ಸದ್ಯ ಎಲ್ಲೆಡೆ ಅಪಾರ ನಿರೀಕ್ಷೆಗಳನ್ನ ಹೊತ್ತು, ಯಶಸ್ವಿಯಾಗಿ ನಡೆಯುತ್ತಿದೆ ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್, ಐಪಿಎಲ್. ಈ ಅತೀಸ್ಪರ್ಧಾತ್ಮಕ ಕ್ರೀಡಾಕೂಟದಲ್ಲಿ ನಮ್ಮ ಬೆಂಗಳೂರಿನ ತಂಡವಾದ,’ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಸದ್ಯ ಯಶಸ್ವಿ ಮುನ್ನಡೆ ಕಾಣುತ್ತಿದೆ. ಈವರೆಗೆ ನಡೆದ 6 ಪಂದ್ಯಗಳಲ್ಲಿ ಮೂರು ಸೋಲು, ಮೂರು ಜಯ ಕಂಡಿದ್ದ, 6 ಅಂಕಗಳ ಜೊತೆ ಇಂದು ತಮ್ಮ ಏಳನೇ ಪಂದ್ಯಕ್ಕಾಗಿ ಬಲಿಷ್ಠ ರಾಜಸ್ಥಾನ್ ರಾಯಲ್ ತಂಡವನ್ನ ಎದುರಿಸಲು, ತಮ್ಮ ಪ್ರಸಿದ್ಧ ಹಸಿರು ಬಣ್ಣದ ಜರ್ಸಿ ತೊಟ್ಟು, ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿತ್ತು. ರಾಜಸ್ತಾನ್ ರಾಯಲ್ ಆಡಿದ್ದ ಆರು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು, ಬರೋಬ್ಬರಿ 8 ಅಂಕಗಳ ಜೊತೆಗೆ ಅಗ್ರಸ್ಥಾನಿಯಾಗಿತ್ತು. ಅತೀವ ನಿರೀಕ್ಷೆ ಹುಟ್ಟಸಿದ್ದ ಈ ಚಿತ್ರ ಇದೀಗ ನಮ್ಮ RCB ತಂಡದ ರೋಚಕ ಜಯದ ಜೊತೆ ರೋಚಕವಾದ ಕೊನೆಕಂಡಿದೆ.


ಈ ಸಾಲಿನ ತಂಡದ ನಾಯಕ ಫಾಫ್ ಡು ಪ್ಲೇಸಿಸ್ ಕೊಂಚ ಅನಾರೋಗ್ಯದ ಕಾರಣ, ಸಂಪೂರ್ಣ ಆಟಗಾರನಾಗಿ ಆಡಲು ಸಾಧ್ಯವಾಗದ ಕಾರಣಕ್ಕೆ, ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡದ ಮುಂದಾಳತ್ವದ ಜವಾಬ್ದಾರಿ ಪಡೆದಿದ್ದರು. ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಬೌಲಿಂಗ್ ಆಯ್ಕೆ ಮಾಡಿದರು. ಅಂತೆಯೇ RCB ತಂಡದ ಪರ ಆರಂಭಿಕ ಆಟಗಾರರಾಗಿ ವಿರಾಟ್ ಕೊಹ್ಲಿ ಹಾಗು ಫಾಫ್ ಕಣಕ್ಕಿಳಿದರು. ಮೊದಲ ಓವರ್ ನ ಮೊದಲ ಎಸೆತದಲ್ಲೇ ಟ್ರೆಂಟ್ ಬೌಲ್ಟ್ ಗೆ ಕೊಹ್ಲಿ ವಿಕೆಟ್ ಒಪ್ಪಿಸುವ ಮೂಲಕ ತಂಡಕ್ಕೆ ಬಾರೀ ದೊಡ್ಡ ಆಘಾತ ನೀಡಿದರು. ನಂತರ ಬಂದ ಶಭಾಜ್ ಅಹ್ಮದ್ ಕೂಡ ಅಂತದ್ದೇನು