರುವ ನಂಟಿನಿಂದಾಗಿ ಕಥೆ ಕುತೂಹಲಕಾರಿಯಾಗಿ ಸಾಗುತ್ತದೆ. ಇದೇ ರೀತಿಯ ಕಥಾ ಹಂದರವನ್ನು ನಾವು ‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲೂ ಕಾಣುವ ಸಾಧ್ಯತೆಯಿದೆ. ಮೊದಲ ಸಿನಿಮಾದಲ್ಲಿ ನಾಯಕನ ಹೆಂಡತಿಯ ಕಥೆ ಪ್ರಮುಖವಾಗಿದ್ದರೆ, ಇಲ್ಲಿ ಅದರ ಜೊತೆ ಆತನ ಪುಟ್ಟ ಮಗಳನ್ನೂ ಕಾಣಬಹುದು. ಭಯ ಹುಟ್ಟಿಸೋ ರೀತಿಯಲ್ಲಿ ಸಿಗುವ ಶವಗಳ ಹಿಂದಿನ ಹಿನ್ನೆಲೆಯನ್ನು ಭೇದಿಸಲು ಬರುವ ನಾಯಕ ಶಿವಾಜಿಗೆ ತನ್ನ ಜೀವನಕ್ಕೂ ಈ ಕೇಸ್ ಗೂ ಏನೋ ಸಂಭಂದವಿದೆ ಎಂದು ಭಾಸವಾಗುತ್ತದೆ. ಜೊತೆಗೆ ಕೇಸ್ ಕೂಡ ಇನ್ನಷ್ಟು ಕುತೂಹಲಕಾರಿಯಾಗಿ ಭಯಾನಕವಾಗಿ ರೂಪಿಗೊಳ್ಳುತ್ತಿರುತ್ತದೆ. ಹಾಗಾದರೆ ಈ ಕೇಸ್ ಅನ್ನ ಶಿವಾಜಿ ಭೇದಿಸುತ್ತಾರ? ಅದು ಹೇಗೇ? ಎನ್ನುವುದನ್ನೆಲ್ಲ ಸಿನಿಮಾದಲ್ಲೇ ನೋಡಬೇಕಿದೆ.
ಆಕಾಶ್ ಶ್ರೀವತ್ಸ ಅವರ ನಿರ್ದೇಶನ ಮೊದಲಿನಂತೆ ಈ ಚಿತ್ರದಲ್ಲೂ ಮನಗೆದ್ದಿದೆ. ಇಲ್ಲಿ ಚಿತ್ರದ ಎಡಿಟರ್ ಕೂಡ ಅವರೇ ಆಗಿರುವುದರಿಂದ ಕುತೂಹಲ ಹುಟ್ಟಿಸುವ ಪರಿಯಲ್ಲಿಯೇ ಚಿತ್ರದ ಟ್ರೈಲರ್ ಮೂಡಿಬಂದಿದೆ. ಇನ್ನು ಜೂಡಾ ಸ್ಯಾಂಡಿಯವರ ಸಂಗೀತ ಕೂಡ ಸರಿಯಾಗಿ ಹೊಂದಿಕೊಂಡಿದೆ. ಎಲ್ಲಕಿಂತ ಹೆಚ್ಚಾಗಿ ತಮ್ಮ 103ನೇ ಸಿನಿಮಾದಲ್ಲಿ ನಟಿಸುತ್ತಿರುವ ರಮೇಶ್ ಅರವಿಂದ್ ಅವರ ನಟನೇ ಇಲ್ಲಿನ ಮೊದಲ ಪ್ಲಸ್ ಪಾಯಿಂಟ್ ಎನ್ನಬಹುದು. ಜೊತೆಗೆ ಕಥೆಯ ಪ್ರಮುಖ ಪಾತ್ರದರಿಗಳಾದ ರಾಧಿಕಾ ನಾರಾಯಣ್, ಮೇಘನ ಗಾಂವ್ಕರ್, ಸಂಗೀತ ಶೃಂಗೇರಿ ಹಾಗು ಇತರರು ಇನ್ನಷ್ಟು ಉತ್ತಮತೆಯನ್ನ ಚಿತ್ರಕ್ಕೆ ಸೇರಿಸಲಿದ್ದಾರೆ. ಟ್ರೈಲರ್ ನ ಅಂತ್ಯಕ್ಕೆ ಟ್ವಿಸ್ಟ್ ಒಂದನ್ನು ಕೂಡ ಇಡುವ ಮೂಲಕ ಈಗಾಗಲೇ ಇರುವಂತಹ ಕುತೂಹಲವನ್ನ ಇನ್ನಷ್ಟು ಹೆಚ್ಚಿಸಿದ್ದಾರೆ ನಿರ್ದೇಶಕ ಆಕಾಶ್ ಶ್ರೀವತ್ಸ. ಒಟ್ಟಿನಲ್ಲಿ ಒಂದೊಳ್ಳೆ ಥ್ರಿಲರ್ ಸಿನಿಮಾ ನೋಡಲು ಇಡೀ ಕರುನಾಡೇ ಕಾತುರದಿಂದ ಕಾಯುವಂತೆ ಚಿತ್ರದ ಟ್ರೈಲರ್ ಮಾಡಿದೆ. ಈ ಬಹುನಿರೀಕ್ಷಿತ ಸಿನಿಮಾ ಇದೇ ಏಪ್ರಿಲ್ 14ಕ್ಕೆ ಬಿಡುಗಡೆಯಾಗುತ್ತಿದೆ.

