HomeSportsರೋಚಕ ಪಂದ್ಯದ ಕೊನೆಯ ಹಂತದಲ್ಲಿ ವಿಜಯ ವಂಚಿತರಾದ ನಮ್ಮ RCB! ಅದೇನ್ ಮ್ಯಾಚ್ ಗುರು!!

ರೋಚಕ ಪಂದ್ಯದ ಕೊನೆಯ ಹಂತದಲ್ಲಿ ವಿಜಯ ವಂಚಿತರಾದ ನಮ್ಮ RCB! ಅದೇನ್ ಮ್ಯಾಚ್ ಗುರು!!

RCB ತಂಡದ ಪಂದ್ಯಗಳು ಅಂದ್ರೇನೆ ಅಲ್ಲೊಂಚೂರು ಮಸಾಲ ಜಾಸ್ತಿನೇ ಇರತ್ತೆ. ಅಂತದ್ದೇ ಇನ್ನೊಂದು ರೋಮಾಂಚಕ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು. ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆ ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜಯಂಟ್ಸ್ ತಂಡದ ವಿರುದ್ಧ ಕಣಕ್ಕಿಳಿದಿದ್ದರು. ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳ ಮುಂದೆ, ಕಿವಿಗಡಚಿಕ್ಕುವ ಅವರ “RCB! RCB!” ಎಂಬ ಕೂಗಿನ ಮಧ್ಯೆ, ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ RCB ತಂಡ ಬೌಲಿಂಗ್ ನಲ್ಲಿ ಕೊಂಚ ಎಡವಿತಾದರೂ ಕೊನೆಯ ಹಂತದವರೆಗೆ ಪಂದ್ಯವನ್ನ ತೆಗೆದುಕೊಂಡು ಹೋಗಿ, ಕೂದಲೆಳೆಯ ಅಂತರದಲ್ಲಿ, ಕೇವಲ ಒಂದು ವಿಕೆಟ್ ನ ಸೋಲು ಕಂಡರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆ ಎಲ್ ರಾಹುಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ಬೆಂಗಳೂರು ತಂಡದ ಪರ ಆರಂಭಿಕ ಆಟಗಾರರಾಗಿ ನಾಯಕ ಫಾಫ್ ಡು ಪ್ಲೇಸಿಸ್ ಹಾಗು ಕಿಂಗ್ ಕೊಹ್ಲಿ ಅಂಕಣಕ್ಕೆ ಬಂದರು. ನಿಧಾನವಾಗಿಯೇ ಆರಂಭವಾದ ಆಟವನ್ನ ಕೊಹ್ಲಿಯವರು ತಮ್ಮ ಪ್ರಭುದ್ಧ ಹಾಗು ಸಮಾಯೋಚಿತ ಬ್ಯಾಟಿಂಗ್ ನಿಂದಾಗಿ ವೇಗ ಹೆಚ್ಚಿಸಿದರು. ಮೊದಲ ವಿಕೆಟ್ ಗೆ ಕೊಹ್ಲಿ-ಫಾಫ್ ಜೋಡಿ 96ರನ್ ಕಲೆ ಹಾಕಿದರು. ಆಕರ್ಷಕ ಅರ್ಧ ಶತಕದ ನಂತರ 61ರನ್ ಗಳನ್ನ ದಾಖಲಿಸಿ ಕಿಂಗ್ ಕೊಹ್ಲಿ ಔಟ್ ಆದರು. ನಂತರ ಬ್ಯಾಟಿಂಗ್ ಗೆ ಬಂದದ್ದು ಈ ಸಾಲಿನ ಆಪದ್ಭಾಂದವ ಎನ್ನಬಹುದಾದ ಗ್ಲೆನ್ ಮ್ಯಾಕ್ಸ್ವೆಲ್. ಮಂದಗತಿಯಲ್ಲಿ ಆರಂಭಿಸಿ, ನಂತರ ಫಾಫ್ ಹಾಗು ಮ್ಯಾಕ್ಸ್ವೆಲ್ ಚಿನ್ನಸ್ವಾಮಿಯಲ್ಲಿ ಸಿಕ್ಸರ್ ಗಳ ಮಳೆ ಸುರಿಸಿದರು. ಎರಡನೇ ವಿಕೆಟ್ ಗೆ ಬರೋಬ್ಬರಿ 115ರನ್ ಗಳನ್ನ ಈ ಜೋಡಿ ಪೇರಿಸಿ, ತಂಡದ ಮೊತ್ತವನ್ನ 212ಕ್ಕೆ ಏರಿಸಿದರು.