ಪರಿಣಾಮ ಬೀರಲಿಲ್ಲ. ಇನ್ನೇನು ತಂಡ ಹಳಿತಪ್ಪಿತು ಎನ್ನುವಾಗ ಫಾಫ್ ಗೆ ಜೊತೆಯಾದದ್ದು ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್ವೆಲ್. ಇವರಿಬ್ಬರೂ ಸ್ಫೋಟಕ ಬ್ಯಾಟಿಂಗ್ ನಿಂದ 127ರನ್ ಗಳ ಜೊತೆಯಾಟ ಆಡಿ ತಂಡಕ್ಕೆ ಆಧಾರ ಸ್ಥಂಭವೆಂದು ಮತ್ತೊಮ್ಮೆ ನಿರೂಪಿಸಿದರು. ಅಂತಿಮವಾಗಿ ಫಾಫ್ ಅವರ 39ಎಸೆತಗಳ 62, ಮ್ಯಾಕ್ಸ್ವೆಲ್ ಅವರ ಸ್ಫೋಟಕ 44 ಎಸೆತಗಳ 77 ರನ್ ಹಾಗು ದಿನೇಶ್ ಕಾರ್ತಿಕ್ ಅವರ ಚುರುಕಿನ 16ರನ್ ಗಳ ನೆರವಿನಿಂದ 189 ರನ್ ಪೇರಿಸಿದ RCB, ಬಲಿಷ್ಠ ಬ್ಯಾಟಿಂಗ್ ಗೆ ಹೆಸರಾದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 190ರನ್ ಗುರಿ ನೀಡಿದರು.


ಈ ಗುರಿ ಬೆನ್ನಟ್ಟಿ ಬ್ಯಾಟಿಂಗ್ ಇಳಿದ ರಾಜಸ್ತಾನ್ ರಾಯಲ್ಸ್ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗು ಜೋಸ್ ಬಟ್ಲರ್ ಅವರ ಜೋಡಿ ಆರಂಭಕ್ಕೂ ಮುನ್ನವೇ ಆಘಾತ ಕಂಡಿತು. ಸಿರಾಜ್ ಅವರ ಮೊದಲನೇ ಓವರ್ ನಲ್ಲೆ ಬಟ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ RCB ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಜೊತೆಯಾದ ದೇವದತ್ ಪಡಿಕಲ್ ಹಾಗು ಜೈಸ್ವಾಲ್ ಬರೋಬ್ಬರಿ 98ರನ್ ಗಳ ಜೊತೆಯಾಟ ಆಡಿದರು. ಆದರೆ ವಿಲ್ಲಿ ಅವರ ಎಸೆತಕ್ಕೆ ಪಡಿಕಲ್ ಔಟ್ ಆಗುವ ಮೂಲಕ RCB ತಂಡದ ಭರವಸೆಗಳು ಮರಳಿ ಚಿಗುರಿದವು. ನಂತರ RCB ತಂಡದ ಹತೋಟಿಗೆ ಬಂದಂತಹ ಪಂದ್ಯ ಕೊನೆಯ ಓವರ್ ನಲ್ಲಿ ರಾಜಸ್ತಾನ್ ತಂಡಕ್ಕೆ ಗೆಲುವಿಗಾಗಿ 20ರನ್ ಗಳು ಬೇಕಾಗುವ ಹಂತಕ್ಕೆ ಬಂದು ನಿಂತಿತು. ಹರ್ಷಲ್ ಪಟೇಲ್ ಅವರ ಪ್ರಬುದ್ಧ ಕೊನೆಯ ಓವರ್ ನ ಕಾರಣದಿಂದಾಗಿ, ರಾಜಸ್ಥಾನ್ ಆಟಗಾರರಿಗೆ ಈ ಗುರಿ ತಲುಪಲಾಗಲಿಲ್ಲ. ಅಂತಿಮಾವಾಗಿ RCB 7 ರನ್ ಗಳಿಂದ ಭರ್ಜರಿ ಜಯ ಸಾಧಿಸಿತು.
