ಪವನ್ ಒಡೆಯರ್ ‘ಗೂಗ್ಲಿ’ ಸಿನಿಮಾದಿಂದ ಮೋಡಿ ಮಾಡಿದ್ದು ಗೊತ್ತೇ ಇದೆ. ಭಿನ್ನವಾದ ಲವ್ ಸ್ಟೋರಿಯನ್ನು ಹೇಳಿದ್ದ ಪವನ್ ಈಗ ಮತ್ತೆ ಹೊಸಬಗೆಯ ಪ್ರೇಮ ಕಥೆಯನ್ನು ‘ರೇಮೊ’ ಮೂಲಕ ಹೇಳಲು ಹೊರಟಿದ್ದಾರೆ.
ಇದೊಂದು ಮ್ಯೂಸಿಕಲ್ ಪ್ರೇಮ ಕಥೆಯ ಚಿತ್ರವೆಂಬುದು ಪೋಸ್ಟರ್ ಗಳಿಂದಲೇ ತಿಳಿದಿತ್ತು. ಸಿನಿಮಾದ ಟ್ರೇಲರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಅವರು ರಿಲೀಸ್ ಮಾಡಿದ್ದಾರೆ.
ಟ್ರೇಲರ್ ರಿಲೀಸ್ ಮಾಡಿ ಮಾತಾನಾಡಿದ ಕರುನಾಡ ಚಕ್ರವರ್ತಿ ಶಿವಣ್ಣ’ ” ಕನ್ನಡ ಚಿತ್ರರಂಗ ಯಾರಿಗೂ ಕಡಿಮೆ ಇಲ್ಲ. “ಕಾಂತಾರ” ಚಿತ್ರ ನಮಗೆಲ್ಲ ಒಂದು ಹೆಮ್ಮೆ. ಆ ಚಿತ್ರದ ಟ್ರೇಲರ್ ಮತ್ತು ಸಾಂಗ್ ನೋಡಿ ನಾನು ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿದ್ದೆ. ‘ರೇಮೊ’ ಕೂಡ ಅದೇ ರೀತಿ ಸೂಪರ್ ಹಿಟ್ ಆಗಲಿ ಅಂತ ದೇವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಇಶಾನ್ ಹಾಗೂ ಆಶಿಕಾ ಮುದ್ದಾಗಿ ಕಾಣುತ್ತಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಬಗ್ಗೆ ಹೇಳುವಂತೆಯೇ ಇಲ್ಲ. ಸಿ.ಆರ್. ಮನೋಹರ್ ಅವರಂತಹ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬೇಕು’ ಎಂದು ಹೇಳಿದರು.
ನಟ ಇಶಾನ್ ಮಾತಾನಾಡಿ’ “ರೇಮೊ’ ಚಿತ್ರದ ಕೆಲಸ ಶುರುವಾಗಿ 3 ವರ್ಷ ಆಯಿತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ನನ್ನನ್ನು ಚಿತ್ರರಂಗಕ್ಕೆ ಬರಲು ಹೇಳಿದ್ದು ಶಿವಣ್ಣ. ಇವತ್ತು ಅವರಿಂದಲೇ ನಮ್ಮ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಖುಷಿಯಾಗಿದೆ. ನವೆಂಬರ್ 25 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಅಂದೇ ನಮ್ಮ ಚಿತ್ರವನ್ನು ನೋಡುವುದಾಗಿ ಶಿವಣ್ಣ ಹೇಳಿದ್ದಾರೆ. ಅವರೇ ನನಗೆ ಸ್ಫೂರ್ತಿ. ನಾನು ಎಷ್ಟೇ ಸಿನಿಮಾ ಮಾಡಬಹುದು. ಆದರೆ ‘ರೇಮೊ’ ಚಿತ್ರ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ ಎಂದು ಹೇಳಿದರು.
‘ಇಷ್ಟು ದಿನ ನನ್ನನ್ನು ಕ್ಯೂಟ್ ಹುಡುಗಿಯ ಪಾತ್ರದಲ್ಲಿ ನೋಡಿದ್ದೀರಿ. ಆದರೆ ಈ ಸಿನಿಮಾದಲ್ಲಿನ ಪಾತ್ರ ಭಿನ್ನವಾಗಿದೆ. ಈವರೆಗೆ ನಾನು ಮಾಡಿದ ಪಾತ್ರಗಳಲ್ಲಿ ಇದೇ ಬೆಸ್ಟ್. ಹೀರೋಗೆ ಸಮನಾಗಿ ಇರುವಂತಹ ಪಾತ್ರ ನನಗೆ ಸಿಕ್ಕಿದೆ. ಅದಕ್ಕೆ ನನ್ನನ್ನು ಆಯ್ಕೆ ಮಾಡಿದ ಪವನ್ ಒಡೆಯರ್ ಅವರಿಗೆ ಧನ್ಯವಾದಗಳು’ ಎನ್ನುತ್ತಾರೆ ಆಶಿಕಾ ರಂಗನಾಥ್.


ನಿರ್ದೇಶಕ ಪವನ್ ಒಡೆಯರ್ ಮಾತಾನಾಡಿ, “ಪ್ರೀತಿಯಲ್ಲಿ ಹಲವು ವಿಧಗಳಿದೆ. ಅದರಲ್ಲಿ ನಾನು ಮ್ಯೂಸಿಕಲ್ ಲವ್ ಸ್ಟೋರಿ ಆಯ್ಕೆ ಮಾಡಿಕೊಂಡಿದ್ದೀನಿ. ಈ ಚಿತ್ರದಲ್ಲಿ ಎಮೋಷನ್ ಸಹ ಇದೆ. ವೈದಿ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರವನ್ನು ಮತ್ತಷ್ಟು ಸುಂದರವಾಗಿಸಿದೆ. ಇಶಾನ್ ಹಾಗೂ ಆಶಿಕಾ ರಂಗನಾಥ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದ ಎಂದರು.
ನಾಯಕ – ನಾಯಕಿ ಇಲ್ಲಿ ಗಾಯಕರು. ರೇವಂತ್ ಹಾಗೂ ಮೋಹನಾ ನಡುವಿನ ಪ್ರೇಮಯಾನಕ್ಕೆ ಜೊತೆಯಾಗುವುದು ಹಾಡು. ಇದನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಆ್ಯಕ್ಷನ್ ಸೀನ್ ಗಳಲ್ಲಿ ಇಶಾನ್ ಅಬ್ಬರಿಸಿದ್ದಾರೆ.
ಹೊಸ ರೀತಿಯ ಟ್ರೇಲರ್ ಸದ್ದು ಮಾಡುತ್ತಿದ್ದು 14 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.
ಅರ್ಜುನ್ ಜನ್ಯ ಮ್ಯೂಸಿಕ್ ನೀಡಿರುವ ‘ರೇಮೊ’ ಇದೇ ನವೆಂಬರ್ 25 ರಂದು ತೆರೆಗೆ ಬರಲಿದೆ.