ಈ ಬೃಹತ್ ಮೊತ್ತವನ್ನ ಬೆನ್ನಟ್ಟಿ ಬ್ಯಾಟಿಂಗ್ ಇಳಿದ ಲಕ್ನೋ ತಂಡದ ನಾಯಕ ಕೆ ಎಲ್ ರಾಹುಲ್ ಹಾಗು ತಂಡದ ಈ ಸಾಲಿನ ಯಶಸ್ವಿ ದಾಂಡಿಗ ಕೈಲ್ ಮೇಯರ್ಸ್ ಅವರ ಜೋಡಿಯನ್ನ ಮೊದಲನೇ ಓವರ್ ನಲ್ಲೆ ಮೊಹಮ್ಮದ್ ಸಿರಾಜ್ ತಮ್ಮ ಅದ್ಭುತ ಬೌಲಿಂಗ್ ನ ಮೂಲಕ ಮೇಯರ್ಸ್ ಅವರನ್ನ ಬೌಲ್ಡ್ ಮಾಡುವ ಮೂಲಕ ಮುರಿದರು. ನಂತರ ಬಂದಂತಹ ದೀಪಕ್ ಹೂಡ ಹಾಗು ಕೃನಾಲ್ ಪಾಂಡ್ಯ ಕೂಡ ಹೇಳಿಕೊಳ್ಳುವಂತಹ ತೊಂದರೆ ಕೊಡಲಿಲ್ಲ. ಇವರಿಬ್ಬರನ್ನು RCB ತಂಡದ ಪರ ಮೊದಲ ಪಂದ್ಯದಲ್ಲಿ ಆಡುತ್ತಿರುವಂತಹ ವೇಯ್ನ್ ಪಾರ್ನೆಲ್ ಎರಡು ಎಸೆತಗಳಲ್ಲಿ ವಾಪಸು ಕಳಿಸಿದರು. ನಂತರ ಬ್ಯಾಟಿಂಗ್ ಬಂದ ಸ್ಟೋಯ್ನೀಸ್ ಧೃಡವಾಗಿ ನಿಂತು, 30 ಎಸೆತಗಳಲ್ಲಿ ಬರೋಬ್ಬರಿ 65ರನ್ ಗಳಿಸಿ ಸೋಲು ಕಾಣುತ್ತಿದ್ದ ಲಕ್ನೋ ತಂಡಕ್ಕೆ ಬೆಳಕು ತೋರಿದರು. ಒಟ್ಟು ನಾಲ್ಕನೇ ವಿಕೆಟ್ ಗೆ 76ರನ್ ಪೇರಿಸಿ ಸ್ಟೋಯ್ನೀಸ್ ಔಟ್ ಆದರೆ, ಅವರ ಹಿಂದೆಯೇ ಮಂದಗತಿಯ ಬ್ಯಾಟಿಂಗ್ ಆಡುತ್ತಿದ್ದ ನಾಯಕ ಕೆ ಎಲ್ ರಾಹುಲ್ ಕೂಡ ಕೊಹ್ಲಿ ಅವರಿಗೆ ಕ್ಯಾಚ್ ಕೊಟ್ಟು ಔಟ್ ಆದರು. 105ರನ್ ಗಳಿಗೆ ಲಕ್ನೋ ತಂಡದ ಐದು ವಿಕೆಟ್ ಗಳನ್ನ ತೆಗೆದು, RCB ತಂಡ ಹಾಗು ಅಭಿಮಾನಿಗಳು ಗೆಲುವು ನಮ್ಮದೇ ಎಂಬ ಸಂತಸದಲ್ಲಿ ಇದ್ದಾಗ ಬಂದವರೇ ನಿಕೋಲಾಸ್ ಪೂರನ್.

