ಎಸ್ ಎಸ್ ರಾಜಾಮೌಳಿ ಅವರ ‘ಆರ್ ಆರ್ ಆರ್’ ಸಿನಿಮಾದ ‘ನಾಟು ನಾಟು’ ಹಾಡು ಆಸ್ಕರ್ ಗೆ ಶಾರ್ಟ್ ಲಿಸ್ಟ್ ಗೊಂಡಿದೆ. ಇದರೊಂದಿಗೆ ಗುಜರಾತಿ ಸಿನಿಮಾ ಲಾಸ್ಟ್ ಫಿಲ್ಮ್ ಶೋ (ಚೆಲೋ ಶೋ) 2023 ರ ಆಸ್ಕರ್‌ಗಾಗಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಈ ಮೂಲಕ ಭಾರತೀಯ ಚಿತ್ರರಂಗಕ್ಕೆ ಈ ಬಾರಿಯಾದರ ಆಸ್ಕರ್ ಬರಬಹುದು ಎನ್ನುವ ನಿರೀಕ್ಷೆ ಹೆಚ್ಚಾಗಿದೆ.
ಆರ್‌ಆರ್‌ಆರ್ ಸಿನಿಮಾದ ಜನಪ್ರಿಯ ಹಾಡು ‘ನಾಟು ನಾಟು’ ಶಾರ್ಟ್ ಲಿಸ್ಟ್ ಗೆ ಸೇರ್ಪಡೆಗೊಂಡಿದ್ದು,
‘ದಿ ಲಾಸ್ಟ್ ಫಿಲ್ಮ್ ಶೋ’ ಚಿತ್ರ‘ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್’ ವರ್ಗಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗಿದೆ.
ಆರ್ ಆರ್ ಆರ್ ಶಾರ್ಟ್ ಲಿಸ್ಟ್ ನಲ್ಲಿರುವ ಇತರ ಸಿನಿಮಾದ ಹಾಡುಗಳೆಂದರೆ,‘ಅವತಾರ್: ದಿ ವೇ ಆಫ್ ವಾಟರ್’ ನಿಂದ ‘ನಥಿಂಗ್ ಈಸ್ ಲಾಸ್ಟ್’, ‘ಬ್ಲಾಂಕ್ ಪ್ಯಾಂಥರ್: ವಕಾಂಡ ಫಾರೆವರ್’ ನಿಂದ ‘ಲಿಫ್ಟ್ ಮಿ ಅಪ್’, ‘ಟಾಪ್ ಗನ್: ಮೇವರಿಕ್’ ನಿಂದ ‘ಹೋಲ್ಡ್ ಮೈ ಹ್ಯಾಂಡ್’ ಹಾಡುಗಳು ಈ ಸಾಲಿನಲ್ಲಿ ಸೇರಿವೆ.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 10 ವಿಭಾಗಗಳಲ್ಲಿ 2023ರ ಆಸ್ಕರ್ ಗಾಗಿ ತನ್ನ ಶಾರ್ಟ್ ಲಿಸ್ಟನ್ನು ಬಿಡುಗಡೆಗೊಳಿಸಿದೆ.
ನಾಮಿನೇಶನ್ ಗಳ ಮತದಾನವು ಜನವರಿ 12-17 ರವರೆಗೆ ನಡೆಯುತ್ತದೆ. ಜನವರಿ 24 ರಂದು ನಾಮಿನೇಶನ್ಸ್ ಪ್ರಕಟಿಸಲಾಗುವುದು. 95 ನೇ ಅಕಾಡೆಮಿ ಪ್ರಶಸ್ತಿಗಳನ್ನು ಮಾರ್ಚ್ 12 ರಂದು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಯೋಜಿಸಲಾಗಿದೆ.
ಈ ಸಂತಸದ ವಿಚಾರವನ್ನು ಆರ್ ಆರ್ ಆರ್ ತಂಡ ಟ್ವಿಟರ್ ನಲ್ಲಿ ಹಂಚಿಕೊಂಡು ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದೆ.

