ಸದ್ಯ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಯಾರು ಎಂದರೆ, ಆ ಸಾಲಿನಲ್ಲಿ ಮೊದಲು ಬರುವ ಹೆಸರು ರಶ್ಮಿಕಾ ಮಂದಣ್ಣ ಅವರದು. ಸ್ಯಾಂಡಲ್ವುಡ್ ನ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ನಂತರ ತೆಲುಗು, ತಮಿಳು ಮಾತ್ರವಲ್ಲದೆ ಇದೀಗ ಬಾಲಿವುಡ್ ನಲ್ಲೂ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ತನ್ನ ಬೇಡಿಕೆಯನ್ನ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನ ನೀಡುತ್ತಿರುವ ‘ನ್ಯಾಷನಲ್ ಕ್ರಶ್’ ಪಟ್ಟದರಸಿ ರಶ್ಮಿಕಾ ಮಂದಣ್ಣ ಇದೀಗ ವಿದೇಶೀ ಕಂಪನಿಯೊಂದರ ಅಧಿಕೃತ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಜಪಾನ್ ಮೂಲದ ‘ಒನಿಟ್ಸುಕಾ ಟೈಗರ್(Onitsuka Tiger)’ ಎಂಬ ಪ್ರತಿಷ್ಟಿತ ಕಂಪನಿಯೊಂದಕ್ಕೆ ಬ್ರಾಂಡ್ ಅಂಬಾಸಡರ್ ಆಗಿ ರಶ್ಮಿಕಾ ಮಂದಣ್ಣ ಅವರನ್ನ ಆರಿಸಲಾಗಿದೆ. ಇದೊಂದು ಸ್ಪೋರ್ಟ್ಸ್ ಫ್ಯಾಷನ್ ಬ್ರಾಂಡ್ ಆಗಿದ್ದು, ಸದ್ಯ ಈ ಕಂಪನಿಯ 2023ರ ‘ಸ್ಪ್ರಿಂಗ್-ಸಮ್ಮರ್ ಕಲೆಕ್ಷನ್’ ಅನ್ನು ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಪರಿಚಯಿಸಿದ್ದಾರೆ. ಜಪಾನಿ ಲುಕ್ ಅನ್ನು ನೀಡುವಂತಹ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಈ ಕಂಪನಿಯ ನೂತನ ಉಡುಪುಗಳನ್ನು ಧರಿಸಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜಪಾನಿ ಶೈಲಿಯ, ವಿಭಿನ್ನವಾಗಿ ಕಾಣುವ ನಾಲ್ಕೈದು ಫೋಟೋಗಳನ್ನು ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಅವುಗಳನ್ನು ಕೊಂಡಾಡುತ್ತಿದ್ದಾರೆ. ಈ ಮೂಲಕ ರಶ್ಮಿಕಾ ಮಂದಣ್ಣ ಜಪಾನಿ ಮೂಲದ ಈ ‘ಒನಿಟ್ಸುಕಾ ಟೈಗರ್’ ಕಂಪನಿಯ ವಿಭಿನ್ನ ರೀತಿಯ ಉಡುಪುಗಳ ಸಂಗ್ರಹವನ್ನು ಇಲ್ಲಿ ಪರಿಚಯಿಸಿ, ಬ್ರಾಂಡ್ ಅಂಬಾಸಡರ್ ಆಗಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಸದಾ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ತಮ್ಮ ಮಹಿಳಾ ಪ್ರಧಾನ ಸಿನಿಮಾ ‘ರೈನ್ ಬೋ’ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಇದಲ್ಲದೆ ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಅವರ ಜೊತೆಗಿನ ‘ಅನಿಮಲ್’ ಹಾಗು ಟೈಗರ್ ಶ್ರಾಫ್ ಅವರ ಜೊತೆಗೂ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದು, ಖ್ಯಾತ ನಟ ವಿಕ್ಕಿ ಕೌಷಲ್ ಅವರ ಜೊತೆಗೇ ಶಿವಾಜಿ ಸಾಮ್ರಾಜ್ಯಕ್ಕೆ ಸಂಭಂದ ಪಟ್ಟಂತಹ ಸಿನಿಮಾವೊಂದರಲ್ಲಿ ಕೂಡ ನಟಿಸಬಹುದು ಎನ್ನಲಾಗುತ್ತಿದೆ. ಇನ್ನು ಇವರ ನಟನೆಯ ಬಹುನಿರೀಕ್ಷಿತ ‘ಪುಷ್ಪಾ 2’ ಕೂಡ ಬಿರುಸಿನ ತಯಾರಿಯಲ್ಲಿದೆ. ಅಂತೇ ಸಿನಿಮಾದಲ್ಲಷ್ಟೇ ಅಲ್ಲದೇ, ಫ್ಯಾಷನ್ ವಿಭಾಗದಲ್ಲೂ ಬಾರೀ ಸದ್ದು ಮಾಡುತ್ತಿದ್ದಾರೆ ‘ನ್ಯಾಷನಲ್ ಕ್ರಶ್’.