ಆರನೇ ವಿಕೆಟ್ ಗೆ ಜೊತೆಯಾಗಿ ನಿಂತ ನಿಕೋಲಾಸ್ ಪೂರನ್ ಹಾಗು ಆಯುಷ್ ಬಡೋನಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಎಸೆತಗಾರಿಕೆಗೆ ಬಂದ ಎಲ್ಲಾ ಬೌಲರ್ ಗಳಿಗೂ ಪೂರನ್ ಮಣ್ಣು ಮುಕ್ಕಿಸಿದರು. ಕೇವಲ 14ಎಸೆತಗಳಲ್ಲಿ ಅರ್ಧಶತಕ ದಾಖಲಿಸಿ, ಈ ಸಾಲಿನ ಐಪಿಎಲ್ ನ ವೇಗದ ಅರ್ಧಶತಕ ಎಂಬ ಬಿರುದು ಪಡೆದ ಇವರು RCB ತಂಡದಿಂದ ಗೆಲುವನ್ನ ದೂರ ಕೊಂಡೋಯ್ದರು. ಕೊನೆಗೆ ಮೊಹಮ್ಮದ್ ಸಿರಾಜ್ ಅವರ ಓವರ್ ನಲ್ಲಿ ಕ್ಯಾಚ್ ನೀಡುವ ಮೂಲಕ ಔಟ್ ಆದರು. ಕೊನೆಯ ಹತ್ತು ಓವರ್ ಗಳಿಗೆ ಗೆಲುವಿಗಾಗಿ 122ರನ್ ದಾಖಲಿಸಬೇಕಿದ್ದ ಲಕ್ನೋ ತಂಡಕ್ಕೆ ಅಂತಿಮವಾಗಿ ಕೊನೆಯ 18ಎಸೆತಗಳಲ್ಲಿ ಬೇಕಿದ್ದದ್ದು ಕೇವಲ 24ರನ್. ಅನಾಯಾಸವಾಗಿ ತಮ್ಮ ತವರಿನ ಅಂಕಣದಲ್ಲಿ ಗೆದ್ದು ಬೀಗಬಹುದು ಎಂದುಕೊಂಡಿದ್ದ RCB ತಂಡದ ಲೆಕ್ಕಾಚಾರಗಳೆಲ್ಲ ತಲೆಕೆಲಗಾಗಿತ್ತು.

18ನೇ ಓವರ್ ಎಸೆಟಗಾರಿಕೆಗೆ ಬಂದ ಹರ್ಷಲ್ 9ರನ್ ಗಳನ್ನಷ್ಟೇ ನೀಡಿ ಭರವಸೆ ಮೂಡಿಸಿದರು. ನಂತರ ಬಂದ ವೇಯ್ನ್ ಪಾರ್ನೆಲ್ ಹತ್ತು ರನ್ ಗಳನ್ನ ನೀಡಿದರಾದರೂ ಆಯುಷ್ ಬಡೋನಿ ಈ ಓವರ್ ನಲ್ಲೆ ಹಿಟ್ ವಿಕೆಟ್ ಆದರು. ಕೊನೆಯದಾಗಿ ಹರ್ಷಲ್ ಪಟೇಲ್ ಅವರ ಕೊನೆಯ ಓವರ್ ಗೆ ಲಕ್ನೋ ತಂಡಕ್ಕೆ ಬೇಕಿದ್ದದ್ದು 5ರನ್ ಗಳು, RCB ತಂಡಕ್ಕೆ ಬೇಕಿದ್ದದ್ದು 3ವಿಕೆಟ್. ಮೊದಲ ಬಾಲ್ ಅನ್ನು ಉನಾದ್ಕತ್ ಸಿಂಗಲ್ ಮಾಡಿದರೆ ಎರಡನೇ ಎಸೆತದಲ್ಲಿ ಹರ್ಷಲ್ ವುಡ್ ಅವರನ್ನ ಬೌಲ್ಡ್ ಮಾಡಿದರು. ಮೂರನೇ ಎಸೆತದಲ್ಲಿ ಬಿಶ್ನೋಯ್ ಎರಡು ರನ್ ದಾಖಲಿಸಿ, ನಾಲ್ಕನೇ ಎಸೆಟದಲ್ಲಿ ಒಂದು ರನ್ ಗಳಿಸಿ ಸ್ಕೋರ್ ಗಳನ್ನು ಸಮವಾಗಿಸಿದರು. ಕೊನೆಯ ಎರಡು ಎಸೆತಕ್ಕೆ ಒಂದು ರನ್ ಗಳ ಅವಶ್ಯತೆ. ಹರ್ಷಲ್ ಅವರ ಐದನೇ ಎಸೆತವನ್ನ ದೊಡ್ಡ ಹೊಡೆತ ಹೊಡೆಯುವ ನಿಟ್ಟಿನಲ್ಲಿ ಉನಾದ್ಕತ್ ಫಾಫ್ ಗೆ ಕ್ಯಾಚ್ ಕೊಟ್ಟು ಔಟ್ ಆದರು. ಕೊನೆಯ ಒಂದು ಬಾಲ್ ನಲ್ಲಿ ಲಕ್ನೋ ತಂಡಕ್ಕೆ ಒಂದು ರನ್ ಬೇಕಿದ್ದರೆ, RCB ಗೆ ಕೇವಲ ಒಂದು ವಿಕೆಟ್. ಹೊಸ ದಾಂಡಿಗ ಆವೇಶ್ ಖಾನ್ ಬ್ಯಾಟಿಂಗ್ ನಲ್ಲಿ. ಕೊನೆಯ ಎಸೆತಕ್ಕೆ ಬಂದ ಹರ್ಷಲ್ ತಮ್ಮ ಎಸೆತಕ್ಕಿಂತಲೂ ಮುಂಚೆಯೇ ರನ್ ಓಡಲು ಸಿದ್ದರಿದ್ದ ಬಿಶ್ನೋಯ್ ಅವರನ್ನು ‘ಮಾನ್ಕಂಡ್’ ಮಾಡುವ ಮೂಲಕ ಔಟ್ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಬಾಲ್ ಅನ್ನು ವಿಕೆಟ್ ಗೆ ತಾಗಿಸಲಾಗದೇ, ವಿಫಲ ಯತ್ನವಾಗುತ್ತದೆ. ಕೊನೆಯ ಎಸೆತವನ್ನ ಆವೇಶ್ ಖಾನ್ ಅವರು ಬ್ಯಾಟ್ ತಾಗಿಸಲಾಗದಿದ್ದರೂ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲರಾದ್ದರಿಂದ ಒಂದು ರನ್ ಗಳಿಸಿ ಲಕ್ನೋ ತಂಡಕ್ಕೆ ರೋಮಾಂಚಕ ಜಯ ಒದಗಿಸಿದರು. ಕೂದಲೆಳೆಯ ಅಂತರದಲ್ಲಿ ಕೇವಲ ಒಂದು ವಿಕೆಟ್ ಗಳ ಅಪಜಯ RCB ತಂಡದ್ದಾಯಿತು.

