ಸಾಮಾಜಿಕ ಕಳಕಳಿ ಮೆರೆವ ಅದೆಷ್ಟೋ ಸಿನಿಮಾಗಳು ನಮ್ಮ ಕನ್ನಡ ಚಿತ್ರರಂಗದಿಂದ ಬಂದು, ಜನರ ಮನಗೆದ್ದಿವೆ. ಅಂತದ್ದೇ ಇನ್ನೊಂದು ಹೊಸ ಸಿನಿಮಾ ‘ರಂಜಾನ್’. ಈ ಚಿತ್ರ ಹಿರಿಯ ಲೇಖಕರಾದ ಫಕೀರ್ ಮೊಹಮ್ಮದ್ ಕಟ್ಪಾಡಿ ಅವರು ಬರೆದಿರುವ ‘ನೊಂಬು’ ಎಂಬ ಕಥೆಯನ್ನ ಆಧರಿಸಿ ಮಾಡಲಾಗಿದೆ. ರಾಜ್ಯ ಹಾಗು ರಾಷ್ಟ್ರಪ್ರಶಸ್ತಿಗಳನ್ನ ಗೆದ್ದಿರುವ ಪಂಚಾಕ್ಷರಿ ಸಿ ಅವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ, ಸಂಗಮೇಶ ಉಪಾಸೆ ಅವರು ಮೊದಲ ಬಾರಿಗೆ ನಾಯಕರಾಗಿ ನಟಿಸಿದ್ದಾರೆ. ಜನಪ್ರಿಯ ಕಿರುತೆರೆ ಧಾರವಾಹಿಯಾಗಿದ್ದ ‘ಸಿಲ್ಲಿ ಲಲ್ಲಿ’ ಜೊತೆಗೇ ಸುಮಾರು 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿರುವ ಕೀರ್ತಿ ಸಂಗಮೇಶ ಅವರದ್ದು. ಅಷ್ಟೇ ಅಲ್ಲದೇ ‘ರಂಜಾನ್’ ಸಿನಿಮಾದ ಚಿತ್ರಕತೆ ಸಂಭಾಷಣೆ ಹಾಗು ಸಾಹಿತ್ಯ ಕೂಡ ಸಂಗಮೇಶ ಉಪಾಸೆ ಅವರದ್ದೇ. ಸದ್ಯ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರೋ ಈ ಸಿನಿಮಾದ ನಾಲ್ಕು ಹಾಡುಗಳು ಹಾಗು ಟ್ರೈಲರ್ ಅನ್ನು ‘ರೇಣುಕಾಂಬ ಸ್ಟುಡಿಯೋಸ್’ನಲ್ಲಿ ಬಿಡುಗಡೆ ಮಾಡಲಾಯಿತು.


‘ಯೂನಿವರ್ಸಲ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಮಡಿವಾಳಪ್ಪ ಎಂ ಗೂಗಿ ಅವರು ಮೊದಲ ಬಾರಿಗೆ ನಿರ್ಮಾಣ ಮಾಡಿರುವ ‘ರಂಜಾನ್’ ಸಿನಿಮಾ ಹಲವು ಸೂಕ್ಷ್ಮ ವಿಚಾರಗಳತ್ತ ಬೆಳಕು ಚೆಲ್ಲಲಿದೆ. ಉಳ್ಳವರು ಹಾಗು ಇಲ್ಲದವರ ನಡುವಿನ ವ್ಯತ್ಯಾಸ ತೋರುತ್ತಾ, ಹಿಂದುಳಿದವರ ಶಿಕ್ಷಣ, ಊಟ, ನಿವಾಸ ಇದಷ್ಟೇ ಅಲ್ಲದೇ, ಬಡವರ, ದಲಿತರ, ಹಸಿದವರ ಬಗೆಗಿನ ವಿಚಾರಗಳನ್ನ ಸಿನಿಮಾದಲ್ಲಿ ನೋಡಬಹುದಾಗಿದೆ. ಅಲ್ಲದೇ ಇಸ್ಲಾಂ ಸಮುದಾಯದ ಐದು ಮೂಲಭೂತ ತತ್ವಗಳಾದ ಕಲ್ಮ, ರೋಜಾ, ನಮಾಜ್, ಜಕಾತ್, ಹಜ್ ಗಳ ಪ್ರಾಮುಖ್ಯತೆ ಹಾಗು ಪರಿಪಾಲನೆಯ ಬಗೆಗೂ ತಿಳಿಸುವ ಪ್ರಯತ್ನ ಸಿನಿಮಾದಲ್ಲಾಗಿದೆ. ಈ ‘ರಂಜಾನ್’ ಚಿತ್ರದ ಪೋಸ್ಟರ್ ಗಳನ್ನೂ ಸ್ವಾಮಿಗಳು, ಮೌಲ್ವಿಗಳು ಹಾಗು ಪಾದ್ರಿಗಳೆಲ್ಲರ ಮೂಲಕ ಬಿಡುಗಡೆ ಮಾಡಿದ್ದು ವಿಶೇಷವೇ ಸರಿ.
ಸಿನಿಮಾದಲ್ಲಿ ಪತ್ನಿಯ ಪಾತ್ರದಲ್ಲಿ ಪ್ರೇಮಾವತಿ ಉಪಾಸೆ, ಮಗಳು ಹಾಗು ಮಗನಾಗಿ ಬೇಬಿ ಈಶಾನಿ ಉಪಾಸೆ ಹಾಗು ಮಾಸ್ಟರ್ ವೇದಿಕ್ ಬಣ್ಣ ಹಚ್ಚಿದ್ದು, ಭಾಸ್ಕರ್ ಮಣಿಪಾಲ್, ಮಾಸ್ಟರ್ ನೀಲ್, ಜಯಲಕ್ಷ್ಮಿ ಮಧುರಾಜ್ ಮುಂತಾದವರು ಕಥೆಯ ಪ್ರಮುಖ ಪಾತ್ರಗಳಾಗಿದ್ದಾರೆ. ಚಿತ್ರಕ್ಕೆ ಇಂದ್ರ ಅವರ ಸಂಗೀತವಿದ್ದು ರಂಗಸ್ವಾಮಿ ಜಿ ಅವರ ಛಾಯಾಗ್ರಾಹಣವಿದೆ. ಮಂಗಳೂರು, ಉಡುಪಿ, ಕುಂದಾಪುರ, ಕಟ್ಪಾಡಿ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದಾರೆ. ಸೆನ್ಸಾರ್ ಮಂಡಳಿಯಿಂದ ‘U’ ಸರ್ಟಿಫಿಕೇಟ್ ಪಡೆದಿರುವ ಈ ‘ರಂಜಾನ್’ ಚಿತ್ರ ಏಪ್ರಿಲ್ ನಲ್ಲಿ ಬೆಳ್ಳಿತೆರೆಗಳ ಮೇಲೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.



