ಎ ಪಿ ಅರ್ಜುನ್ ಅವರ ನಿರ್ದೇಶನದ ‘ಕಿಸ್’ ಸಿನಿಮಾ ಮೂಲಕ ಕನ್ನಡದ ಚಲನಚಿತ್ರರಂಗಕ್ಕೆ ಭರ್ಜರಿಯಾಗಿ ಪ್ರವೇಶ ಪಡೆದವರು ವಿರಾಟ್. ಬಹಳ ಕಡಿಮೆ ಸಮಯದಲ್ಲಿ ತಮ್ಮ ಸ್ಟೈಲಿಶ್ ಅಭಿನಯದ ಮೂಲಕ ಕನ್ನಡಿಗರ ಮನಸೆಳೆದು, ಅಪಾರ ಅಭಿಮಾನಿಗಳನ್ನ ಪಡೆದವರು ಇವರು. ಮೊದಲ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್ ಅವರ ಜೊತೆಗೇ ತಮ್ಮ ಎರಡನೇ ಸಿನಿಮಾ ‘ಅದ್ದೂರಿ ಲವರ್’ ಅನ್ನು ಕೂಡ ಮುಗಿಸಿಕೊಂಡಿರುವ ವಿರಾಟ್ ಅವರ ಸದ್ಯ ಸುದ್ದಿಯಲ್ಲಿರುವ ಮುಂದಿನ ಸಿನಿಮಾ ಅಂದರೆ ಅದು ದಿನಕರ್ ತೂಗುದೀಪ ಅವರ ನಿರ್ದೇಶನದ ‘ರಾಯಲ್’. ಸದ್ಯ ಈ ಚಿತ್ರತಂಡದಿಂದ ಸಿನಿಮಾದ ಝಲಕ್ ಒಂದು ಬಿಡುಗಡೆಯಾಗುತ್ತಿದೆ.
ನಾಳೆ(ಮಾರ್ಚ್ 11) ವಿರಾಟ್ ಅವರ ಜನ್ಮದಿನ. ಅದೇ ಕಾರಣಕ್ಕೆ ಚಿತ್ರತಂಡ ತಮ್ಮ ಸಿನಿಮಾದ ಮೂಲಕ ನಾಯಕ ವಿರಾಟ್ ಅವರಿಗೂ, ಅವರ ಅಭಿಮಾನಿಗಳಿಗೂ ಉಡುಗೊರೆ ನೀಡಲು ಸಜ್ಜಾಗಿದ್ದಾರೆ. ಒಂದು ಬ್ರೇಕ್ ತೆಗೆದುಕೊಂಡು ಮರಳಿ ನಿರ್ದೇಶನದತ್ತ ಮುಖ ಮಾಡಿರುವ ಸ್ಟಾರ್ ನಿರ್ದೇಶಕ ದಿನಕರ್ ತೂಗುದೀಪ ಅವರು ಆಕ್ಷನ್ ಕಟ್ ಹೇಳುತ್ತಿರುವ ಈ ‘ರಾಯಲ್’ ಸಿನಿಮಾದ ಒಂದು ‘ರಾಯಲ್’ ಝಲಕ್ ನಾಳೆ(ಮಾರ್ಚ್ 11) ಮಧ್ಯಾಹ್ನ 12:20ಕ್ಕೆ ಸರಿಯಾಗಿ ‘ಕೆ ಆರ್ ಜಿ ಕನೆಕ್ಟ್ಸ್ ‘ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಪೋಸ್ಟರ್ ಒಂದರ ಮೂಲಕ ಹೊರಬಿದ್ದಿರುವ ಈ ವಿಚಾರ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಜಯಣ್ಣ-ಭೋಗೇಂದ್ರ ಅವರ ಜಯಣ್ಣ ಫಿಲಂಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ನಾಯಕರಾಗಿ ವಿರಾಟ್ ಹಾಗು ಅವರಿಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸುತ್ತಿದ್ದಾರೆ. ‘ನವಗ್ರಹ’,’ಸಾರಥಿ’ ರೀತಿಯ ಹಿಟ್ ಸಿನಿಮಾಗಳನ್ನ ನೀಡಿರುವ ದಿನಕರ್ ತೂಗುದೀಪ ಅವರ ನಿರ್ದೇಶನ ಇರುವ ಸಿನಿಮಾ ಆದುದರಿಂದ ‘ರಾಯಲ್’ ನ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಜೊತೆಗೇ ಕನ್ನಡಿಗರು ಮೆಚ್ಚಿದ ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ಕೂಡ ಈ ಸಿನಿಮಾದ ಸಂಗೀತ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಸಿನಿಪ್ರೇಮಿಗಳ ಗಮನ ಸೆಳೆದಂತಹ ಸಿನಿಮಾಗಳಲ್ಲಿ ‘ರಾಯಲ್’ ಕೂಡ ಒಂದಾಗಿದೆ. ಈ ಸಿನಿಮಾದಿಂದ ವಿಡಿಯೋ ಒಂದು ನಾಳೆ(ಮಾರ್ಚ್ 11) ಬಿಡುಗಡೆಯಾಗಲಿದೆ.