ಒಂದು ಸಾರಿಗೆ ನಮ್ಮ ಬೆಂಗಳೂರು ತಂಡ ಆರಾಮದ ಜಯ ಸಾಧಿಸುತ್ತಾರೆ ಎನಿಸಿ, ಕೊನೆಯ ಬಾಲ್ ವರೆಗೆ ತಂದು ಸೋತಂತಹ ಈ ರೋಮಾಂಚಕ ಪಂದ್ಯದಿಂದ, ಗೆದ್ದರು ಸೋತರು RCB ಎಂಬ ಕಡಲಿನಂತೆ ಬಂದು ಕ್ರೀಡಾಂಗಣದಲ್ಲಿ ಸೇರಿದ್ದ, ಹಾಗು ವಿವಿಧ ಮೂಲೆಗಳಿಂದ ಪಂದ್ಯ ನೋಡುತ್ತಿದ್ದ RCB ಅಭಿಮಾನಿಗಳಿಗೆ ಕೊಂಚ ನಿರಾಸೆಯಾದದ್ದು ನಿಜ. ಆದರೂ RCB ತಂಡದ ಮೇಲಿನ ಅಭಿಮಾನ ಕಡಿಮೆಯಾಗುವುದಿಲ್ಲ. ತಂಡ ತನ್ನ ಮುಂದಿನ ಪಂದ್ಯವನ್ನ ಇದೆ ಏಪ್ರಿಲ್ 15ರಂದು ದೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಲಿದ್ದಾರೆ. ಆ ಪಂದ್ಯಕ್ಕೂ ಕೂದ ಕಿಕ್ಕಿರಿದು ಜನ ಸೇರುವುದಂತೂ ಖಚಿತ. ತುಂಬಿದ ಕ್ರೀಡಾಂಗಣದಲ್ಲಿ ಕೇಳಿ ಬರುವ “RCB! RCB!” ಎಂಬ ಕೂಗುಗಳನ್ನು ಕೇಳುವುದೇ ಒಂದು ಆನಂದ.

RELATED ARTICLES

Most Popular

Share via
Copy link
Powered by Social Snap