ರಮೇಶ್ ಅರವಿಂದ್ ಅವರ ಅಭಿನಯದ 103ನೇ ಸಿನಿಮಾ, ಬ್ಲಾಕ್ ಬಸ್ಟರ್ ‘ಶಿವಾಜಿ ಸುರತ್ಕಲ್’ನ ಮುಂದುವರೆದ ಭಾಗ ‘ಶಿವಾಜಿ ಸುರತ್ಕಲ್ 2 ದಿ ಮಿಸ್ಟಿರಿಯಸ್ ಕೇಸ್ ಓಫ್ ಮಾಯಾವಿ’ ಸಿನಿಮಾ ಸದ್ಯ ಭಾರೀ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಇಂದು(ಮಾರ್ಚ್ 15) ರಂದು ಬಿಡುಗಡೆಯಾದ ಸಿನಿಮಾದ ಹೊಸ ಹಾಡು ‘ಟ್ವಿಂಕಲ್ ಟ್ವಿಂಕಲ್’. ಸಿಲ್ಕಿ ಶರ್ಮಿಳಾಳನ್ನ ಶಿವಾಜಿ ಸುರತ್ಕಲ್ ತನಿಖೆಗೆ ಸಂಭಂದಿಸಿ ಭೇಟಿ ಮಾಡುವ ಸನ್ನಿವೇಶವನ್ನ ತೋರಿಸೋ ಈ ಹಾಡು ಇದೀಗ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ ಅವರು ಈ ಹಾಡಿಗೆ ಸಂಗೀತ ತುಂಬಿದ್ದು, ಸದ್ಯ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.


‘777 ಚಾರ್ಲಿ’ ಸಿನಿಮಾದ ನಾಯಕಿಯಾದ ಸಂಗೀತ ಶೃಂಗೇರಿ ಅವರು ಈ ಹಾಡಿನ ‘ಸಿಲ್ಕಿ ಶರ್ಮಿಳಾ’ ಆಗಿ ಹೆಜ್ಜೆ ಹಾಕಿದ್ದಾರೆ. ಈ ಪಾತ್ರ ಹಾಡಿಗಷ್ಟೇ ಸೀಮಿತವಾಗಿರದೆ ಕಥೆಯಲ್ಲೂ ಟ್ವಿಸ್ಟ್ ಕೊಡುವ ಸಾಧ್ಯತೆಗಳೂ ಕೂಡ ಕಾಣಿಸಿಕೊಳ್ಳುತ್ತಿದೆ. ನಟ ವಿನಾಯಕ್ ಜೋಶಿ ಕೂಡ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ತಮ್ಮ ಮನಮುಟ್ಟುವ ಸಂಗೀತದ ಮೂಲಕ ಸಿನಿಪ್ರೇಮಿಗಳಿಗೆ ಪರಿಚಿತರಾಗಿರುವ ಜೂಡಾ ಸ್ಯಾಂಡಿಯವರ ಸಂಗೀತ ಇರುವ ‘ಟ್ವಿಂಕಲ್ ಟ್ವಿಂಕಲ್’ ಹಾಡನ್ನು ಸ್ವತಃ ಜೂಡಾ ಸ್ಯಾಂಡಿಯವರು ಹಾಗು ಈಶ ಸುಚಿ ಅವರು ಹಾಡಿದ್ದಾರೆ. ಸಿನಿಮಾದ ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಹಾಡಿನ ಸಾಹಿತ್ಯ ರಚಿಸಿದ್ದಾರೆ. ಕಲರ್ ಫುಲ್ ಆಗಿ ಮೂಡಿಬಂದಿರುವ ಈ ಹಾಡಿನಲ್ಲಿ ರಮೇಶ್ ಅರವಿಂದ್ ಅವರ ನೃತ್ಯವನ್ನು ಕೂಡ ಕಾಣಬಹುದಾಗಿದೆ.


ಆಕಾಶ್ ಶ್ರೀವತ್ಸ ಅವರು ರಚಿಸಿ ನಿರ್ದೇಶಿಸಿರುವ ‘ಶಿವಾಜಿ ಸುರತ್ಕಲ್ 2’ ಇದೆ ಏಪ್ರಿಲ್ 14ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಅಂಜನಾದ್ರಿ ಸಿನಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ರೇಖಾ ಕೆ ಎನ್ ಹಾಗು ಅನೂಪ್ ಗೌಡ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರಮೇಶ್ ಅರವಿಂದ್ ಅವರ ಜೊತೆಗೇ ರಾಧಿಕಾ ನಾರಾಯಣ್, ವಿನಾಯಕ್ ಜೋಶಿ ಸೇರಿದಂತೆ ಇನ್ನು ಹಲವು ನಟರು ಕಥೆಯ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿಯವರ ಸಂಗೀತ ಸಿನಿಮಾದಲ್ಲಿರಲಿದೆ. ಮೊದಲ ಭಾಗದಲ್ಲಿ ತಮ್ಮ ಸಂಗೀತದಿಂದ ಜನರನ್ನ ಮೆಚ್ಚಿಸಿದ್ದ ಜೂಡಾ ಸ್ಯಾಂಡಿಯವರು ಎರಡನೇ ಭಾಗದಲ್ಲೂ ತಮ್ಮ ಮೊದಲ ಹಾಡು ‘ಟ್ವಿಂಕಲ್ ಟ್ವಿಂಕಲ್’ ನಿಂದ ಚಿತ್ರದ ಸಂಗೀತದ ಬಗೆಗೆ ಭರವಸೆ ಮೂಡಿಸಿದ್ದಾರೆ.
2020ರಲ್ಲಿ ಬಿಡುಗಡೆಯಾಗಿ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾದ ‘ಶಿವಾಜಿ ಸುರತ್ಕಲ್: ದಿ ಕೇಸ್ ಆಫ್ ರಣಗಿರಿ ರಹಸ್ಯ’ ಸಿನಿಮಾದ ನಂತರ ಹುಟ್ಟಿಕೊಂಡದ್ದು ಈ ಎರಡನೇ ಭಾಗ ‘ಶಿವಾಜಿ ಸುರತ್ಕಲ್-2: ದಿ ಮಿಸ್ಟಿರಿಯಸ್ ಕೇಸ್ ಆಫ್ ಮಾಯಾವಿ’. ಇದೀಗ ಕೇಳಿಬರುತ್ತಿರೋ ಸುದ್ದಿಗಳ ಪ್ರಕಾರ ಈ ‘ಶಿವಾಜಿ ಸುರತ್ಕಲ್’ ಸಿನಿಮಾದ ಮೂರನೇ ಭಾಗ ಕೂಡ ಸಿದ್ಧತೆಯಲ್ಲಿದೆ ಎನ್ನಲಾಗುತ್ತಿದೆ. ಚಿತ್ರತಂಡ ಇದೆ ಸರಣಿಯ ಮೂರನೇ ಸಿನಿಮಾ ತಯಾರಿಸುವ ಬಗೆಗಿನ ಆಲೋಚನೆ ಮಾಡುತ್ತಿದೆ ಎನ್ನಲಾಗುತ್ತಿದ್ದೂ, ಎಲ್ಲದಕ್ಕೂ ಕಾದು ನೋಡಬೇಕಿದೆ.



