ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದ್ಯ ದಳಪತಿ ವಿಜಯ್ ಅವರ ‘ವಾರಿಸು’ ಸಿನಿಮಾಕ್ಕೆ ಕೇಳಿ ಬರುತ್ತಿರುವ ಪ್ರತಿಕ್ರಿಯೆ ಕೇಳಿ ಖುಷಿಯಾಗಿದ್ದಾರೆ.
ವರ್ಷದ ಮೊದಲ ಹಿಟ್ ನತ್ತ ರಶ್ಮಿಕಾ ಸಾಗುತ್ತಿದ್ದಾರೆ. ಈ ನಡುವೆ ಅವರ ಮುಂದಿನ ಸಿನಿಮಾ ಬಾಲಿವುಡ್ ನ ‘ಮಿಷನ್ ಮಜ್ನು’ ಸಿನಿಮಾವೂ ಇದೇ ಜ.20 ರಂದು ಓಟಿಟಿಯಲ್ಲಿ ರಿಲೀಸ್ ಆಗಲಿದೆ.
ಕಳೆದ ವರ್ಷ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಹಿಟ್ ತಂದುಕೊಟ್ಟ ‘ಪುಷ್ಪ’ ಸಿನಿಮಾದ ಮುಂದಿನ ಭಾಗದಲ್ಲಿ ರಶ್ಮಿಕಾ ಮಂದಣ್ಣ ನಟಿಸಲ್ಲ ಎನ್ನುವ ಅವರು ಸಿನಿಮಾದಿಂದ ಹೊರ ಬಿದ್ದಿದ್ದಾರೆ ಎನ್ನುವ ಸುದ್ದಿಯೊಂದು ಇತ್ತೀಚೆಗೆ ಹಬ್ಬಿತ್ತು.
ಶ್ರೀವಲ್ಲಿಯಾಗಿ ಮನ ಕದ್ದಿದ್ದ ಕೊಡಗಿನ ಚೆಲುವೆಗೆ ಅಪಾರ ಅಭಿಮಾನಿಗಳು ಟಾಲಿವುಡ್ ನಲ್ಲಿ ಸೃಷ್ಟಿಯಾಗಿದ್ದಾರೆ. ‘ಪುಷ್ಪ -2’ ದಲ್ಲಿ ರಶ್ಮಿಕಾ ಜಾಗಕ್ಕೆ ಸಾಯಿ ಪಲ್ಲವಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.
ಇದೀಗ ಈ ಬಗ್ಗೆ ಸ್ವತಃ ರಶ್ಮಿಕಾ ಅವರೇ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ʼಮುಂದಿನ ತಿಂಗಳು ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದೇನೆ. ಪುಷ್ಪ-2 ನಲ್ಲಿ ಏನೆಲ್ಲಾ ಇದೆ ಎನ್ನುವುದನ್ನು ನೋಡಲು ತುಂಬಾ ಉತ್ಸುಕಳಾಗಿದ್ದೇನೆ” ಎಂದಿದ್ದಾರೆ.
ಆ ಮೂಲಕ ಇದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

