‘ಕನ್ನಡತಿ’ ಧಾರಾವಾಹಿಯಿಂದ ಕನ್ನಡಿಗರ ಮನೆಮಗನಾಗಿರುವ ಕಿರಣ್ ರಾಜ್ ಅವರು, ಹಲವು ಕನ್ನಡಿಗರ ನೆಚ್ಚಿನ ನಟ ಕೂಡ ಆಗಿದ್ದಾರೆ. ‘ಬಡ್ಡೀಸ್’,’ಮಾರ್ಚ್ 22′,’ಅಸತೋಮ ಸದ್ಗಮಯ’ ಮುಂತಾದ ಸಿನಿಮಾಗಳ ಮೂಲಕ ಚಂದನವನಕ್ಕೂ ಕಾಲಿಟ್ಟಿರುವ ಕಿರಣ್ ರಾಜ್ ಅವರು ಮುಂದೆ ಏನು ಮಾಡಲಿದ್ದಾರೆ ಎಂಬುದು ಎಲ್ಲರನ್ನು ಕಾಡುತ್ತಿದ್ದ ಪ್ರಶ್ನೆಯಾಗಿತ್ತು. ‘ಕನ್ನಡತಿ’ ಧಾರಾವಾಹಿ ಮುಗಿದ ನಂತರ ಕಿರಣ್ ರಾಜ್ ಏನು ಮಾಡಲಿದ್ದಾರೆ ಎಂದು ಕೇಳುತ್ತಿದ್ದ ಅಭಿಮಾನಿಗಳ ಪ್ರಶ್ನೆಗೆ ಕಿರಣ್ ರಾಜ್ ಅವರು ಒಂದು ಸಾಹಾಸಕೃತ್ಯ ಮಾಡಿಯೇ ಉತ್ತರ ನೀಡಿದ್ದಾರೆ. ತಮ್ಮ ಮುಂದಿನ ಹೆಜ್ಜೆಯ ಬಗೆಗೆ ತಿಳಿಸಲು ದುಬೈ ನ ಆಗಸದಲ್ಲಿ ಹಾರಿದ್ದಾರೆ ಕಿರಣ್ ರಾಜ್.


‘ಬಡ್ಡೀಸ್’ ಸಿನಿಮಾ ಖ್ಯಾತಿಯ ನಿರ್ದೇಶಕರಾದ ಗುರುತೇಜ್ ಶೆಟ್ಟಿಯವರ ಜೊತೆಗೆ ಕಿರಣ್ ರಾಜ್ ಅವರ ಮುಂದಿನ ಚಿತ್ರ ಸಿದ್ದವಾಗಲಿದೆ. ಇದೊಂದು ಪಕ್ಕ ಆಕ್ಷನ್ ಎಂಟರ್ಟೈನರ್ ಸಿನಿಮಾ ಆಗಿರಲಿದ್ದು, ಈ ಬಗೆಗಿನ ಸುಳಿವನ್ನು ಕಿರಣ್ ರಾಜ್ ಅವರು ಟೈಟಲ್ ಬಿಡುಗಡೆಯಲ್ಲೇ ನೀಡಿದ್ದಾರೆ. ತಮ್ಮ ಈ ಹೊಸ ಸಿನಿಮಾದ ಟೈಟಲ್ ಬಿಡುಗಡೆಗೆ ಆಕಾಶದಿಂದ ಹಾರಿ ಸ್ಕೈ ಡೈವಿಂಗ್ ಮಾಡುತ್ತಾ ತಮ್ಮ ಹೊಸ ಸಿನಿಮಾದ ಹೆಸರನ್ನು ಜಗತ್ತಿಗೆ ತಿಳಿಸಿದ್ದಾರೆ. ಈ ಹೊಸ ಚಿತ್ರಕ್ಕೆ ‘ರಾನಿ’ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಮಾತನಾಡುವ ಕಿರಣ್ ರಾಜ್, “ಸಾಮಾನ್ಯವಾಗಿ ಗಣ್ಯರ ಸಮ್ಮುಖದಲ್ಲಿ, ಒಂದು ಕಾರ್ಯಕ್ರಮದಲ್ಲಿ ಚಿತ್ರದ ಶೀರ್ಷಿಕೆ ಅನಾವರಣಗೊಳ್ಳುತ್ತದೆ. ಆದರೆ ಸಿನಿಮಾವನ್ನ ಕನಸು ಎಂದು ಕಾಣುತ್ತಿದ್ದ ನಾನು ಕೊಂಚ ಭಿನ್ನವಾಗಿ ಪ್ರಯತ್ನಿಸೋಣ ಎಂದು ಬಯಸಿದೆ. ಅದಕ್ಕೆ ಸ್ಕೈ ಡೈವಿಂಗ್ ಆಯ್ಕೆ ಮಾಡಿಕೊಂಡೆ. ಈ ಪ್ರಯತ್ನಕ್ಕೆ ಮನೆಯವರಿಂದ, ಸ್ನೇಹಿತರಿಂದ ವಿರೋಧ ವ್ಯಕ್ತವಾದರೂ ಸಹ ನಾನು ಇಲ್ಲಿನ ಪರಿಣಿತರ ಬಳಿ ತರಬೇತಿ ಪಡೆದು ಈ ಸಾಹಸಕ್ಕೆ ಕೈ ಹಾಕಿದೆ. ಇದೊಂದು ಆಕ್ಷನ್ ಸಿನಿಮಾ ಆಗಿರುವುದರಿಂದ, ಚಿತ್ರದಲ್ಲೂ ಮೈ ನವೀರೇಳಿಸುವ ಆಕ್ಷನ್ ದೃಶ್ಯಗಳು ನೋಡಲು ಸಿಗುತ್ತದೆ” ಎಂದಿದ್ದಾರೆ.


“ಬಡ್ಡೀಸ್’ ಸಿನಿಮಾ ನನ್ನ ಹಾಗೂ ಕಿರಣ್ ರಾಜ್ ಅವರ ಜೋಡಿಯಲ್ಲಿ ಬರುತ್ತಿರುವ ಎರಡನೇ ಸಿನಿಮಾ ಆಗಿರಲಿದೆ ‘ರಾನಿ’. ಇದೊಂದು ಆಕ್ಷನ್ ಸಿನಿಮಾ. ಕಿರಣ್ ರಾಜ್ ಅವರು ಸ್ಕೈ ಡೈವಿಂಗ್ ಬಗ್ಗೆ ತಿಳಿಸಿದಾಗ ನನಗೆ ಭಯ ಆಗಿತ್ತು. ಅವರು ಅಲ್ಲಿ ಸ್ಕೈ ಡೈವಿಂಗ್ ಮಾಡುತ್ತಿದ್ದರೆ, ನಾನಿಲ್ಲಿ ದೇವರ ಬಳಿ ಪ್ರಾರ್ಥಿಸುತ್ತಿದ್ದೆ. ಅವರು ಸಂಪೂರ್ಣ ವಿಡಿಯೋ ಕಳುಹಿಸಿದ ಮೇಲೆಯೇ ನನಗೆ ಸಮಾಧಾನ ಆದದ್ದು. ಸದ್ಯದಲ್ಲೇ ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇವೆ” ಎಂದಿದ್ದಾರೆ. “ಮೂಲತಃ ಉದ್ಯಮಿಗಳಾದ ನಮಗೆ ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ರಾಜಕುಮಾರ್, ವಿಷ್ಣುವರ್ಧನ್ ಅವರುಗಳ ಚಸಿನಿಮಾ ನೋಡಿಕೊಂಡು ಬೆಳೆದ ನಮಗೆ ಗುರುತೇಜ್ ಶೆಟ್ಟಿಯವರ ಈ ಕಥೆ ತುಂಬಾ ಇಷ್ಟವಾಯಿತು. ಅದೇ ಕಾರಣಕ್ಕೆ ಬಂಡವಾಳ ಹೂಡಲು ಒಪ್ಪಿಕೊಂಡೆವು ” ಎನ್ನುತ್ತಾರೆ ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ.

