ನಮ್ಮ ಕನ್ನಡದಲ್ಲಿ ಹಲವು ಹೊಸ ರೀತಿಯ ನಿರ್ದೇಶಕರು ತಮ್ಮ ಪ್ರತಿಭೆಯಿಂದ ಎಲ್ಲರ ಗಮನಸೆಳೆಯುತ್ತಿದ್ದಾರೆ. ಈ ಎಲ್ಲ ಯುವನಿರ್ದೇಶಕರಲ್ಲಿ ಬಹುಪಾಲು ಈ ಪ್ರತಿಭಾವಂತರ ಮೊದಲ ಹೆಜ್ಜೆ ಕಿರುಚಿತ್ರ. ಅದೊಂತರ ತಮ್ಮ ನಿರ್ದೇಶನದ ತುಣುಕೊಂದನ್ನು ಜನರ ಮುಂದೆ ಇಡುವಂತೆ. ಈ ರೀತಿಯ ತಮ್ಮ ಮೊದಲ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವವರು ಬೇಕು ಎಂದು ಅದೆಷ್ಟೋ ನಿರ್ದೇಶಕರು ಹಾತೊರೆಯುತ್ತಿರುತ್ತಾರೆ. ಇಂತಹ ಯುವನಿರ್ದೇಶಕರಿಗೆ ಆಶಾಕಿರಣ ಆಗಿರುವವರು ಸತ್ಯ ಹೆಗಡೆ ಅವರು. ಇವರ ‘ಸತ್ಯ ಹೆಗಡೆ ಸ್ಟುಡಿಯೋಸ್’ ಸಂಸ್ಥೆಯ ಮೂಲಕ ಈಗಾಗಲೇ 11 ಕಿರುಚಿತ್ರಗಳು ಬಿಡುಗಡೆಯಾಗಿದ್ದು, ಮುಂದೆಯೂ ಕೂಡ ಇದೆ ರೀತಿಯಲ್ಲಿ ಹಲವು ಯುವ ನಿರ್ದೇಶಕರುಗಳು ಉತ್ತಮ ಕಿರುಚಿತ್ರಗಳನ್ನ ಬಿಡುಗಡೆಗೊಳಿಸೋ ಉತ್ಸಾಹದಲ್ಲಿದ್ದಾರೆ.


ಸದ್ಯ ‘ಸತ್ಯ ಹೆಗಡೆ ಸ್ಟುಡಿಯೋಸ್’ನಲ್ಲಿ ಮೂರು ಕಿರುಚಿತ್ರಗಳು ಬಿಡುಗಡೆಯಾಗಲು ಸಿದ್ದವಾಗಿವೆ. ಈ ಪೈಕಿ ‘ಗ್ರಾಚಾರ’ ಎಂಬ ಹೊಸ ಕಿರುಚಿತ್ರ ಕಳೆದ ಶನಿವಾರವಷ್ಟೇ ಬಿಡುಗಡೆಯಾಗಿದ್ದು, ‘ಕಥೆಗಾರನ ಕಥೆ’,ಹಾಗು ಹೊಸ ಪರಿಯ ‘ಅಹಂ ಪರಂ’ ಎಂಬ ಇನ್ನೆರಡು ಕಿರುಚಿತ್ರಗಳು ಶೀಘ್ರದಲ್ಲಿ ಬಿಡುಗಡೆ ಕಾಣಲಿವೆ. ‘ಹೃದಯದ ಮಾತು’ ಎಂಬ ಕಾದಂಬರಿ ಸೇರಿದಂತೆ ಈಗಾಗಲೇ ಸುಮಾರು 8 ಕಾದಂಬರಿಗಳನ್ನು ಬರೆದು, ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿರುವಂತಹ ಕೌಶಿಕ್ ಕೂಡುರಸ್ತೆರವರು ‘ಕಥೆಗಾರನ ಕಥೆ’ ಕಿರುಚಿತ್ರವನ್ನ ನಿರ್ದೇಶನ ಮಾಡಿದ್ದರೆ, ಬಿಡುಗಡೆಯಾಗಿರುವ ‘ಗ್ರಾಚಾರ’ ಸಿನಿಮಾವನ್ನ ಅಜಯ್ ಪಂಡಿತ್ ಅವರು ನಿರ್ದೇಶನ ಮಾಡಿದ್ದಾರೆ. ಚೊಚ್ಚಲ ನಿರ್ದೇಶನ ಮಾಡಿರುವ ಈ ಇಬ್ಬರೂ ಇಂಜಿನಿಯರಿಂಗ್ ಪದವೀಧರರು. ಇನ್ನೂ ‘ಅಹಂ ಪರಂ’ ಚಿತ್ರ ವಿನಯ್ ಚಂದ್ರಹಾಸ್ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ.
