ಕನ್ನಡತಿ ಸಿನಿಮಾ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಪ್ರತಿಭಾನ್ವಿತ ನಟ ಕಿರಣ್ ರಾಜ್. ಕಿರುತೆರೆಯ ಜೊತೆಜೊತೆಯಲ್ಲೇ ಹಿರಿತೆರೆಯ ಮೇಲೂ ನಟಿಸಿರುವ ಕಿರಣ್ ರಾಜ್ ಅವರು ತಮ್ಮ ಸಿನಿಪಯಣಕ್ಕೆ ಉತ್ತಮ ಆರಂಭವನ್ನ ಕಂಡಿದ್ದಾರೆ. ‘ಕನ್ನಡತಿ’ ಧಾರವಾಹಿ ಇದೀಗ ಅಂತ್ಯ ಕಂಡಿದೆ. ಕಿರಣ್ ರಾಜ್ ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ರಾನಿ’ಯ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸದ್ಯ ಈ ಪಕ್ಕ ಆಕ್ಷನ್ ಸಿನಿಮಾದ ಟೀಸರ್ ಅನ್ನು ಜುಲೈ 5ರಂದು ಕಿರಣ್ ರಾಜ್ ಅವರ ಜನ್ಮದಿನದ ಸಲುವಾಗಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.


ತನ್ನ ಶೀರ್ಷಿಕೆಯಿಂದಲೇ ಬಾರೀ ಸದ್ದು ಮಾಡಿದ್ದ ಸಿನಿಮಾ ‘ರಾನಿ’. ಕೆಲ ತಿಂಗಳ ಹಿಂದೆ ನಾಯಕ ಕಿರಣ್ ರಾಜ್ ಅವರು ತಂಡದ ಜೊತೆಗೆ ದುಬೈ ಗೆ ತೆರಳಿ ಸುಮಾರು ಹದಿಮೂರು ಸಾವಿರ ಅದಿಗಳ ಎತ್ತರದಿಂದ ಕೆಳಗೆ ಜಿಗಿದು ಸಿನಿಮಾದ ಟೈಟಲ್ ಅನ್ನು ಲೋಕಾರ್ಪಣೆ ಮಾಡಿದ್ದರು. ‘ರಾನಿ’ ಒಂದು ಪಕ್ಕ ಆಕ್ಷನ್ ಸಿನಿಮಾವಾದರೂ ಕೂಡ ಕೌಟುಂಬಿಕ ಪ್ರೇಕ್ಷಕರು ಆರಾಮಾಗಿ ಕೂತು ನೋಡಬಹುದಾದ ಸಿನಿಮಾ ಇದಂತೆ. ಗುರುತೇಜ್ ಶೆಟ್ಟಿ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ನಿರ್ಮಾಣದ ಮೊದಲ ಸಿನಿಮಾ ಇದಾಗಿದೆ. ಕಿರಣ್ ರಾಜ್ ಅವರಿಗೆ ನಾಯಕಿಯರಾಗಿ ಸಮೀಕ್ಷಾ, ಅಪೂರ್ವ ಮತ್ತು ರಾಧ್ಯ ನಟಿಸುತ್ತಿದ್ದು, ಪ್ರಮುಖ ಪಾತ್ರಗಳಲ್ಲಿ ರವಿ ಶಂಕರ್, ಮಂಡ್ಯ ರಮೇಶ್, ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್ ಸೇರಿದಂತೆ ಹಲವು ಗಣ್ಯ ಕಲಾವಿದರ ದಂಡೇ ಸಿನಿಮಾದಲ್ಲಿರಲಿದೆ.

