‘ಲೈಫು ಇಷ್ಟೇನೆ’,’ನಾನು ಮತ್ತು ಗುಂಡ’,’ಜಿಗರ್ ಥಂಡ” ಸೇರಿದಂತೆ ಹತ್ತು ಹಲವು ಸಿನಿಮಾಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾಗಿರುವವರು ಸಂಯುಕ್ತ ಹೊರನಾಡ್ ಅವರು. ಇತೀಚೆಗಷ್ಟೇ ಬಿಡುಗಡೆಯಾದ ‘ಹೊಂದಿಸಿ ಬರೆಯಿರಿ’, ‘ಲವ್ ಬರ್ಡ್ಸ್’ ಸೇರಿದಂತೆ ಹಲವು ಸಿನಿಮಾಗಳ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿರುವ, ಹಚ್ಚುತ್ತಾ ಇರುವ ಸಂಯುಕ್ತ ಅವರು ಇದೀಗ ಸಾಮಾಜಿಕ ಕಳಕಳಿಯ ಹೆಜ್ಜೆಯೊಂದನ್ನು ಇಡುತ್ತಿದ್ದಾರೆ. ಅದುವೇ ‘ಪ್ರಾಣ ಅನಿಮಲ್ ಫೌಂಡೇಶನ್’. ಈ ಸಂಸ್ಥೆಯ ಮೂಲಕ ಅನಾರೋಗ್ಯದಿಂದ ಬಳಲುವ ಪ್ರಾಣಿಗಳನ್ನ ರಕ್ಷಿಸಿ ಉಪಚರಿಸೋ ಗುರಿಯನ್ನ ಸಂಯುಕ್ತ ಅವರು ಹೊಂದಿದ್ದಾರೆ.
‘ಪ್ರಾಣ ಅನಿಮಲ್ ಫೌಂಡೇಶನ್’ನ ಮೂಲಕ ಪ್ರಾಣಿಗಳಿಗಾಗಿ 24×7 ಕೆಲಸ ಮಾಡುವಂತಹ ಆಂಬುಲೆನ್ಸ್ ವ್ಯವಸ್ಥೆಯನ್ನ ಏರ್ಪಡಿಸಲಾಗುವುದು. ಜೊತೆಗೆ ಪ್ರಾಣಿಗಳ ಸಂರಕ್ಷಣೆಗಾಗಿ ಸಹಾಯವಾಣಿಯೊಂದನ್ನು ಕೂಡ ತೆರೆಯಲಾಗುವುದು. ಇತ್ತೀಚಿಗಷ್ಟೇ ಬೆಂಗಳೂರಿನ ಬನಶಂಕರಿಯಲ್ಲಿನ ‘ಸುಚಿತ್ರ ಫಿಲಂ ಸೊಸೈಟಿ’ಯಲ್ಲಿ ನಡೆದ ಕಾರ್ಯಕ್ರಮದ ಮೂಲಕ ಹೆಸರಾಂತ ಬಹುಭಾಷ ನಟರಾದಂತಹ ಪ್ರಕಾಶ್ ರಾಜ್ ಅವರು ಈ ಸಂಸ್ಥೆಯ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. “ನನಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಹೆಚ್ಚಿನ ಪ್ರೀತಿ. ಅವುಗಳೊಂದಿಗೆ ನಾವು ಹೆಚ್ಚು ಆತ್ಮೀಯವಾಗಿ ಮಾತನಾಡಿದರೆ ಜನ ನಮ್ಮನ್ನ ಹುಚ್ಚರು ಎನ್ನಬಹುದು. ಆದರೆ ಪರಿಶುದ್ಧವಾದ ಪ್ರೀತಿ ಸಿಗುವುದು ಪ್ರಾಣಿಗಳಲ್ಲೇ. ಈಗಿನ ಯುವಪೀಳಿಗೆಗೂ ಕೂಡ ಪ್ರಾಣಿಗಳ ಮೇಲೆ ಪ್ರೀತಿ ಕಾಳಜಿ ಬೆಳೆಯುತ್ತಿರುವದು ಸಂತಸದ ವಿಚಾರ” ಎಂದರು ಪ್ರಕಾಶ್ ರಾಜ್. ಈ ಸಂಧರ್ಭದಲ್ಲಿ ಸುಧಾ ಬೆಳವಾಡಿ, ಪ್ರಕಾಶ್ ಬೆಳವಾಡಿ, ಅನಿರುದ್ಧ, ಸುಧಾ ನಾರಾಯಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ತಮ್ಮೀ ಯೋಜನೆಯ ಬಗ್ಗೆ ಮಾತನಾಡುವ ಸಂಯುಕ್ತ ಹೊರನಾಡ್ ಅವರು,”ಪ್ರಾಣಿಗಳು ನಮಗೆ ಅಪಾರ ಪ್ರೀತಿ ನೀಡುತ್ತವೆ. ಅವುಗಳ ನೋವನ್ನು ನಿವಾರಿಸುವುದು ನಮ್ಮ ಕರ್ತವ್ಯ. ನಮ್ಮೀ ‘ಪ್ರಾಣ ಅನಿಮಲ್ ಫೌಂಡೇಶನ್’ನ ಪರಮಗುರಿ ಅದುವೇ. ಸದ್ಯಕ್ಕೆ ಪ್ರಾಣಿಗಳ ಸಂರಕ್ಷಣೆಗೆ ಆಂಬುಲೆನ್ಸ್ ಹಾಗು ಸಹಾಯವಾಣಿಯನ್ನು ತೆರೆದಿದ್ದೇವೆ. ಪ್ರಸ್ತುತ ಬೆಂಗಳೂರಿನಲ್ಲಷ್ಟೇ ಕಾರ್ಯಶೀಲವಾಗಿರುವ ಈ ಯೋಜನೆಯನ್ನು ಆದಷ್ಟು ಬೇಗ ವಿಸ್ತರಿಸುವ ಸಿದ್ಧತೆಯಲ್ಲಿದ್ದೇವೆ. ನಮ್ಮ ಈ ‘ಪ್ರಾಣ’ ಫೌಂಡೇಶನ್ ಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದಿದ್ದಾರೆ.



