ಯಶಸ್ವಿಯಾಗಿ ನಡೆಯುತ್ತಿರುವ ಐಪಿಎಲ್ ಪಂದ್ಯಾಟದಲ್ಲಿ ನಮ್ಮ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಸೋಲು ಗೆಲುವು ಕಾಣುತ್ತಾ ಮುಂದೆ ಸಾಗುತ್ತಿದೆ. ಅಪಾರ ಅಭಿಮಾನಿಗಳ ಅಗಾಧ ಅಭಿಮಾನದ ಜೊತೆಗೆ ಮುನ್ನುಗ್ಗುತ್ತಿರುವ ನಮ್ಮ RCB ತಂಡಕ್ಕೆ ಇಂದು ಬಲಿಷ್ಠ ‘ಪಂಜಾಬ್ ಕಿಂಗ್ಸ್’ ತಂಡದ ವಿರುದ್ಧ, ಪಂಜಾಬ್ ನ ಮೊಹಾಲಿಯಲ್ಲಿ ಪಂದ್ಯ ಸಜ್ಜಾಗಿತ್ತು. ಈವರೆಗೆ ನಡೆದ ಐದು ಪಂದ್ಯಗಳಲ್ಲಿ ನಾಲ್ಕನ್ನು ತವರು ಅಂಕಣವಾದ ಬೆಂಗಳೂರಿನ ಚಿನ್ನಸ್ವಾಮಿಯಲ್ಲೇ ಆಡಿದ್ದಂತಹ RCB ಈ ಸಾಲಿನ ಐಪಿಎಲ್ ನಲ್ಲಿ ಮೊದಲ ಬಾರಿಗೆ ಪಂಜಾಬ್ ನಲ್ಲಿ ಇಂದು ಆಡಿತ್ತು. ಸದ್ಯ ಈ ಪಂದ್ಯವನ್ನ ಭರ್ಜರಿಯಾಗಿ ಜಯಿಸಿ, ಪಂಜಾಬ್ ತಂಡವನ್ನ ತವರಿನಲ್ಲೇ ಮಣಿಸಿ ಬಂದಿದ್ದಾರೆ ಕೊಹ್ಲಿ ಹುಡುಗರು.
ಅಂದಹಾಗೆ ಇಂದು RCB ತಂಡದ ನಾಯಕತ್ವ ವಹಿಸಿದ್ದು, ವಿರಾಟ್ ಕೊಹ್ಲಿ. ಟಾಸ್ ನೋಡಲು ಕೂಟ ಅಭಿಮಾನಿಗಳಿಗೆ ಆರಂಭವೇ ಆನಂದದಾಯಕವಾಗಿತ್ತು. ಕೊಹ್ಲಿ ಅವರು ನಾಯಕತ್ವದಿಂದ ಕೆಳಗಿಳಿದಿದ್ದ ಕಾರಣ ಫಾಫ್ ಡು ಪ್ಲೇಸಿಸ್ ತಂಡದ ನಾಯಕರಾಗಿ ಮುನ್ನಡೆಸುತ್ತಿದ್ದರು. ಆದರೆ ಇಂದು ಹಿಂದಿನ ಪಂದ್ಯದಲ್ಲಿ ನೋವು ಅನುಭವಿಸಿದ್ದ ಫಾಫ್, ಫೀಲ್ಡಿಂಗ್ ಮಾಡಲು ಲಭ್ಯವಾಗದೆ, ‘ಇಂಪ್ಯಾಕ್ಟ್ ಆಟಗಾರ’ನಾಗಿ ಆಡಲಿದ್ದಾರೆ ಎಂದಾಗುತ್ತದೆ. ಆ ಕಾರಣಕ್ಕೆ ಬದಲಿ ನಾಯಕನಾಗಿ, ಕೊಹ್ಲಿ ಅವರು ಮರಳಿ RCB ತಂಡದ ಪರವಾಗಿ ಟಾಸ್ ಗೆ ಬರುತ್ತಾರೆ. ಅತ್ತ ಪಂಜಾಬ್ ತಂಡದ ಪರವಾಗಿಯೂ ನಾಯಕ ಶಿಖರ್ ಧವನ್ ಕೂಡ ಲಭ್ಯವಿರಲಿಲ್ಲ. ಟಾಸ್ ಗೆದ್ದ ಪಂಜಾಬ್ ತಂಡದ, ಬದಲಿ ನಾಯಕ ಸ್ಯಾಮ್ ಕರನ್, ಬೌಲಿಂಗ್ ಆಯ್ಕೆ ಮಾಡುತ್ತಾರೆ. RCB ತಂಡದ ಪರ ನಾಯಕ ಕೊಹ್ಲಿ ಹಾಗು ‘ಇಂಪ್ಯಾಕ್ಟ್ ಆಟಗಾರ’ನಾಗಿ ಫಾಫ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುತ್ತಾರೆ.
ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಕೊಹ್ಲಿ – ಫಾಫ್ ಜೋಡಿ ತಂಡಕ್ಕೆ ಉತ್ತಮ ಆರಂಭವನ್ನ ನೀಡುತ್ತಾರೆ. ಫಾಫ್ ತಮ್ಮ ಬಿರುಸಿನ ಶತಕದ ಜೊತೆಗೆ ಕೇವಲ 56 ಎಸೆತಗಳಲ್ಲಿ ಬರೋಬ್ಬರಿ 84ರನ್ ಗಳಿಸಿದರೆ, ಕೊಹ್ಲಿ ತಾಳ್ಮೆ ಮೆರೆದು 47ಎಸೆತಗಳ 59ರನ್ ಗಳಿಸಿ ಭದ್ರ ಬುನಾದಿ ಹಾಕುತ್ತಾರೆ. ಒಟ್ಟು 16 ಓವರ್ ಗಳ ವರೆಗೆ ಯಾವುದೇ ವಿಕೆಟ್ ನೀಡದೆ ಕೊಹ್ಲಿ – ಫಾಫ್ ಜೋಡಿ ಬರೋಬ್ಬರಿ 137ರನ್ ಗಳ ಜೊತೆಯಾಟ ನೀಡಿದರು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ RCB ತಂಡ 20 ಓವರ್ ಗಳಲ್ಲಿ 4ವಿಕೆಟ್ ನಷ್ಟಕ್ಕೆ 174ರನ್ ಗಳಿಸಿ, ಪಂಜಾಬ್ ತಂಡಕ್ಕೆ 175ರನ್ ಗಳ ಗುರಿ ನೀಡುತ್ತಾರೆ.
ಈ ಗುರಿ ಬೆನ್ನಟ್ಟಿ ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರರಾದ ಪ್ರಭಸಿಮ್ರಾನ್ ಹಾಗು ಅಥರ್ವ ತೈದೆ ಅವರ ಜೋಡಿಯನ್ನ, ಮೊಹಮ್ಮದ್ ಸಿರಾಜ್ ಅವರು ಮೊದಲ ಓವರ್ ನಲ್ಲಿಯೇ ಔಟ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ನಂತರ ಬೀಳಲು ಆರಂಭವಾದ ಪಂಜಾಬ್ ತಂಡದ ವಿಕೆಟ್ ಗಳು ನಿಲ್ಲುವುದೇ ಇಲ್ಲ. ಮೊಹಮ್ಮದ್ ಸಿರಾಜ್ ಹಾಗಿ ವನಿಂದು ಹಸರಂಗ ಡೈರೆಕ್ಟ್ ಹಿಟ್ ಮಾಡುವ ಮೂಲಕ ಎರಡು ರನ್ ಔಟ್ ಗಳಿಗೂ ಕಾರಣರಾದರು. ಇನ್ನು ಪಂಜಾಬ್ ತಂಡದ ಪರ ಆರಂಭಿಕ ಪ್ರಭಸಿಮ್ರಾನ್ 46ರನ್ ಹಾಗು ಜಿತೇಶ್ ಶರ್ಮ 41ರನ್ ಹೊರತಾಗಿ ಉಳಿದವರು ಎಲ್ಲರೂ RCB ತಂಡದ ಅದ್ಭುತ ಬೌಲಿಂಗ್ ಹಾಗು ಫೀಲ್ಡಿಂಗ್ ಪ್ರದರ್ಶನಕ್ಕೆ ಸೋತುಹೋದರು. ಅಂತಿಮವಾಗಿ ನಮ್ಮ RCB ತಂಡ ಪಂಜಾಬ್ ತಂಡದ ಹತ್ತು ವಿಕೆಟ್ ಗಳನ್ನೂ ಉದುರಿಸಿ 24ರನ್ ಗಳ ಭರ್ಜರಿ ಜಯ ಸಾಧಿಸಿದರು.
ನಮ್ಮ ಬೆಂಗಳೂರು ತಂಡದ ಪರವಾಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ಬೆಂಕಿ ಉಗುಳುತ್ತ 4 ವಿಕೆಟ್ ಪಡೆದರೆ, ಹಸರಂಗ ಎರಡು ವಿಕೆಟ್ ಹಾಗು ಪಾರ್ನೆಲ್ ಹಾಗು ಹರ್ಷಲ್ ತಲಾ ಒಂದು ವಿಕೆಟ್ ಪಡೆದು RCB ತಂಡವನ್ನ ಜಯದ ಕಡೆಗೆ ಸಾಗಿಸಿದರು. ಒಟ್ಟಿನಲ್ಲಿ ಇಂದು RCB ತಂಡ ಬ್ಯಾಟಿಂಗ್, ಬೌಲಿಂಗ್ ಹಾಗು ಫೀಲ್ಡಿಂಗ್ ಸೇರಿ ಎಲ್ಲಾ ವಿಭಾಗದಲ್ಲೂ ಅತ್ಯದ್ಭುತ ಪ್ರದರ್ಶನ ತೋರಿ ಪಂಜಾಬ್ ನ ತವರು ಕ್ರೀಡಾಂಗಣ ಮೊಹಾಲಿಯಲ್ಲೇ ಪಂಜಾಬ್ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿದರು.