ಬಿಡುಗಡೆಯಾಗಿರುವ ಹಾಗು ಸದ್ಯದಲ್ಲೇ ಬಿಡುಗಡೆಯಾಗುತ್ತಿರುವ ಈ ಮೂರು ಕಿರುಚಿತ್ರಗಳ ಪ್ರದರ್ಶನದ ಜೊತೆಗೇ ಪತ್ರಿಕಾಗೋಷ್ಟಿಯನ್ನು ಕೂಡ ‘ಸತ್ಯ ಹೆಗಡೆ ಸ್ಟುಡಿಯೋಸ್’ ತಂಡದವರು ಆಯೋಜಿಸಿದ್ದರು. ಈ ವೇಳೆ ಅತಿಥಿಗಳಾಗಿ ನಿರ್ದೇಶಕ ಗಿರಿರಾಜ್, ನಟ ಚೇತನ್ ಕುಮಾರ್ ಹಾಗು ‘ಗುಳ್ಟು’ ಸಿನಿಮಾ ಖ್ಯಾತಿಯ ನವೀನ್ ಶಂಕರ್ ಅವರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಗಿರಿರಾಜ್ ಅವರು, “ಈಗಿನ ಯುವಕರ ಸಿನಿಮಾ ಪಯಣಕ್ಕೆ ಕಿರುಚಿತ್ರ ಒಂದೊಳ್ಳೆ ಮೆಟ್ಟಿಲಾಗುತ್ತಿದೆ. ಸತ್ಯ ಹೆಗಡೆಯವರು ಕೂಡ ಉತ್ತಮ ಸಹಾಯ ಮಾಡುತ್ತಿದ್ದಾರೆ. ಮೂರು ಸಿನಿಮಾಗಳು ಕೂಡ ಉತ್ತಮವಾಗಿ ಮೂಡಿಬಂದಿವೆ. ಸತ್ಯ ಹೆಗಡೆಯವರು ಈ ಯುವಪೀಳಿಗೆಗೆ ಒಳ್ಳೆಯ ಅವಕಾಶ ಮಾಡಿಕೊಡುತ್ತಿದ್ದಾರೆ, ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಈ ಎಲ್ಲ ಪ್ರತಿಭಾವಂತ ಯುವ ಕಲಾವಿದರಿಗೆ ಒಳ್ಳೆಯದಾಗಲಿ” ಎಂದು ಶುಭಹಾರೈಸಿದರು. ನಟ ನವೀನ್ ಶಂಕರ್ ಅವರು ಕೂಡ ಮಾತನಾಡಿ “ನಾನು ಕೂಡ ಈ ಕಿರುಚಿತ್ರಗಳನ್ನು ಮಾಡಿಕೊಂಡೇ ಬಂದವನು. ನಾವು ಈ ಶಾರ್ಟ್ ಫಿಲಂ ಮಾಡುತ್ತಿದ್ದ ಕಾಲದಲ್ಲಿ ಸತ್ಯ ಹೆಗಡೆಯವರಂತಹ ಶಕ್ತಿ ನಮ್ಮ ಜೊತೆಗಿರಲಿಲ್ಲ, ಇಂತಹ ಸಾಥ್ ನಮಗೆ ಯಾರೂ ನೀಡಿರಲಿಲ್ಲ. ಈ ರೀತಿಯ ಪ್ರೋತ್ಸಾಹದಿಂದ ಇನ್ನಷ್ಟು ಯುವಪ್ರತಿಭೆಗಳ ಪರಿಚಯ ಆಗುತ್ತದೆ. ಈ ಅವಕಾಶಗಳನ್ನ ಈಗಿನ ಯುವಉತ್ಸಾಹಿಗಳು ಹೆಚ್ಚೇಚ್ಚು ಬಳಸಿಕೊಳ್ಳಬೇಕು” ಎಂದರು.



