‘ಗೂಗ್ಲಿ’,’ನಟಸಾರ್ವಭೌಮ’ ರೀತಿಯ ಹಿಟ್ ಸಿನಿಮಾಗಳನ್ನ ಕನ್ನಡಿಗರಿಗೆ ನೀಡಿರುವಂತಹ ಸ್ಟಾರ್ ನಿರ್ದೇಶಕ ಪವನ್ ಒಡೆಯರ್ ಅವರ ಇತ್ತೀಚಿನ ಚಿತ್ರ ‘ರೇಮೋ’. ಇಶಾನ್ ಹಾಗು ಆಶಿಕಾ ರಂಗನಾಥ್ ನಾಯಕ ನಾಯಕಿಯಾಗಿ ತೆರೆಮೇಲೆ ಕಂಡಂತಹ ಈ ಸಿನಿಮಾ 2022ರ ನವೆಂಬರ್ ತಿಂಗಳ ಅಂತ್ಯಕ್ಕೆ ಚಿತ್ರಮಂದಿರಗಳಿಗೆ ಬಂದಿತ್ತು. ಸಂಗೀತದ ಸುಮಧುರ ಪ್ರೇಮಕತೆ ಎಂದು ಪ್ರಖ್ಯಾತಿ ಪಡೆದು, ಹಲವು ಸಿನಿಮಾಪ್ರೇಮಿಗಳ ಮನಗೆಲ್ಲುವಲ್ಲಿ ಈ ಸಿನಿಮಾ ಯಶಸ್ವಿಯಾಗಿತ್ತು. ತದನಂತರ ಚಿತ್ರ ಓಟಿಟಿಗೆ ಯಾವಾಗ ಬರುತ್ತದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಸದ್ಯ ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
‘ಜಯಾದಿತ್ಯ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಸಿ ಆರ್ ಮನೋಹರ್ ಅವರು ನಿರ್ಮಾಣ ಮಾಡಿದ್ದ ‘ರೇಮೋ’ ಸಿನಿಮಾ ತನ್ನ ಹಾಡುಗಳಿಂದಲೂ ಎಲ್ಲೆಡೆ ಪ್ರಖ್ಯಾತಿ ಪಡೆದಿತ್ತು. ಅರ್ಜುನ್ ಜನ್ಯ ಅವರ ಮನಮುಟ್ಟುವ ಸಂಗೀತವಿರುವ ಈ ಸಂಗೀತದ ಮೇಲೆಯೇ ನಿಂತಿರುವ ಸಿನಿಮಾದಲ್ಲಿನ ಹಾಡುಗಳು ಹಲವರ ನೆಚ್ಚಿನ ಹಾಡುಗಳ ಸಾಲಿಗೆ ಸೇರಿದ್ದವು. ‘ರೇಮೋ’ ಎಂಬ ಯಾರನ್ನು ಪರಿಗಣಿಸದ ತನ್ನಿಚ್ಚೆಯಂತೆ ಹೇಗೇ ಬೇಕೋ ಹಾಗೆ ಬದುಕುತ್ತಿರುವ ಒಬ್ಬ ‘ರಾಕ್ ಸ್ಟಾರ್’ ನ ಜೀವನದಲ್ಲಿ ‘ಮೋಹನ’ ಎಂಬ ಸಾಮಾನ್ಯ ಹುಡುಗಿಯ ಪ್ರವೇಶವಾಗುತ್ತದೆ. ಸಂಗೀತ ಇವರಿಬ್ಬರ ನಡುವಣ ಸೇತುವೆ. ನಂತರ ಇವರ ಜೀವನದಲ್ಲಿ ಆಗುವ ಬದಲಾವಣೆಗಳು, ಎದುರಾಗೋ ಸವಾಲುಗಳ ಸುತ್ತ ಕಥೆ ಸಾಗುತ್ತದೆ. ನಾಯಕ ನಾಯಕಿಯಾಗಿ ಇಶಾನ್ ಹಾಗು ಆಶಿಕಾ ಎಲ್ಲರ ಮೆಚ್ಚುಗೆ ಪಡೆದಿದ್ದರು. ಸದ್ಯ ಈ ಸಿನಿಮಾ ಓಟಿಟಿ ಕಡೆಗೆ ಹೊರಟಿದ್ದು, ಇದೇ ಮಾರ್ಚ್ 10ನೇ ತಾರೀಕಿನಿಂದ ‘ಜೀ5(ZEE5)’ ಆಪ್ ನಲ್ಲಿ ನೋಡಲು ಸಿಗಲಿದೆ.
ಇಶಾನ್ ಹಾಗು ಆಶಿಕಾ ಜೋಡಿಯ ಜೊತೆಯಲ್ಲಿ ಅಚ್ಯುತ್ ಕುಮಾರ್, ಆರ್ ಶರತ್ ಕುಮಾರ್, ಮಧು, ರಾಜೇಶ್ ನಟರಂಗ ಸೇರಿದಂತೆ ಹಲವು ಮೇರು ನಟರು ಸಿನಿಮಾದಲ್ಲಿದ್ದರು. ಹಲವು ಸಿನಿರಸಿಕರ ಮನ್ನಣೆ ಪಡೆದಿದ್ದ ಈ ಸಿನಿಮಾ, ಬಿಡುಗಡೆಯಾಗಿ ಬಹಳ ಕಾಲದ ನಂತರ ಓಟಿಟಿಗೆ ಹೊರಟಿದೆ. ಇದೇ ಮಾರ್ಚ್ 10ನೇ ತಾರೀಕಿನಿಂದ ಸಿನಿಮಾ ಜೀ 5 ಆಪ್ ನಲ್ಲಿ ಸಿಗಲಿದ್ದು, ಚಿತ್ರಮಂದಿರಗಳಲ್ಲಿ ನೋಡಲಾಗದ ಪ್ರೇಕ್ಷಕರು ಇನ್ನೇನು ಮನೆಯಲ್ಲೇ ಕುಳಿತು ಈ ಸುಂದರ ಸಂಗೀತ ಪ್ರೇಮಕತೆಯನ್ನ ನೋಡಬಹುದಾಗಿದೆ.

