ನಟ ಶರಣ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ‘ಛೂ ಮಂತರ್’ ಸಿನಿಮಾದ ಟೀಸರ್ ರಿಲೀಸ್ ನೊಂದಿಗೆ ಅವರ ಹೊಸ ಸಿನಿಮಾವೂ ಘೋಷಣೆಯಾಗಿದೆ.
ಈ ಹಿಂದೆ ‘ಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’ ಸಿನಿಮಾವನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಅರವಿಂದ್ ಕುಪ್ಲಿಕರ್ ಈಗ ತಮ್ಮ ಮುಂದಿನ ಸಿನಿಮಾಕ್ಕೆ ಶರಣ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಇಷ್ಟು ದಿನ ನಾಯಕನಾಗಿಯೂ ಹಾಸ್ಯ ಪಾತ್ರದಲ್ಲಿ ಮಿಂಚುತ್ತಿದ್ದ ಶರಣ್ ಈ ಸಿನಿಮಾದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಎಲೆಕ್ಟ್ರಿಷಿಯನ್ ಪಾತ್ರಕ್ಕೆ ಶರಣ್ ಬಣ್ಣ ಹಚ್ಚಲಿದ್ದಾರೆ.
ಈ ಸಿನಿಮಾ ಶ್ರೀಧರ ಕೃಪ ಕಂಬೈನ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿದ್ದು, ಬಿ.ಬಸವರಾಜ್ ಹಾಗೂ ಶ್ರೀಧರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಬಾಗಲಕೋಟೆಯಲ್ಲಿ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದ್ದು, ಉತ್ತರ ಕರ್ನಾಟಕ ಶೈಲಿ ಭಾಷೆಯಲ್ಲಿ ಶರಣ್ ಗಮನ ಸೆಳೆಯಲಿದ್ದಾರೆ ಎಂದು ನಿರ್ದೇಶಕ ಅರವಿಂದ್ ಕುಪ್ಲಿಕರ್ ತಿಳಿಸಿದ್ದಾರೆ.
ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಹೊಸ ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಇದೇ ತಿಂಗಳ 20ರಿಂದ ಚಿತ್ರೀಕರಣ ಆರಂಭವಾಗಲಿದೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ ಇರಲಿದೆ.