ಉತ್ತಮ ಗುರಿಯೇನೋ ನೀಡಿದ್ದ RCB ತಂಡಕ್ಕೆ, ಬಲಿಷ್ಠ ಬ್ಯಾಟಿಂಗ್ ಹೊಂದಿರುವ ರಾಜಸ್ಥಾನ್ ತಂಡವನ್ನ ಕಟ್ಟಿ ಹಾಕಲು ನೆರವಾದದ್ದು, ಸಿರಾಜ್ ಹಾಗು ಹರ್ಷಲ್ ಪಟೇಲ್ ಅವರ ಪ್ರಭುದ್ಧ ಬೌಲಿಂಗ್ ಪ್ರದರ್ಶನ. ಜೊತೆಗೆ ಪ್ರಭುದೇಸಾಯಿ ಅವರ ಒಂದೊಳ್ಳೆ ಡೈರೆಕ್ಟ್ ಹಿಟ್ ಕಾರಣದಿಂದಾಗಿ ರನ್ ಔಟ್ ಮೂಲಕ, ಸ್ಫೋಟಕ ದಾಂಡಿಗ ಹೆಟ್ಮೇಯರ್ ಅವರನ್ನ ಔಟ್ ಮಾಡಿದ್ದು ಕೂಡ ಪಂದ್ಯದ ಇನ್ನೊಂದು ಪ್ರಮುಖ ತಿರುವಾಯಿತು. ಒಟ್ಟಿನಲ್ಲಿ RCB ತಮ್ಮ ಏಳನೇ ಪಂದ್ಯವನ್ನ ಗೆಲ್ಲುವ ಮೂಲಕ, ಒಟ್ಟು 8 ಅಂಕಗಳನ್ನು ಗಳಿಸಿ, ಟೇಬಲ್ ನಲ್ಲಿ ಐದನೇ ಸ್ಥಾನಕ್ಕೆರಿದ್ದಾರೆ. ಅಲ್ಲದೇ ಅತೀ ಹೆಚ್ಚು ವಿಕೆಟ್ ಗಳಿಸಿದ್ದಕ್ಕಾಗಿ, ಒಟ್ಟು 13 ವಿಕೆಟ್ ಪಡೆದಿದ್ದ RCB ಪರ ಪ್ರಮುಖ ಎಸೆಟಗಾರ ಮೊಹಮ್ಮದ್ ಸಿರಾಜ್ ಅವರು ಪರ್ಪಲ್ ಕ್ಯಾಪ್ ಪಡೆದರೆ, ಅತೀ ಹೆಚ್ಚು ರನ್ ಗಳನ್ನೂ ಗಳಿಸಿದ್ದ ನಾಯಕ ಫಾಫ್ ಒಟ್ಟು 405 ರನ್ ಗಳನ್ನ ಗಳಿಸಿ ಆರೆಂಜ್ ಕ್ಯಾಪ್ ಕ್ಯಾಪ್ ಕೂಡ ಪಡೆದಿದ್ದು, ಸದ್ಯ ಆರೆಂಜ್ ಕ್ಯಾಪ್ ಹಾಗು ಪರ್ಪಲ್ ಕ್ಯಾಪ್ ಎರಡೂ ನಮ್ಮ RCB ಆಟಗಾರರ ಜೊತೆಯಲ್ಲೇ ಇರುವ ಸಂತಸದಲ್ಲಿದ್ದಾರೆ ಅಭಿಮಾನಿಗಳು. ಹಸಿರು ಬಣ್ಣದ ಜರ್ಸಿ ಲಕ್ ತಂದುಕೊಟ್ಟಿದೆ ಎಂದು ನಂಬುವವರು ಇನ್ನೊಂದಿಷ್ಟು ಅಭಿಮಾನಿಗಳು. ಒಟ್ಟಿನಲ್ಲಿ RCB ತಂಡ ಹೊಸ ಹುಮ್ಮಸ್ಸಿನೊಂದಿಗೆ ಮುನ್ನುಗ್ಗುತ್ತಿದ್ದಾರೆ. ಇವರ ಮುಂದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿಯಲ್ಲೇ ಕೊಲ್ಕತ್ತಾ ತಂಡದ ಎದುರು ಇದೇ ಏಪ್ರಿಲ್ 26ರಂದು ನಡೆಯಲಿದೆ.



